“ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಯೋಜನೆ 2024 ಗಾಗಿ ಅಪ್ಲಿಕೇಶನ್‌ಗಳು ಲಭ್ಯವಿದೆ. ಆರ್ಥಿಕ ಕಾರಣಗಳಿಗಾಗಿ ತಮ್ಮದೇ ಆದ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಮತ್ತು ಅವರ ಶಿಕ್ಷಣದ ಮಟ್ಟದಲ್ಲಿ ಲ್ಯಾಪ್‌ಟಾಪ್ ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯು ಮುಕ್ತವಾಗಿದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸ್‌ಆಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಸಂದೇಶದಲ್ಲಿ ಇನ್ನೂ ಮುಂದುವರೆದು, “2024 ರಲ್ಲಿ 960,000 ವಿದ್ಯಾರ್ಥಿಗಳಿಗೆ ಅವರ ಕಲಿಕೆಯನ್ನು ಹೆಚ್ಚಿಸಲು ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಇಲ್ಲಿ ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸಿ.” ಎಂದು ಲಿಂಕ್‌ವೊಂದನ್ನು ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ಈ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು ಇದಕ್ಕಾಗಿ, ನಾವು ಪೋಸ್ಟ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ , ನಮ್ಮ ಕಂಪ್ಯೂಟರ್‌ನ ಆಂಟಿವೈರಸ್ ಪ್ರೋಗ್ರಾಂ ಇದು ಸಂಭಾವ್ಯ ದುರುದ್ದೇಶಪೂರಿತವಾಗಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಆದರೂ ಈ ಕುರಿತು ಪರಿಶೀಲನೆ ನಡೆಸಲು ನಾವು ಅಪಾಯ ಸೂಚನೆಯನ್ನು ಸ್ವೀಕರಿಸಿ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ವೆಬ್‌ಸೈಟ್‌ವೊಂದು ಕಂಡು ಬಂದಿದೆ. ಅದರಲ್ಲಿ ” ವಿದ್ಯಾರ್ಥಿಗಳಿಗಾಗಿ ಉಚಿತ ಲ್ಯಾಪ್‌ಟಾಪ್” ಎಂಬ ಶೀರ್ಷಿಕೆ ಕಂಡು ಬಂದಿದೆ.
ಬಳಿಕ ಈ ವೆಬ್‌ಸೈಟ್ ಹೆಸರು, ಶಿಕ್ಷಣ ಮಟ್ಟ ಮತ್ತು ವಯಸ್ಸಿನಂತಹ ವೈಯಕ್ತಿಕ ವಿವರಗಳನ್ನು ಕೇಳುವ ಅರ್ಜಿ ನಮೂನೆಯನ್ನು ತೋರಿಸಿದೆ. ಇದರಲ್ಲಿ ಬಳಕೆದಾರರು ತಮಗೆ ಬೇಕಾದ ಲ್ಯಾಪ್‌ಟಾಪ್‌ನ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಬೇಕು. ಹಾಗಿದ್ದಾಗ ಮಾತ್ರ ಮುಂದಿನ ಹಂತಕ್ಕೆ ಹೋಗಲು ಸಾಧ್ಯ. ಹೀಗಾಗಿ ನಾವು ನಕಲಿ ಮಾಹಿತಿಗಳನ್ನು ನೀಡಿ ಈ ವೆಬ್‌ಸೈಟ್‌ನಲ್ಲಿ ಪ್ರವೇಶವನ್ನು ಪಡೆದವು.
ಬಳಿಕ ಮತ್ತೊಮ್ಮೆ ಹೆಸರು ಅನ್ನು ಕೇಳುತ್ತದೆ. ಹೆಸರು ಸಮೂದಿಸಿದ ಬಳಿಕ, ಹಸಿರು ಬಟನ್ ಅನ್ನು ಕ್ಲಿಕ್ ಮಾಡಲು ಸೂಚಿಸುತ್ತದೆ. ಈ ಹಂತದಲ್ಲಿ “ನಿಮ್ಮ ವಾಟ್ಸ್‌ಆಪ್‌ನಲ್ಲಿ 15 ಜನ ಸ್ನೇಹಿತರೊಂದಿಗೆ ಅಥವಾ 5 ವಾಟ್ಸ್‌ಆಪ್ ಗ್ರೂಪ್‌ಗಳಿಗೆ ಈ ಸಂದೇಶವನ್ನು ಕಳುಹಿಸದರೆ ನಿಮಗೆ ಅತೀ ಶೀಘ್ರದಲ್ಲಿ ಲ್ಯಾಪ್‌ಟಾಪ್ ದೊರಕಲಿದೆ” ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ಉಲ್ಲೇಖಿಸಿದಂತೆ ಎಷ್ಟು ಬಾರಿ ಯಾರಿಗೇ ಶೇರ್ ಮಾಡಿದರು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ತಿಳಿದು ಬಂದಿದೆ. ಈ ಮೂಲಕ ಇದೊಂದು ವಂಚನೆಯ ಜಾಲ ಎಂಬುದು ಪತ್ತೆಯಾಗಿದೆ.
ಒಟ್ಟಾರೆಯಾಗಿ ಈ ರೀತಿಯ ಸುಳ್ಳು ಸಂದೇಶಗಳು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು. ಇವುಗಳಲ್ಲಿ ತೋರಿಸುವ ಲಿಂಕ್ ಕ್ಲಿಕ್ ಮಾಡಿದಾಗ, ಅವು ನಿಮ್ಮ ವೈಯಕ್ತಿಕ ದಾಖಲೆಗಳನ್ನೋ, ಅಥವಾ ನಿಮ್ಮ ಬ್ಯಾಂಕ್ ಮಾಹಿತಿಯನ್ನೋ ಪಡೆದುಕೊಂಡು ವಂಚಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ ವಹಿಸಿ…
ಇದನ್ನೂ ಓದಿ : ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ
ಈ ವಿಡಿಯೋ ನೋಡಿ : ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.