Fact Check | ಪಾಕಿಸ್ತಾನ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದು ಸುಳ್ಳು

ಪಾಕಿಸ್ತಾನದ ಸೈನಿಕರು ಹಿಂದೂ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.ಈ ವಿಡಿಯೋದ ಜೊತೆಗೆ “ಇಸ್ಲಾಂ ಎಂದರೆ ಹೀಗೆನೇ. ಇದನ್ನೆ ಕಾಂಗ್ರೆಸ್ ಜಾತ್ಯಾತೀತತೆ ಎಂದು ಹೇಳುತ್ತದೆ. ಇಸ್ಲಾಮಿಕ್ ಮದರಸಾ ಜಿಹಾದ್ ಭಯೋತ್ಪಾದನೆಯು ಬಲೂಚ್ ಹಿಂದೂ ಮಗುವನ್ನು ಸರಪಳಿಯಲ್ಲಿ ಕಟ್ಟಿ ಹೇಗೆ ಚಿತ್ರಹಿಂಸೆ ನೀಡುತ್ತಿದೆ ನೋಡಿ. ಅಂತಹ ಭಾರತವನ್ನು ನಿರ್ಮಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ಮೈತ್ರಿಯು ಹವಣಿಸುತ್ತಿದೆ. ಯಾರೂ ಮೋಸ ಹೋಗಬೇಡಿ” ಎಂಬ ಬರಹದೊಂದಿಗೆ ಮಗುವಿನ ಕುತ್ತಿಗೆಗೆ ಸರಪಳಿ ಸುತ್ತಿ ನೇತುಹಾಕಿ ಚಿತ್ರಹಿಂಸೆ ನೀಡುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ವಿಡಿಯೋವನ್ನು ಇನ್‌ಸ್ಟಾಗ್ರಾಮ್  ಬಳಕೆದಾರರು ಹಂಚಿಕೊಂಡಿದ್ದು, “ಪಾಕಿಸ್ತಾನಿ ಸೇನೆಯು ಪಾಕಿಸ್ತಾನಿ ಹಿಂದೂ ಮಕ್ಕಳನ್ನು ಕಬ್ಬಿಣದ ಸರಪಳಿಯಲ್ಲಿ ಕಟ್ಟಿ ಬಿಸಿಲಿನಲ್ಲಿ ನೇತುಹಾಕಿ ಚಿತ್ರಹಿಂಸೆ ನೀಡುತ್ತಿದೆ. ಮಗು ನೋವಿನಿಂದ ಅಳುತ್ತಿದೆ. ಇಸ್ಲಾಮೋಫೋಬಿಯಾ ಬಗ್ಗೆ ಬಾಯಿ ಬಡಿದುಕೊಳ್ಳುವವರು ಇಸ್ಲಾಂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಅತಿರೇಕದ ಹಿಂದೂಫೋಬಿಯಾ ಬಗ್ಗೆ ತುಟಿ ಬಿಚ್ಚುವುದಿಲ್ಲ. ಮಗು ಈ ರೀತಿ ಅಳುವುದನ್ನು ನೋಡಿ ನನಗೆ ಕಣ್ಣೀರು ಬರುತ್ತದೆ.” ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಆರ್ಕೈವ್‌ ಲಿಂಕ್‌ ಇಲ್ಲಿ ನೋಡಬಹುದು..

ಫ್ಯಾಕ್ಟ್‌ಚೆಕ್‌

ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ARY News ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ಈ ವರದಿಯಲ್ಲಿ ಡಕಾಯಿತರ ಗುಂಪಿನ ಸದಸ್ಯರಾದ ಫರೀದ್ ಮಿರಾನಿ ಮತ್ತು ಯಾಕೂಬ್ ಮಿರಾನಿ ಎಂಬ ಡಕಾಯಿತರು, ಅಯಾಜ್ ಪಠಾಣ್ ಎಂಬ ಮುಸ್ಲಿಂ ಮಗುವನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದರು. ಅಪಹರಣದ ಇಪ್ಪತ್ತಾರು ದಿನಗಳ ನಂತರ, ಪೊಲೀಸರು ಆ ಮಗುವನ್ನು ರಕ್ಷಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ವಾಯ್ಸ್‌ ಲರ್ಕಾನ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಈ ಘಟನೆಯ ಕುರಿತು ವರದಿ ಮಾಡಿರುವುದು ಕಂಡು ಬಂದಿದೆ. ಮಗುವಿನ ಹೆಸರನ್ನು ಅಯಾಜ್ ಪಠಾಣ್ ಎಂದು ಗುರುತಿಸಿದ್ದು. ಡಕಾಯಿತರಿಂದ ಒತ್ತೆಯಾಳಾಗಿರುವ ಮಗುವನ್ನು ಜೋಪಾನವಾಗಿ ಕರೆತರುವಲ್ಲಿ ಪೊಲೀಸರು ವಿಳಂಬ ಮಡುತ್ತಿದ್ದಾರೆ ಎಂದು ಆರೋಪಿಸಿ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು ಎಂದು ವರದಿಯಾಗಿದೆ.

ಇನ್ನು ಇಂಡಿಪೆಂಡೆಂಟ್‌ ಉರ್ದು ಎಂಬ ಸುದ್ದಿ ಮಾಧ್ಯಮ ಮಾಡಿದ ವರದಿಯ ಪ್ರಕಾರ ಈ ಘಟನೆ ನಡೆದಾಗ, ಮಗುವಿನ ತಂದೆ ಮನೆಯೊಳಗೆ ಪ್ರಾರ್ಥನೆ ಮಾಡುತ್ತಿದ್ದರು, ಮಗು ಹೊರಗೆ ಆಟವಾಡುತ್ತಿತ್ತು. ಇದ್ದಕ್ಕಿದ್ದಂತೆ ಇಬ್ಬರು ಶಸ್ತ್ರಧಾರಿ ವ್ಯಕ್ತಿಗಳು ಬಂದು ಮಗನನ್ನು ಅಪಹರಿಸಿದರು. ಸಂಜೆ ಅಪಹರಣಕಾರರು ಆತನಿಗೆ ಕರೆ ಮಾಡಿ, ನಿನ್ನ ಮಗು ಬದುಕಿ ಬರಬೇಕೆನ್ನುವ ಆಸೆ ಇದ್ದರೆ 50 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದು ಮಗುವಿನ ತಂದೆ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಈ ಘಟನೆಯ ಕುರಿತು ಭಾರತದ ಸುದ್ದಿ ಮಾಧ್ಯಮವಾದ ಇಂಡಿಯಾ ಟುಡೆ ಕೂಡ ವರದಿಯನ್ನು ಮಾಡಿದ್ದು, ಈ ಘಟನೆಗೆ ಸಂಬಂಧ ಪಟ್ಟಂತೆ  ಅಪಹರಣಕ್ಕೊಳಗಾದ ಮಗು ಹಿಂದೂ ಅಲ್ಲ ಮುಸ್ಲಿಂ ಎಂದು ಪತ್ತೆ ಮಾಡಿದೆ. ಇನ್ನು ಇದರ ಬಗ್ಗೆ ಖಚಿತ ಪಡಿಸಿಕೊಳ್ಳಲು ಇಂಡಿಯಾ ಟುಡೆ ಸಂಸ್ಥೆ ಪಾಕಿಸ್ತಾನದ ಕಾಶ್ಮೋರ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP), ಬಶೀರ್ ಅಹ್ಮದ್ ಬ್ರೋಹಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು ಮಗು ಹಿಂದೂ ಅಲ್ಲ ಎಂದಿದ್ದಾರೆ.

ಹಾಗೆಯೇ ಇಸ್ಲಾಮಾಬಾದ್ ಮೂಲದ ಪತ್ರಕರ್ತ ಸಾಜಿದ್ ಮಿರ್ ಕೂಡ ಇದನ್ನು ದೃಢಪಡಿಸಿದ್ದು,“ಈ ಘಟನೆಯಲ್ಲಿ ಅಪಹರಣಕ್ಕೊಳಗಾದ ಮಗು ಮುಸ್ಲಿಂ. ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.” ಎಂದು ಖಚಿತಪಡಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅಪಹರಣಕ್ಕೊಳಗಾಗಿ ಚಿತ್ರ ಹಿಂಸೆ ಅನುಭವಿಸಿದ ಮಗು ಹಿಂದೂ ಅಲ್ಲ ಮುಸ್ಲಿಂ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ವೈರಲ್ ಸಂದೇಶ ಸುಳ್ಳಾಗಿದೆ.


ಇದನ್ನೂ ಓದಿ : ಬೆಂಗಳೂರಿನಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಲಾಗಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : ಬೆಂಗಳೂರಿನಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *