2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ 500ಕ್ಕಿಂತ ಕಡಿಮೆ ಮತಗಳ ಅಂತರದಿಂದ ಮತ್ತು 100 ಕ್ಷೇತ್ರಗಳಲ್ಲಿ 1000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ ಎಂದು ಪ್ರತಿಪಾದಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕರು ಈ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್: ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಲೋಕಸಭೆ ಚುನಾವಣೆಯಲ್ಲಿ ಕೇವಲ ಒಬ್ಬ ಬಿಜೆಪಿ ಅಭ್ಯರ್ಥಿ ಮಾತ್ರ 1,587 ಮತಗಳನ್ನು ಗಳಿಸಿ ಅತ್ಯಂತ ಕಡಿಮೆ ಅಂತರದಿಂದ ಗೆದ್ದಿರುವುದು ನಮಗೆ ಕಂಡುಬಂದಿದೆ. ಒಡಿಶಾದ ಜಾಜ್‌ಪುರ ಕ್ಷೇತ್ರದಿಂದ ಬಿಜೆಪಿಯ ರವೀಂದ್ರ ನಾರಾಯಣ ಬೆಹೆರಾ ಅವರು 5,34,239 ಮತಗಳನ್ನು ಪಡೆದಿದ್ದು, ಬಿಜೆಡಿಯ ಸರ್ಮಿಸ್ತಾ ಸೇಥಿ (5,32,652) ಅವರನ್ನು 1,587 ಅಂತರದಿಂದ ಸೋಲಿಸಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ 1,587 ಕ್ಕಿಂತ ಕಡಿಮೆ ಅಂತರದಿಂದ ಯಾವುದೇ ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ.
ಜೈಪುರದಲ್ಲಿ ಪಕ್ಷಕ್ಕೆ ಎರಡನೇ ಅತಿ ಕಡಿಮೆ ಗೆಲುವಿನ ಅಂತರವಿದ್ದು, ಅಲ್ಲಿ ಪಕ್ಷದ ನಾಯಕ ರಾವ್ ರಾಜೇಂದ್ರ ಸಿಂಗ್ ಅವರು ಕಾಂಗ್ರೆಸ್‌ನ ಅನಿಲ್ ಚೋಪ್ರಾ ವಿರುದ್ಧ 1,615 ಮತಗಳಿಂದ ಗೆದ್ದಿದ್ದಾರೆ. ಒಟ್ಟಾರೆಯಾಗಿ, 2024 ರ ಲೋಕಸಭೆ ಚುನಾವಣೆಯಲ್ಲಿ ಕೇವಲ 7 ಬಿಜೆಪಿ ಅಭ್ಯರ್ಥಿಗಳು 5,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಲೋಕಸಭೆ ಚುನಾವಣೆ: ಕಡಿಮೆ ಅಂತರದಿಂದ ಗೆದ್ದವರು ಯಾರು?
ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಶಿವಸೇನೆಯ ರವೀಂದ್ರ ದತ್ತಾರಾಮ್ ವೈಕರ್ ಕೇವಲ 48 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವೈಕರ್ ಅವರು 4,52,644 ಮತಗಳನ್ನು ಪಡೆದರೆ, ಶಿವಸೇನೆ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ 4,52,596 ಮತಗಳನ್ನು ಪಡೆದಿದ್ದಾರೆ.
ಹಾಗಾಗಿ, ಬಿಜೆಪಿ 500ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 30 ಸ್ಥಾನಗಳನ್ನು ಗೆದ್ದಿದೆ ಮತ್ತು 1000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 100 ಕ್ಷೇತ್ರಗಳನ್ನು ಗೆದ್ದಿದೆ ಎಂಬ ವೈರಲ್ ಹೇಳಿಕೆಯು ಕಟ್ಟುಕಥೆಯಾಗಿದೆ.
ಇದನ್ನು ಓದಿ: ಬಿಜೆಪಿಗೆ ಮತ ಹಾಕದ ಹಿಂದೂಗಳನ್ನು ನಿಂದಿಸಿದ ವ್ಯಕ್ತಿ ಮುಸ್ಲಿಂ ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ