Fact Check: ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ 63 ಲಕ್ಷದಷ್ಟು ದುಬಾರಿ ಮಾವಿನ ಹಣ್ಣುಗಳನ್ನು ತಿನ್ನಲು ಖರ್ಚು ಮಾಡಿದ್ದಾರೆ ಎಂಬುದು ಸುಳ್ಳು

ಅರವಿಂದ್ ಕೇಜ್ರಿವಾಲ್

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರ ಕುರಿತು ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಒಂದು ತಿಂಗಳಷ್ಟರಲ್ಲಿ ಕೇವಲ ಮಾವಿನ ಹಣ್ಣು ತಿನ್ನಲು 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವೈರಲ್ ವಿಡಿಯೋವನ್ನು ” ಒಬ್ಬ ಮನುಷ್ಯ ಒಂದು ತಿಂಗಳಿನಲ್ಲಿ 63 ಲಕ್ಷರೂಪಾಯಿಯ ಮಾವಿನ ಹಣ್ಣು  ತಿನ್ನಲು ಸಾಧ್ಯವೆ? ಇದನ್ನು ಜನಸಾಮಾನ್ಯ ಪಕ್ಷದ ಅರವಿಂದ ಕೇಜ್ರಿವಾಲ್ ತಿಹಾರ ಜೈಲಿನಲ್ಲಿ ಕುಳಿತು ಸಾಧನೆ ಮಾಡಿದ್ದಾರೆ ನಂಬೊಕೆ ಆಗ್ತಾ ಇಲ್ಲವೇ ನೋಡಿ ಈ ವಿಡಿಯೋ” ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಜಗತ್ತಿನ ಅತ್ಯಂತ ದುಬಾರಿಯಾದ ಜಪಾನಿನ ಮಿಯಾಜಾಕಿ ಮಾವಿನ ಹಣ್ಣನ್ನು ತಿಂದಿದ್ದಾರೆ ಎಂದು ರಾಜೇಶ್ ಬಸಿಂದ್ ನಿಶಾನ್ ಎನ್ನುವವರು ಆರೋಪಿಸಿದ್ದಾರೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿದ್ದಾಗ ಉದ್ದೇಶಪೂರ್ವಕವಾಗಿ ಚಹಾದೊಂದಿಗೆ ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆಯನ್ನು ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ಯಾವ ವರದಿಗಳಲ್ಲಿಯೂ ಕೇಜ್ರಿವಾಲ್ ಅವರು 63 ಲಕ್ಷರೂಪಾಯಿಯ ಮಾವಿನ ಹಣ್ಣನ್ನು ಅಥವಾ ಜಗತ್ತಿನ ಅತ್ಯಂತ ದುಬಾರಿ ಮಿಯಾಜಾಕಿ ಮಾವಿನ ಹಣ್ಣನ್ನು ತಿಂದಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ.

ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ED), ಕೇಜ್ರಿವಾಲ್ ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ಸಕ್ಕರೆ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ತಮ್ಮ ವೈದ್ಯರನ್ನು ಸಂಪರ್ಕಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಇಡಿ ಈ ಮನವಿಯನ್ನು ವಿರೋಧಿಸಿತ್ತು, ಜಾಮೀನು ಪಡೆಯಲು ಅವರು ಮಾವಿನಹಣ್ಣು ಮತ್ತು ಸಿಹಿತಿಂಡಿಗಳನ್ನು ಸೇವಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಅವರು ಸಕ್ಕರೆ, ಬಾಳೆಹಣ್ಣು, ಸಿಹಿತಿಂಡಿಗಳು, ಪೂರಿ, ಆಲೂ ಸಬ್ಜಿ ಇತ್ಯಾದಿಗಳನ್ನು ಪ್ರಜ್ಞಾಪೂರ್ವಕವಾಗಿ ಸೇವಿಸುತ್ತಿದ್ದಾರೆ, ಮಧುಮೇಹ ಮೆಲ್ಲಿಟಸ್ ಟೈಪ್ II ರ ರೋಗಿಯಾಗಿದ್ದರೂ ಮತ್ತು ಅಂತಹ ವಸ್ತುಗಳ ಸೇವನೆಯು ರಕ್ತದ ಸಕ್ಕರೆ ಹೆಚ್ಚಿಸುತ್ತದೆ ಎಂದು ಚೆನ್ನಾಗಿ ತಿಳಿದಿದ್ದರೂ ಸಹ ಹೀಗೆ ಮಾಡಿದ್ದಾರೆ”. ಎಂದು ಇಡಿ ಪರವಾದ ವಕೀಲರು ನ್ಯಾಯಲಯದ ಮುಂದೆ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ 19 ಏಪ್ರಿಲ್ 2024 ರಂದು ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ತಿಹಾರ್ ಜೈಲಿನಲ್ಲಿ ತನಗೆ ಇನ್ಸುಲಿನ್ ಒದಗಿಸುವಂತೆ ಅಧಿಕಾರಿಗಳನ್ನು ಕೇಳುವ ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರ ಊಟದ ವಿಚಾರಕ್ಕೆ ಸಂಬಂಧಿಸಿದಂತೆ “48 ಊಟಗಳಲ್ಲಿ ಕೇವಲ 3 ಮಾವಿನ ಹಣ್ಣುಗಳು. ಒಮ್ಮೆ ಆಲೂ ಪುರಿ ತಿಂದಿದ್ದು, ಅದು ನವರಾತ್ರಿಯ ಪ್ರಸಾದವಾಗಿತ್ತು, ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ(ಇಡಿ) ನನ್ನನ್ನು ಬಂಧಿಸಿದ ನಂತರ ನಮ್ಮ ಮನೆಯಿಂದ ಕೇವಲ ಮೂರು ಬಾರಿ ಮಾವಿನಹಣ್ಣುಗಳನ್ನು ಕಳುಹಿಸಲಾಗಿದೆ.” ಎಂದು  ಅವರು ಹೇಳಿದ್ದಾರೆ.

ಆದ್ದರಿಂದ ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರು 63 ಲಕ್ಷದಷ್ಟು ಜಗತ್ತಿನ ಅತ್ಯಂತ ದುಬಾರಿಯಾದ ಜಪಾನಿನ ಮಿಯಾಜಾಕಿ ಮಾವಿನ ಹಣ್ಣನ್ನು ತಿಂದಿದ್ದಾರೆ ಎಂಬ ಆರೋಪ ಸುಳ್ಳು.


ಇದನ್ನು ಓದಿ: “ಇಸ್‌ ಬಾರ್‌ 400 ಪಾರ್‌” ಎಂದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ಸುಳ್ಳು


ವಿಡಿಯೋ ನೋಡಿ: ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *