ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು

ಲೋಕಸಭಾ ಚುನಾವಣೆಯ ಅಂಗವಾಗಿ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ಮೋದಿಯವರು “ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ.  ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಜಗತ್ತು ಮಹಾನ್ ನಾಯಕನ ಬಗ್ಗೆ ಜಾಗೃತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಭಾರತೀಯ ರಾಜಕೀಯ ನಾಯಕರ ಜವಾಬ್ದಾರಿಯಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರು ವಿಶ್ವಾದ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದರೆ, ಮಹಾತ್ಮ ಗಾಂಧಿಯನ್ನು ವಿಶ್ವಪ್ರಸಿದ್ಧ ವ್ಯಕ್ತಿಯಾಗಿ ಮಾಡಲು ಭಾರತವು ಉತ್ತಮವಾಗಿ ‘ಕೆಲಸ’ ಮಾಡಬೇಕಿತ್ತು ಎಂದು ವಿಶ್ವವನ್ನು ಸುತ್ತಿದ ನಂತರ ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಬ್ರಿಟಿಷ್ ನಿರ್ದೇಶಕ ರಿಚರ್ಡ್ ಅಟೆನ್‌ಬರೋ ಅವರ ಅಕಾಡೆಮಿ ಪ್ರಶಸ್ತಿ ವಿಜೇತ 1982 ರಲ್ಲಿ ಬಿಡುಗಡೆಯಾದ ‘ಗಾಂಧಿ’ ಸಿನಿಮಾದ ಕುರಿತು ಪ್ರಧಾನಿ ಮಾತನಾಡಿದ್ದಾರೆ. ಅದಕ್ಕೂ ಮೊದಲು ಗಾಂಧಿ ಬಗ್ಗೆ ಜಗತ್ತಿಗೆ ಪರಿಚಯವಿರಲಿಲ್ಲವೇ ಎಂದು ಹುಡುಕಾಡಿದಾಗ ಟ್ವಿಟರ್‌ನಲ್ಲಿ SamSays ಎಂಬುವವರ ಖಾತೆಯಲ್ಲಿ ಈ ಕುರಿತು ಅಪರೂಪದ ದಾಖಲೆಗಳು ಕಂಡುಬಂದಿವೆ. ಗಾಂಧಿ ನೇತೃತ್ವದಲ್ಲಿ ನಡೆದ 1930ರ ದಂಡಿ ಯಾತ್ರೆಯು ಪ್ರಪಂಚದೆಲ್ಲೆಡೆ ಸುದ್ದಿಯಾಗಿತ್ತು ಎಂದು ಪತ್ರಿಕಾ ಫೋಟೊವನ್ನು ಅವರು ಟ್ವೀಟ್ ಮಾಡಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು “Gandhi makes Salt” ಎಂಬ ಶೀರ್ಷಿಕೆಯಲ್ಲಿ ಹೋರಾಟವನ್ನು ವರದಿ ಮಾಡಿತ್ತು. ಅಲ್ಲದೇ ಭಾರತದ ಸ್ವಾತಂತ್ರ್ಯ ಹಕ್ಕಿನ ಕುರಿತು ಗಾಂಧೀಯವರ ಮನವಿಯನ್ನು ಸಹ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಅದನ್ನು ಈ ಕೆಳಗಿನ ಚಿತ್ರದಲ್ಲಿ ನೋಡಬಹುದು.

1931ರಲ್ಲಿ ಟೈಮ್ ನಿಯತಕಾಲಿಕವು “ಟೈಮ್ ವರ್ಷದ ವ್ಯಕ್ತಿ” ಎಂದು ಗಾಂಧೀಜಿಯವರನ್ನು ಗುರುತಿಸಿತ್ತು. ಅವರ ಭಾವಚಿತ್ರಗಳನ್ನು ತನ್ನ ಮುಖಪುಟಗಳಲ್ಲಿ ಪ್ರಕಟಿಸಿತ್ತು.

ಪ್ರಖ್ಯಾತ ನಟ, ನಿರ್ದೇಶ ಚಾರ್ಲಿ ಚಾಪ್ಲಿನ್ ರವರು 1931ರಲ್ಲಿ ಗಾಂಧೀಜಿಯವರನ್ನು ಭೇಟಿಯಾಗಿದ್ದರು.

ಆಲ್ಬರ್ಟ್ ಐನ್ ಸ್ಟೈನ್ ಗಾಂಧಿಯ ಅಭಿಮಾನಿಯಾಗಿದ್ದರು. ಅವರು 1931 ರಲ್ಲಿ ಗಾಂಧೀಜಿಗೆ ಪತ್ರ ಬರೆದಿದದ್ದರು. ಅಲ್ಲದೇ ಅವರು ಪ್ರಿನ್ಸ್‌ಟನ್‌ನಲ್ಲಿದ್ದಾಗ, ಅವರು ತಮ್ಮ ಮನೆಯಲ್ಲಿ ಗಾಂಧಿಯವರ ಚಿತ್ರವನ್ನು ಹಾಕಿಕೊಂಡಿದ್ದರು.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಗಾಂಧಿ ಅವರನ್ನು ‘ಮಾರ್ಗದರ್ಶಿ ಬೆಳಕು’ ಎಂದು ಕರೆದಿದ್ದರು.

ಗಾಂಧೀಜಿಯವರ ನಿಧನಕ್ಕೆ ಜಗತ್ತಿನಾದ್ಯಂತ ಸಂತಾಪ ಸೂಚಿಸಲಾಯಿತು. ಅವರನ್ನು ಲಂಡನ್ ಟೈಮ್ಸ್ “ಭಾರತವು ತಲೆಮಾರುಗಳಿಂದ ನಿರ್ಮಿಸಿದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಶ್ಲಾಘಿಸಿತ್ತು.

ಭಾರತದ ಹೊರಗೆ ಗಾಂಧಿಯವರ ಭಾವಚಿತ್ರ ಹೊಂದಿರುv ಅಂಚೆಚೀಟಿಗಳನ್ನು 1961 ರಲ್ಲಿ ಅಮೆರಿಕವು ‘ಚಾಂಪಿಯನ್ ಆಫ್ ಲಿಬರ್ಟಿ’ ಸರಣಿಯ ಭಾಗವಾಗಿ ಬಿಡುಗಡೆ ಮಾಡಿತ್ತು. ರಿಪಬ್ಲಿಕ್ ಆಫ್ ಕಾಂಗೋ 1967 ರಲ್ಲಿ ಗಾಂಧಿ ಚಿತ್ರದ ಸ್ಟ್ಯಾಂಪ್ ಅನ್ನು ಬಿಡುಗಡೆ ಮಾಡಿತು. 1969 ರ ಬ್ರಿಟಿಷ್ ಅಂಚೆಚೀಟಿಯಲ್ಲಿ ಗಾಂಧಿ ಭಾವಚಿತ್ರ ಬಳಸಲಾಗಿದ್ದು, ಆ ಗೌರವ ಪಡೆದ ಮೊದಲ ಸಾಗರೋತ್ತರ ವ್ಯಕ್ತಿ ಗಾಂಧೀಜಿಯವರಾಗಿದ್ದಾರೆ.

ಲಂಡನ್‌ನ ಟ್ಯಾವಿಸ್ಟಾಕ್ ಚೌಕದ ಮಧ್ಯಭಾಗದಲ್ಲಿರುವ ಗಾಂಧಿ ಪ್ರತಿಮೆಯನ್ನು 1968 ರಲ್ಲಿ ಅನಾವರಣಗೊಳಿಸಲಾಯಿತು. ಇದನ್ನು ಇಂಗ್ಲೆಂಡ್‌ನ ರಾಷ್ಟ್ರೀಯ ಪರಂಪರೆಯ ಪಟ್ಟಿಯಲ್ಲಿ ಪಟ್ಟಿಮಾಡಲಾಗಿದೆ.

1969 ರಲ್ಲಿ ಗಾಂಧೀಜಿಯವರ ಜನ್ಮ ಶತಮಾನೋತ್ಸವದಂದು ವಿಶ್ವದ 40 ದೇಶಗಳು ಗಾಂಧಿ ಭಾವಚಿತ್ರ ಒಳಗೊಂಡಿರುವ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದವು.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ವರ್ಣ ಬೇಧ ನೀತಿಯ ವಿರುದ್ಧ ದನಿಯೆತ್ತಿದ್ದರು. ಭಾರತಕ್ಕೆ ಮರಳಿದ ಬಳಿಕ ಸ್ವಾತಂತ್ರ್ಯ ಚಳವಳಿಯನ್ನು ತಮ್ಮನ್ನು ಅರ್ಪಿಸಿಕೊಂಡರು. ಅಸಹಕಾರ ಚಳವಳಿ, ಕಾನೂನು ಭಂಗ ಚಳವಳಿ, ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದರು. ಇಡೀ ಭಾರತವನ್ನು ಸುತ್ತಿ ಜನರನ್ನು ಬ್ರಿಟಿಷರ ವಿರುದ್ಧ ಸಂಘಟಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಮುನ್ನಡೆಸಿದರು. ಹಲವು ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ರಾಷ್ಟ್ರಪಿತ ಎಂಬ ಬಿರುದ್ದು ನೀಡಲಾಗಿದೆ. ಹಾಗಾಗಿಯೇ ಇಡೀ ಪ್ರಪಂಚ ಅವರನ್ನು ಶಾಂತಿದೂತ ಎಂದು ಕರೆದಿದೆ. ಹಾಗಾಗಿ 1982ರಲ್ಲಿ ಅವರ ಬಗ್ಗೆ ಸಿನಿಮಾ ಮಾಡಿದ್ದರಿಂದ ಮಾತ್ರ ಇಡೀ ಪ್ರಪಂಚಕ್ಕೆ ಅವರ ಬಗ್ಗೆ ತಿಳಿದಿದೆ ಎಂಬ ಮೋದಿಯವರ ಹೇಳಿಕೆ ಸುಳ್ಳಾಗಿದೆ.


ಇದನ್ನೂ ಓದಿ: Fact Check: ಕಾಂಗ್ರೆಸ್ ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *