Fact Check | 3ನೇ ಅವಧಿಗೆ ಬಿಜೆಪಿಯಿಂದ ಸರ್ಕಾರ ರಚನೆ ಹಿನ್ನೆಲೆ ಉಚಿತ ರೀಚಾರ್ಜ್‌ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “2024 ರ ಲೋಕಸಭೆ ಚುನಾವಣೆಯನ್ನು ಗೆದ್ದಿದ್ದಕ್ಕಾಗಿ ಪ್ರತಿ ಭಾರತೀಯನಿಗೆ ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಪಿಎಂ ಮೋದಿ ಮತ್ತು ಬಿಜೆಪಿ ಮಾಡುತ್ತಿದೆ. 749 ರೂಪಾಯಿ ಮೌಲ್ಯವುಳ್ಳ ರಿಚಾರ್ಜ್‌ ಸಂಪೂರ್ಣವಾಗಿ ಉಚಿತವಾಗಿದ್ದು, ಯಾರು ಬೇಕಾದರು ಈ ರೀಚಾರ್ಜ್‌ ಅನ್ನು ಮಾಡಿಸಿಕೊಳ್ಳಬಹುದಾಗಿದೆ. ಉಚಿತ ರೀಚಾರ್ಜ್‌ ಪಡೆಯಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ” ಎಂಬ ಬರಹದೊಂದಿ ಲಿಂಕ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಹಲವು ಮಂದಿ, ಈ ಪೋಸ್ಟ್‌ ಅನ್ನು ವಾಟ್ಸ್‌ಆಪ್‌ ಸೇರಿದಂತೆ ತಮ್ಮ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಇದೇ ರೀತಿಯ ಹಲವು ಲಿಂಕ್‌ಗಳು ಉಚಿತ ರೀಚಾರ್ಜ್‌ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದ್ದವು. ಆದರೆ ಅವುಗಳು ನಕಲಿ ಎಂದು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ಹಿಂದೆ ಸಾಬೀತು ಮಾಡಿತ್ತು. ಇದೀಗ ಅದೇ ರೀತಿಯ ಪೋಸ್ಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವುದರಿಂದ ಇದು ಹಲವು ಅನುಮಾನಗಳು ಹುಟ್ಟುಹಾಕಿದೆ. ಹಾಗಾಗಿ ಈ ಕುರಿತು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು ಇದಕ್ಕಾಗಿ ಪೋಸ್ಟ್‌ನ ಕೆಳಗೆ ನೀಡಲಾದ URL ಲಿಂಕ್ ಅನ್ನು ಕ್ಲಿಕ್ ಮಾಡಿ ಪರಿಶೀಲನೆ ನಡೆಸಿತು. ಈ ವೇಳೆ ಲಿಂಕ್‌ನಿಂದ ಕಂಡು ಬಂದ ವೆಬ್‌ಸೈಟ್‌ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯ ಫೋಟೋವೊಂದು ಕಾಣಿಸಿಕೊಂಡಿದೆ. ಆಫರ್‌ನ ಪ್ರಯೋಜನಗಳನ್ನು ಪಡೆಯಲು ‘ಚೆಕ್‌ ನೌ’ ಬಟನ್ ಅನ್ನು ಕ್ಲಿಕ್ ಮಾಡಿ ಎಂದು ವೆಬ್‌ಪೇಜ್‌ ತೋರಿಸುತ್ತದೆ. ಈ ಬಟನ್ ಅನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಈ ವೆಬ್‌ಪೇಜ್‌ ಮುಂದಿನ ಹಂತಕ್ಕೆ ಕರೆದೊಯ್ಯುವುದನ್ನು ನಿಲ್ಲಿಸುತ್ತದೆ.

ಹೀಗಾಗಿ ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲು ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದೇವೆ ( ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ ಮತ್ತು ಇಲ್ಲಿ ). ಆದರೆ, ಪ್ರಧಾನಿ ನರೇಂದ್ರ ಮೋದಿಯಾಗಲಿ ಅಥವಾ ಬಿಜೆಪಿಯಾಗಲಿ ಅಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ ಎಂಬುದು ನಮಗೆ ಖಚಿತವಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದಾಗ, ಚಮೋಲಿ ಪೊಲೀಸರು (ಉತ್ತರಾಖಂಡ್) 05 ಜೂನ್ 2024 ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದೆ. ಪಿಎಂ ಮೋದಿಯವರ ಉಚಿತ ರೀಚಾರ್ಜ್ ಅನ್ನು ಹಂಚಿಕೊಂಡಿರುವ ಖಾತೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಪೋಸ್ಟ್ ಅನ್ನು ನಕಲಿ ಎಂದು ಸ್ಪಷ್ಟಪಡಿಸಿದರು ಮತ್ತು ಅಂತಹ ಅಜ್ಞಾತವನ್ನು ಲಿಂಕ್‌ಗಳನ್ನು ತೆರೆಯದಂತೆ ಜನರಿಗೆ ಸಲಹೆಯನ್ನು ಕೂಡ  ನೀಡಿದ್ದಾರೆ.

ಈ ಹಿಂದೆ ಪ್ರಧಾನ ಮಂತ್ರಿ ಮೋದಿಯವರ ಉಚಿತ ರೀಚಾರ್ಜ್ ಯೋಜನೆಗಳ ಕುರಿತು ಇದೇ ರೀತಿಯ ಪೋಸ್ಟ್‌ಗಳು ಈ ಹಿಂದೆ ವೈರಲ್ ಆಗಿತ್ತು, ಆ ಸಂದರ್ಭದಲ್ಲಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಆ ಬಗ್ಗೆ ಮಾಹಿತಿ ನೀಡಿದ್ದು, ಭಾರತ ಸರ್ಕಾರವಾಗಲಿ ಅಥವಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಆಗಲಿ ಇಂತಹ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಮೂರನೇ ಅವಧಿಗೆ ಸರ್ಕಾರ ರಚಿಸುವ ಸಂದರ್ಭದಲ್ಲಿ ಬಿಜೆಪಿ ಅಥವಾ ಪ್ರಧಾನಿ ಮೋದಿ ಯಾವುದೇ ಉಚಿತ ರೀಚಾರ್ಜ್ ಅನ್ನು ನೀಡುತ್ತಿಲ್ಲ. ಮತ್ತು ಇಂತಹ ಸಂದೇಶಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸುವುದು ಉತ್ತಮ. ಒಂದು ವೇಳೆ ಈ ಸಂದೇಶದಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮ್ಮ ವೈಯಕ್ತಿಕ ದಾಖಲೆಗಳೋ ಅಥವಾ ನಿಮ್ಮ ಇನ್ನೀತರ ಯಾವುದಾದರು ಮಾಹಿತಿಗಳು ಹ್ಯಾಕ್‌ ಆಗುವ ಸಾಧ್ಯತೆ ಹೆಚ್ಚಾಗಿದೆ.


ಇದನ್ನೂ ಓದಿ : ಬಿಜೆಪಿಗೆ ಮತ ಹಾಕದ ಹಿಂದೂಗಳನ್ನು ನಿಂದಿಸಿದ ವ್ಯಕ್ತಿ ಮುಸ್ಲಿಂ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *