Fact Check: ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಾನು ಭಾಗವಹಿಸಿರಲಿಲ್ಲ ಮತ್ತು ವಿಭಜನೆಗೆ ಒಪ್ಪಿಕೊಂಡೆ ಎಂದು ಹೇಳಿಲ್ಲ

ನೆಹರು

ಭಾರತದ ಮೊದಲ ಪ್ರಧಾನ ಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜವಹರಲಾಲ್ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರತೀ ದಿನದಂತೆ ಹರಿಬಿಡಲಾಗುತ್ತಿದೆ. ಈಗ ” ಸ್ವಾತಂತ್ರ ಹೋರಾಟದಲ್ಲಿ ನನ್ನ ಯಾವುದೇ ರೀತಿಯ ಪಾತ್ರವಿಲ್ಲ… ದೊಡ್ಡ ದಾರಿಯಲ್ಲಿ ಪ್ರಧಾನಿಯಾಗುವ ಅವಕಾಶ ದಕ್ಕಿರುವುದರಿಂದ, ವಿಭಜನೆಗೆ ಒಪ್ಪಿಕೊಂಡೆ…” ಎಂದು ನೆಹರು ಅವರು ಸ್ವತಃ  ಒಪ್ಪಿಕೊಂಡಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ನಿಜವಾಗಿಯೂ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪಾತ್ರವೇನು ಇಲ್ಲ ಎಂದು ಹೇಳಿದ್ದಾರೆಯೇ ಮತ್ತು ವಿಭಜನೆಯನ್ನು ಬೆಂಬಲಿಸಿದರೆ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.

ಜವಹರಲಾಲ್ ನೆಹರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ದೇಶದ ವಿಭಜನೆಗೆ ಅನುಮತಿ ನೀಡಿದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ, ಸಧ್ಯ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಅಮಿತ್ ಮಾಳವೀಯ ಡಿಸೆಂಬರ್ 19, 2019ರಲ್ಲಿ ತನ್ನ ಎಕ್ಸ್‌ ಖಾತೆಯಲ್ಲಿ ಇದೇ ವೀಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲಿಂದೀಚೆಗೆ ಈ ವೀಡಿಯೋ ಸಾಕಷ್ಟು ವೈರಲ್ ಅಗುತ್ತಿದೆ.  ಅದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ವೈರಲ್ ಆಗುತ್ತಿರುವ ವೀಡಿಯೋವನ್ನು ಎಡಿಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊ 45 ನಿಮಿಷಗಳ ಸಂದರ್ಶನದ ವೀಡಿಯೋ ಆಗಿದ್ದು, ಸಂಪೂರ್ಣ ಸಂದರ್ಶನವು ಭಾರತ ಸರ್ಕಾರದ ‘ಪ್ರಸಾರ ಭಾರತಿ ಆರ್ಕೈವ್ಸ್’ ನ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ವೀಡಿಯೊ ವಿವರಣೆಯ ಪ್ರಕಾರ, ಇದು ನೆಹರೂ ಅವರ ಮರಣದ ಮೊದಲು ಮೇ 27, 1964ರಲ್ಲಿ ನಡೆಸಸಿದ ಕೊನೆಯ ಮಹತ್ವದ ಸಂದರ್ಶನವಾಗಿದೆ. ವೈರಲ್ ವೀಡಿಯೊದಲ್ಲಿನ ಭಾಗವನ್ನು ಪ್ರಸಾರ ಭಾರತಿ ಆರ್ಕೈವ್ಸ್ ವೀಡಿಯೊದಲ್ಲಿ 14:34 ಮಾರ್ಕ್‌ನಿಂದ ಕಟ್‌ ಮಾಡಲಾಗಿದೆ.

ಮೂಲ ವೀಡಿಯೋದಲ್ಲಿ  ನೆಹರೂ ಅವರು ಮಹಮ್ಮದ್ ಅಲಿ ಜಿನ್ನಾ ಕುರಿತು ಮಾತನಾಡುತ್ತಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ. ಸಂದರ್ಶನಕಾರ ಮೈಕೆಲಿಸ್ ಅವರು ಕೇಳಿದ ಪ್ರಶ್ನೆಗೆ ನೆಹರು ಅವರು ಇಂಗ್ಲೀಷ್‌ನಲ್ಲಿ ಮಾತನಾಡಿದ್ದು ಅದರ ಕನ್ನಡಾನುವಾದ ಇಲ್ಲಿದೆ.

14:34 ಮೈಕೆಲಿಸ್: “ಈಗ ನೀವು ಮತ್ತು ಮಿಸ್ಟರ್. ಗಾಂಧಿ ಮತ್ತು ಮಿ. ಜಿನ್ನಾ… ನೀವೆಲ್ಲರೂ ಸ್ವಾತಂತ್ರ್ಯ ಮತ್ತು ವಿಭಜನೆಯ ಮೊದಲು ಬ್ರಿಟಿಷ್ ಪ್ರಾಬಲ್ಯದಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೀರಿ.”(Michaelis: “Now you and Mr Gandhi and Mr Jinnah… you were all involved before the point of independence and partition in the fight for the independence of India from British domination.”)

14:51 ನೆಹರು: “ಮಿಸ್ಟರ್. ಜಿನ್ನಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ… ವಾಸ್ತವವಾಗಿ, ಅವರು ಅದನ್ನು ವಿರೋಧಿಸಿದರು. ಮುಸ್ಲಿಮ್ ಲೀಗ್ ಪ್ರಾರಂಭವಾಗಿದ್ದು… ಸುಮಾರು 1911 ರಲ್ಲಿ, ನನ್ನ ಪ್ರಕಾರ. ಇದು ನಿಜವಾಗಿಯೂ ಬ್ರಿಟಿಷರಿಂದ ಪ್ರಾರಂಭವಾಯಿತು … ಬಣಗಳನ್ನು ಸೃಷ್ಟಿಸಲು ಅವರಿಂದ ಪ್ರೋತ್ಸಾಹಿಸಲ್ಪಟ್ಟಿತು … ಮತ್ತು ಅವರು ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಮತ್ತು ಅಂತಿಮವಾಗಿ ವಿಭಜನೆಯು ಬಂದಿತು.(Nehru: “Mr Jinnah was not involved in the fight for independence… at all. In fact, he opposed it. The Muslim League was started …about 1911, I think. It was started really by the British… encouraged by them so as to create factions… and they did succeed to some extent. And ultimately there came the partition.”)

15:23 ಮೈಕೆಲಿಸ್: “ನೀವು ಮತ್ತು ಶ್ರೀ ಗಾಂಧಿ ಅದರ ಪರವಾಗಿ ಇದ್ದಿರಾ?”(Michaelis: “Had you and Mr Gandhi been in favour of that?”)

15:27 ನೆಹರು: “ಶ್ರೀ ಗಾಂಧಿ ಕೊನೆಯವರೆಗೂ ಅದರ ಪರವಾಗಿರಲಿಲ್ಲ. ಮೊದಲಿನಿಂದಲೂ ಸಹ. ವಿಭಜನೆ ಬಂದಾಗಲೂ ಅದರ ಪರವಾಗಿರಲಿಲ್ಲ. ನಾನಂತೂ ಅದರ ಪರವಾಗಿರಲಿಲ್ಲ. ಆದರೆ ಅಂತಿಮವಾಗಿ ನಾನು ಇತರರು ಮಾಡಿದಂತೆ … ಇನ್ನೂ ಅನೇಕರಂತೆ, ಈ ನಿರಂತರ ತೊಂದರೆಗಿಂತ ವಿಭಜನೆಯನ್ನು ಹೊಂದುವುದು ಉತ್ತಮ ಎನಿಸಿತು. ಏಕೆಂದರೆ ಮುಸ್ಲಿಂ ಲೀಗ್‌ನ ನಾಯಕರು ದೊಡ್ಡ ಜಮೀನುದಾರರಾಗಿದ್ದರು …(Nehru: “Mr Gandhi was not in favour of it, right to the end. Even when it came he was not in favour of it. I was not in favour of it either. But ultimately, I decided like others did… many others, that it is better to have partition than this constant trouble and you see the leaders of the Muslim League were big landlords…)

ಎಂದು ಹೇಳಿದ್ದಾರೆಯೇ ಹೊರತು ಸಂದರ್ಶನದುದ್ದಕ್ಕೂ ಎಲ್ಲಿಯೂ ನಾನು ವಿಭಜನೆಯನ್ನು ಬೆಂಬಲಿಸಿದೆ ಎಂದು ಹೇಳಿಲ್ಲ ಮತ್ತು ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳಿಲ್ಲ. ಪ್ರಸಾರ ಭಾರತಿಯವರು ಹಂಚಿಕೊಂಡಿರುವ 45 ನಿಮಿಷದ ವೀಡಿಯೋವನ್ನು ನೀವಿಲ್ಲಿ ನೋಡಬಹುದು.

ನೆಹರೂ ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು “ನಾನೇ ವಿಭಜನೆಯ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಹೇಳಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದಾಗ್ಯೂ, ಅವಿಭಜಿತ ಭಾರತದ ವಿಭಜನೆಯಲ್ಲಿನ ಸೂಕ್ಷ್ಮ ವ್ಯತ್ಯಾಸಗಳು ಮತ್ತು ನೆಹರೂ ಅವರ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ನಾವು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಐತಿಹಾಸಿಕ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ(Professor at the Centre for Historical Studies) ಸುಚೇತಾ ಮಹಾಜನ್ ಅವರೊಂದಿಗೆ ಮಾತನಾಡಿದ್ದೇವೆ. ಮಹಾಜನ್ ಅವರು 2016 ರಲ್ಲಿ ‘ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್(India’s Struggle for Independence)’ ಎಂಬ ಪುಸ್ತಕ ಕೂಡ ರಚಿಸಿದ್ದಾರೆ.

ಮಹಾಜನ್ ಅವರು ನೀಡಿದ ಮಾಹಿತಿ ಪ್ರಕಾರ, “ವಿಭಜನೆಯು ಬ್ರಿಟಿಷ್ ಸರ್ಕಾರವು ತೆಗೆದುಕೊಂಡ ನಿರ್ಧಾರ ಎಂಬುದರಲ್ಲಿ ಸಂದೇಹವಿಲ್ಲ. ಯಾವುದೇ ಭಾರತೀಯ ಪಕ್ಷ, ಕಾಂಗ್ರೆಸ್ ಅಥವಾ ಮುಸ್ಲಿಂ ಲೀಗ್ ಇದನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಬ್ರಿಟಿಷ್ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ನೆಹರೂ “ನಾನು ವಿಭಜನೆಯನ್ನು ನಿರ್ಧರಿಸಿದೆ” ಎಂದು ಹೇಳುವ ಪ್ರಶ್ನೆಯೇ ಇಲ್ಲ. ಅಖಂಡ ಭಾರತ ಅಥವಾ ವಿಭಜಿತ ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸುವ ನಿರ್ಧಾರ ಬ್ರಿಟೀಷರ ಕೈಯ್ಯಲ್ಲಿತ್ತು.

ಏಪ್ರಿಲ್/ಮೇ 1947 ರ ಸುಮಾರಿಗೆ, ಬ್ರಿಟೀಷ್ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜಿಸುವುದನ್ನು ಮೇಲ್ವಿಚಾರಣೆ ಮಾಡಿದ ಭಾರತದ ಅಂತಿಮ ವೈಸರಾಯ್ ಲೂಯಿಸ್ ಮೌಂಟ್ ಬ್ಯಾಟನ್, ಬ್ರಿಟಿಷ್ ಸರ್ಕಾರದೊಂದಿಗೆ ಸಮಾಲೋಚನೆಯೊಂದಿಗೆ ವಿಭಜಿತ ಭಾರತವು ಏಕೈಕ ಪ್ರಾಯೋಗಿಕ ಪರಿಹಾರ ಎಂದು ನಿರ್ಧರಿಸಿದರು. ಎರಡು ಡೊಮಿನಿಯನ್ ವಿಭಜನೆಯ ಮೊದಲು, ಮೌಂಟ್ ಬ್ಯಾಟನ್ ಪ್ರಾಂತ್ಯಗಳು ಮತ್ತು ರಾಜಪ್ರಭುತ್ವದ ರಾಜ್ಯಗಳು ಸ್ವತಂತ್ರ ದೇಶಗಳಾಗಬಹುದಾದ ವಿಭಜನೆಯನ್ನು ಪ್ರಸ್ತಾಪಿಸಿದರು. ನೆಹರೂ ಅವರು ವಿಸ್ತಾರವಾದ ಪತ್ರದಲ್ಲಿ ಭಾರತವನ್ನು ಬಾಲ್ಕನೈಸ್ ಮಾಡುವ ಈ ಪ್ರಯತ್ನವನ್ನು ದೃಢವಾಗಿ ನಿರಾಕರಿಸಿದರು. ತರುವಾಯ, ಎರಡು-ಡೊಮಿನಿಯನ್ ಮಾದರಿಯ ಅಡಿಯಲ್ಲಿ ವಿಭಜನೆಯನ್ನು ನೀಡಲಾಯಿತು. ಗಮನಿಸಬೇಕಾದ ಸಂಗತಿಯೆಂದರೆ, ಭಾರತೀಯ ಪಕ್ಷಗಳಿಂದ ಯಾವುದೇ ಸಹಿ ಇಲ್ಲ, ಇದು ಈ ಪಕ್ಷಗಳ ನಡುವಿನ ಒಪ್ಪಂದವೂ ಅಲ್ಲ ಎಂದು ಸೂಚಿಸುತ್ತದೆ.” ಎಂದು ಸ್ಪಷ್ಟಪಡಿಸಿದ್ದಾರೆ. 

ಆದ್ದರಿಂದ ನೆಹರೂ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿಲ್ಲ ಮತ್ತು ಭಾರತ-ಪಾಕಿಸ್ತಾನದ ವಿಭಜನೆಗೆ ಒಪ್ಪಿಗೆ ನೀಡಿದವರು ಎಂಬುದು ನೆಹರು ವಿರೋಧಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಯೇ ಹೊರತು ನಿಜವಲ್ಲ.


ಇದನ್ನು ಓದಿ: ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬುದು ಸುಳ್ಳು


ವೀಡಿಯೋ ನೋಡಿ: ಜವಹರ್‌ಲಾಲ್‌ ನೆಹರೂರವರ ಕುರಿತ ಸರಣಿ ಸುಳ್ಳುಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *