Fact Check | ಅಹ್ಮದ್‌ನಗರದಲ್ಲಿ ಜನರು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಮುಸ್ಲಿಂ ಕಾರ್ಮಿಕರು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ” ಎಂದು ಹೇಳುವ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಮುಸಲ್ಮಾನರ ವಿರುದ್ಧ ದ್ವೇಷ ಹರಡುವಂತಹ ಕಮೆಂಟ್‌ಗಳು ಹಾಗೂ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ.

ಇನ್ನು ಈ ಪೋಸ್ಟ್‌ ಇಷ್ಟು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಲು ಪ್ರಮುಖ ಕಾರಣ ಸುಳ್ಳು ಮಾಹಿತಿ ನೀಡಿ ಹಲವು ಬಾರಿ ಟೀಕೆಗೆ ಒಳಗಾಗಿದ್ದ ಸುದರ್ಶನ್ ನ್ಯೂಸ್ ಎಂಬ ಬಲಪಂಥಿಯ ಮಾಧ್ಯಮ. ಇದು ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಅದರಲ್ಲಿ ‘ವಾರ್ಡ್ ನಂ. 2ರಲ್ಲಿ ಅಂದರೆ ಶ್ರೀರಾಂಪುರದ ವೆಸ್ಟನ್ ಚೌಕ್ ಪ್ರದೇಶದಲ್ಲಿ ಮಹಾ ವಿಕಾಸ್ ಅಘಾಡಿ ಅವರ ವಿಜಯೋತ್ಸವ ಆಚರಿಸುತ್ತಿರುವಾಗ ಮುಸ್ಲಿಂ ಕಾರ್ಯಕರ್ತರು ಪಾಕಿಸ್ತಾನದ ಧ್ವಜವನ್ನು ಬೀಸಿದ್ದಾರೆ.” ಎಂದು ಹಂಚಿಕೊಂಡಿದೆ. ಹೀಗೆ ಹಂಚಿಕೊಳ್ಳಲಾದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿರುವ ಪೋಸ್ಟ್‌ ಕುರಿತು ಕನ್ನಡ ಫಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದಲ್ಲಿ ಕಂಡು ಬಂದ ಧ್ವಜಕ್ಕೂ ಪಾಕಿಸ್ತಾನದ ಧ್ವಜಕ್ಕೂ ನಾವು ಹೋಲಿಕೆ ಮಾಡಿ ಪರಿಶೀಲನೆ ನಡೆಸಿದೆವು. ಈ ವೇಳೆ ಪಾಕಿಸ್ತಾನ ಧ್ವಜಲ್ಲಿದ್ದ ಬಿಳಿ ಬಣ್ಣದ ಪಟ್ಟಿ ವೈರಲ್‌ ವಿಡಿಯೋದಲ್ಲಿನ ಧ್ವಜದಲ್ಲಿ ಕಂಡು ಬಂದಿಲ್ಲ. ಹಾಗಾಗಿ ಇದು ಪಾಕಿಸ್ತಾನದ ಧ್ವಜ ಅಲ್ಲ ಎಂಬುದು ಖಚಿತವಾಗಿದೆ.

ಆದರೆ ವೈರಲ್‌ ವಿಡಿಯೋದಲ್ಲಿ ಕಂಡು ಬಂದ ಧ್ವಜ ಯಾವುದು ಎಂಬುದನ್ನು ನಾವು ಪರಿಶೀಲನೆ ನಡೆಸಿದೆವು. ಇದಕ್ಕಾಗಿ ಇಸ್ಲಾಮಿಕ್ ಧ್ವಜವನ್ನು ವೈರಲ್‌ ವಿಡಿಯೋದಲ್ಲಿ ಕಂಡು ಬಂದ ಧ್ವಜವನ್ನು ಹೋಲಿಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಎರಡೂ ಧ್ವಜಗಳು ಒಂದೇ ರೀತಿಯಲ್ಲಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿ ಕಂಡು ಬಂದಿರುವ ಧ್ವಜ ಇಸ್ಲಾಮಿಕ್‌ ಧ್ವಜವಾಗಿದೆ ಮತ್ತು ಈ ಧ್ವಜಕ್ಕೂ ಪಾಕಿಸ್ತಾನದ ಧ್ವಜಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ವೈರಲ್‌ ವಿಡಿಯೋದಲ್ಲಿ ಉಲ್ಲೇಖಿಸಿದಂತೆ ಅಹ್ಮದ್‌ನಗರದಲ್ಲಿ ಮುಸ್ಲಿಂ ಕಾರ್ಮಿಕರು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ ಎಂಬುದು ಸುಳ್ಳು ಮತ್ತು ವೈರಲ್‌ ವಿಡಿಯೋದಲ್ಲಿ ಕಂಡು ಬಂದಿರು ಧ್ವಜ ಇಸ್ಲಾಂ ಧ್ವಜವಾಗಿದೆ.


ಇದನ್ನೂ ಓದಿ : 1991ರಲ್ಲಿ ಒತ್ತೆ ಇಟ್ಟಿದ್ದ 1 ಲಕ್ಷ ಕೆಜಿ ಚಿನ್ನವನ್ನು ಈಗ ಮೋದಿ ಭಾರತಕ್ಕೆ ತಂದಿದ್ದಾರೆ ಎಂಬುದು ಸುಳ್ಳು 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *