Fact Check | ಬಿಜೆಪಿಗೆ ಮತ ಹಾಕದ ಹಿಂದೂಗಳನ್ನು ನಿಂದಿಸಿದ ವ್ಯಕ್ತಿ ಮುಸ್ಲಿಂ ಅಲ್ಲ

“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದರೂ, ಪ್ರಧಾನಿ ಮೋದಿಗೆ ಮತ ಹಾಕದ ಹಿಂದೂ ಜನರನ್ನು ಮುಸ್ಲಿಂ ವ್ಯಕ್ತಿಯೊಬ್ಬ ಟೀಕಿಸಿ ಬೇಸರವನ್ನು ವ್ಯಕ್ತ ಪಡಿಸಿದ್ದಾನೆ. ಈ ಮುಸ್ಲಿಂ ವ್ಯಕ್ತಿಗೆ ಪ್ರಧಾನಿ ಮೋದಿ ಬಗ್ಗೆ, ದೇಶದ ಬಗ್ಗೆ ಇರುವ ಕಾಳಜಿ ನಮ್ಮ ಹಿಂದೂ ಮತದಾರರಿಗೆ ಇಲ್ಲ ಎಂಬುದೇ ದುರಂತ” ಎಂಬ ರೀತಿಯ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿಯು ಮುಸ್ಲಿಂರ ರೀತಿ ಉಡುಗೆ ಧರಿಸಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೋವನ್ನು ನೋಡಿದ ಬಹುತೇಕರು ಇದು ನಿಜವಾದ ವಿಡಿಯೋ, ನರೇಂದ್ರ ಮೋದಿ ಅವರಿಗೆ ವೋಟು ಹಾಕದಿರುವುದಕ್ಕೆ ಮುಸ್ಲಿಂ ವ್ಯಕ್ತಿ ಬೇಸರ ವ್ಯಕ್ತಡಿಸಿದ್ದಾನೆ ಎಂದು ಸಾಕಷ್ಟು ಮಂದಿ ಇದೇ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದೆ. ಇದಕ್ಕಾಗಿ ವೀಡಿಯೊದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ Google ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ 04 ಜೂನ್ 2024 ರಂದು ‘ dhirendra_raghav_79‘ ಹೆಸರಿನ  Instagram  ಖಾತೆಯೊಂದು ಕಾಣಿಸಿಕೊಂಡಿದ್ದು, ಅದರಲ್ಲಿ  ‘ಮಂದಿರದ ಬದಲಿಗೆ ಮಸೀದಿಯನ್ನು ನಿರ್ಮಿಸಲಾಗುವುದು.. ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪತ್ತೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇವರ ಪ್ರೊಫೈಲ್‌ ಪರಿಶೀಲನೆ ನಡೆಸಿದಾಗ ಅವರ ಹೆಸರು ಧೀರೇಂದ್ರ ರಾಘವ್ ಎಂದು ತಿಳಿದು ಬಂದಿದ್ದು, ಇವರು ಮುಸ್ಲಿಂ ಅಲ್ಲ ಎಂಬುದು ಸ್ಪಷ್ಟವಾಗಿದೆ. ಇವರ Instagram ಪುಟದಲ್ಲಿ ವೀಡಿಯೊಗಳನ್ನು ಪರಿಶೀಲಿಸಿದಾಗ, ಅವರು ಬಿಜೆಪಿ ಪರವಾಗಿ  ( ಇಲ್ಲಿ , ಇಲ್ಲಿ , ಇಲ್ಲಿ , ಮತ್ತು ಇಲ್ಲಿ ) ಅನೇಕ ರೀತಿಯ ವೀಡಿಯೊಗಳನ್ನು ಮಾಡಿದ್ದಾರೆ ಎಂಬುದು ಕಂಡು ಬಂದಿದೆ. ಅದೇ ರೀತಿಯಲ್ಲಿ ಧೀರೇಂದ್ರ ರಾಘವ್ ಅವರು ಮುಸಲ್ಮಾನರ ರೀತಿಯಲ್ಲಿ ವೇಷ ಧರಿಸಿ ಹಲವು ಬಾರಿ ವಿಡಿಯೋ ಮಾಡಿರುವುದು ಕೂಡ ಕಂಡು ಬಂದಿದೆ.

ಇನ್ನಷ್ಟು ಮಾಹಿತಿಗಾಗಿ ಹುಡುಕಾಟ ನಡೆಸಿದಾಗ, ನಾವು ಧೀರೇಂದ್ರ ರಾಘವ್ ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ಪತ್ತೆ ಹಚ್ಚಿದೆವು , ಅಲ್ಲಿ ಅವರು ಉತ್ತರ ಪ್ರದೇಶದ ಆಗ್ರಾದ ಕಲಾವಿದ ಎಂದು ತಮ್ಮ ಬಗ್ಗೆ ಬರೆದುಕೊಂಡಿದ್ದಾರೆ. ಅದೇ ವೈರಲ್ ವೀಡಿಯೊವನ್ನು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವುದನ್ನು ನೋಡಬಹುದಾಗಿದೆ ಮತ್ತು ಧೀರೇಂದ್ರ ರಾಘವ್ ಅವರು ಬಿಜೆಪಿಗೆ ಬೆಂಬಲ ನೀಡಿ ಫೇಸ್‌ಬುಕ್‌ನಲ್ಲಿಯೂ ಕೆಲವೊಂದು ವಿಡಿಯೋ ಮಾಡಿರುವುದನ್ನು ಕಾಣಬಹುದಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಬಿಜೆಪಿಗೆ ಬಹುಮತ ನೀಡದ ಕಾರಣ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳನ್ನು ಟೀಕಿಸಿದ್ದಾನೆ ಎಂಬುದು ಸುಳ್ಳು ಹಾಗೂ ಆತನ ಹೆಸರು ಧೀರೇಂದ್ರ ರಾಘವ್ ಆಗಿದೆ. ಅದೇ ರೀತಿ ಈತ ಬಿಜೆಪಿಯನ್ನು ಬೆಂಬಲಿಸಿ ಹಲವು ವಿಡಿಯೋಗಳನ್ನು ಕೂಡ ಮಾಡಿದ್ದಾನೆ ಎಂಬುದು ಕೂಡ ಸಾಭೀತಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಅಹ್ಮದ್‌ನಗರದಲ್ಲಿ ಜನರು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *