Fact Check: ಬಿಜೆಪಿ ಜೊತೆ ಸರ್ಕಾರ ರಚಿಸಿದ್ದಕ್ಕಾಗಿ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಸುಳ್ಳು

ಚಂದ್ರಬಾಬು ನಾಯ್ಡು

ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಬಲಿಗರು ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಅವರ ಫೋಟೋಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ಇದು ಲೋಕಸಭೆ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷದ(ಬಿಜೆಪಿ) ಜೊತೆ ಸರ್ಕಾರ ರಚಿಸಿದ್ದಕ್ಕಾಗಿ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗಿದೆ.  

ಲೋಕಸಭೆ ಚುನಾವಣಾ ಫಲಿತಾಂಶ ಜೂನ್ 4, 2024 ರಂದು ಮುಕ್ತಾಯಗೊಂಡಿದೆ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಆಂಧ್ರಪ್ರದೇಶದಿಂದ 25 ಸ್ಥಾನಗಳಲ್ಲಿ 16 ರಲ್ಲಿ ಬಹುಮತವನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಪ್ರಸ್ತುತ ವೈಎಸ್‌ಆರ್‌ಸಿಪಿ ಕೇವಲ 4 ಸ್ಥಾನಗಳಿಗೆ ಇಳಿದಿದ್ದು, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೇ, ಚಂದ್ರಬಾಬು ನಾಯ್ಡು ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುಂದುವರಿಸುತ್ತಾರೋ ಅಥವಾ ವಿರೋಧ ಪಕ್ಷದ ಇಂಡಿಯಾ ಬ್ಲಾಕ್‌ಗೆ ಸೇರುತ್ತಾರೋ ಎಂಬ ಊಹಾಪೋಹಗಳ ಮಧ್ಯೆ ಬಿಜೆಪಿಗೆ ತಮ್ಮ ಬೆಂಬಲವನ್ನು ಖಚಿತಪಡಿಸಿದ್ದಾರೆ.

ನಾಯ್ಡು ಅವರ ಈ ನಿರ್ಧಾರವನ್ನು ಆಂಧ್ರಪ್ರದೇಶದ ಜನರು ವಿರೋಧಿಸುತ್ತಿದ್ದಾರೆ ಮತ್ತು ರಾಜ್ಯದಲ್ಲಿ ಟಿಡಿಪಿ ಕಚೇರಿಯನ್ನು ಧ್ವಂಸ ಮಾಡಿದ್ದಾರೆ ಎಂದು ವೈರಲ್ ವೀಡಿಯೊದಲ್ಲಿ ಹೇಳಲಾಗುತ್ತಿದೆ. “ಬಿಗ್ ಬ್ರೇಕಿಂಗ್. ಮೋದಿಯನ್ನು ಬೆಂಬಲಿಸಿದ್ದಕ್ಕಾಗಿ ಕೋಪಗೊಂಡ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ಅವರ ಫೋಟೋಗಳನ್ನು ಸುಡುತ್ತಿದ್ದಾರೆ. ನಾಯ್ಡು ಪ್ರಮಾಣ ವಚನ ಸ್ವೀಕರಿಸುವ ಮೊದಲು ಇದನ್ನು ಮರುಪರಿಶೀಲಿಸಬೇಕಾಗಿದೆ” ಎಂದು ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. 

ವಿಡಿಯೋವನ್ನು ಪೇಸ್‌ಬುಕ್‌ನಲ್ಲಿ ಸಹ ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಘಟನೆ ಮಾರ್ಚ್ 2024 ರದ್ದು ಮತ್ತು ಲೋಕಸಭೆ ಚುನಾವಣೆ ಪ್ರಾರಂಭವಾಗುವ ಮೊದಲು ನಡೆದಿದೆ. ಇದು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ತೀವ್ರ ಅಸಮಾಧಾನದ ಮೇಲೆ ಟಿಡಿಪಿ ಬೆಂಬಲಿಗರು ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿರುವ ವಿಡಿಯೋ ಆಗಿದೆ ಮತ್ತು ಟಿಡಿಪಿ ಮತ್ತು ಬಿಜೆಪಿ ಮೈತ್ರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಈ ಕುರಿತು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ, ವೈರಲ್ ವೀಡಿಯೊವನ್ನು ಹೊಂದಿರುವ ಮಾರ್ಚ್ 29, 2024ರ ಫೇಸ್‌ಬುಕ್ ಪೋಸ್ಟ್‌ ಒಂದು ದೊರಕಿತು. ಗುಂತಕಲ್ ಟಿಡಿಪಿಯಲ್ಲಿ ಬೆಂಕಿ” ಎಂಬ ತೆಲುಗು ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.

ಈ ಶೀರ್ಷಿಕೆಯಿಂದ ಸುಳಿವು ಪಡೆದು, ನಾವು ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಮಾರ್ಚ್ 29, 2024ರ ‘ದಿ ಹಿಂದೂ‘ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಈ ವರದಿಯು ‘ಅನಂತಪುರ ಮತ್ತು ಗುಂತಕಲ್‌ನಲ್ಲಿ ಟಿಡಿಪಿ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ’ ಎಂಬ ಶೀರ್ಷಿಕೆಯಲ್ಲಿದೆ ಮತ್ತು ಶಾಸಕರ ಆಯ್ಕೆಯ ಅಸಮಧಾನದಿಂದ ಟಿಡಿಪಿ ಬೆಂಬಲಿಗರು ಈ ಪ್ರದೇಶಗಳಲ್ಲಿನ ಪಕ್ಷದ ಕಚೇರಿಗಳನ್ನು ಹೇಗೆ ಧ್ವಂಸಗೊಳಿಸಿದರು ಎಂಬ ವಿವರಗಳನ್ನು ನೀಡಲಾಗಿದೆ.

ಅದೇ ಘಟನೆಯ ವಿಭಿನ್ನ ಕೋನ(angle)ದಿಂದ ತೆಗೆದ ವೀಡಿಯೊವನ್ನು ಅದೇ ದಿನ ಎಬಿಪಿ ಲೈವ್ ತೆಲುಗು ಹಂಚಿಕೊಂಡಿದೆ.

ವಿಡಿಯೋ ಸಹಿತ ತೆಲುಗು ಪಠ್ಯದಲ್ಲಿ “ಗುಮ್ಮನೂರಿಗೆ ಗುಂತಕಲ್ ಟಿಕೆಟ್.. ಟಿಡಿಪಿ ನಾಯಕರ ಧ್ವಂಸ.!”

ಎಬಿಪಿ ಲೈವ್ ತೆಲುಗು ಈ ವೀಡಿಯೊದ ಹಿನ್ನೆಲೆಯಲ್ಲಿ ಬ್ಯಾನರ್ ಮತ್ತು ವೈರಲ್ ವೀಡಿಯೊ ನಿಖರವಾಗಿ ಹೊಂದಿಕೆಯಾಗಿದೆ. ಕೆಳಗೆ ಹೋಲಿಕೆಯನ್ನು ನೋಡಬಹುದು:

ಸಮಯಂ ತೆಲುಗು ಮಾರ್ಚ್ 29 ರಂದು ‘ಗುಂತಕಲ್ ಟಿಡಿಪಿ ನಾಯಕರು ಚಂದ್ರಬಾಬು ಫೋಟೋವನ್ನು ಸುಟ್ಟುಹಾಕಿದರು’ ಎಂಬ ಶೀರ್ಷಿಕೆಯೊಂದಿಗೆ ವೈರಲ್ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.

ಆರ್‌ಟಿವಿ ಲೈವ್ ಪ್ರಕಾರ, ಆಂಧ್ರಪ್ರದೇಶದ ರಾಜ್ಯ ಚುನಾವಣೆಗೆ ಗುಮ್ಮನೂರು ಜಯರಾಮ್ ಅವರನ್ನು ಪಕ್ಷವು ತಮ್ಮ ಅಭ್ಯರ್ಥಿ ಎಂದು ಘೋಷಿಸಿದ ನಂತರ ಟಿಡಿಪಿಯ ಜಿತೇಂದರ್ ಗೌಡ್ ಬೆಂಬಲಿಗರು ಗುಂತಕಲ್‌ನಲ್ಲಿರುವ ಪಕ್ಷದ ಕಚೇರಿಗೆ ನುಗ್ಗಿ, ಆಸ್ತಿಯನ್ನು ಹಾನಿಗೊಳಿಸಿದರು ಮತ್ತು ಚಂದ್ರಬಾಬು ನಾಯ್ಡು ಅವರ ಫೋಟೋಗೆ ಬೆಂಕಿ ಹಚ್ಚಿದರು. ಆ ಸಮಯದಲ್ಲಿ ಅನಂತಪುರದಲ್ಲಿ ಟಿಡಿಪಿ ಕಾರ್ಯಕರ್ತರಿಂದ ಇದೇ ರೀತಿಯ ವಿಧ್ವಂಸಕ ಘಟನೆ ವರದಿಯಾಗಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ.

ಆದ್ದರಿಂದ ಲೋಕಸಭೆ ಚುನಾವಣೆಯ ನಂತರ ಬಿಜೆಪಿ ಜೊತೆ ಸರ್ಕಾರ ರಚಿಸಿದ್ದಕ್ಕಾಗಿ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: 1991ರಲ್ಲಿ ಒತ್ತೆ ಇಟ್ಟಿದ್ದ 1 ಲಕ್ಷ ಕೆಜಿ ಚಿನ್ನವನ್ನು ಈಗ ಮೋದಿ ಭಾರತಕ್ಕೆ ತಂದಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *