ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು

ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ. ಆದರೆ ಭಾರತದಲ್ಲಿ ಇದರ ಬಗ್ಗೆ ಮಾತನಾಡಿದರೆ ಅವರು ಕೋಮುವಾದಿಗಳಾಗುತ್ತಾರೆ ಎಂದು ಫೇಕ್ ನ್ಯೂಸ್ ಹರಡಿ ಕುಖ್ಯಾತಿಯಾಗಿರುವ ಪೋಸ್ಟ್ ಕಾರ್ಡ್ ಕನ್ನಡ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ನಿಲುಮೆ ಎಂಬ ಬಲಪಂಥೀಯರ ಫೇಸ್ಬುಕ್ ಗ್ರೂಪ್ನಲ್ಲಿ ಸುವರ್ಣ ನ್ಯೂಸ್ ಲಿಂಕ್ ಅನ್ನು ಹಂಚಿಕೊಂಡು ಸೌದಿಯಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂದು ಪ್ರತಿಪಾದಿಸಿವೆ.

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಅರಬ್ ಯೋಗ ಫೌಂಡೇಷನ್ ಮುಖ್ಯಸ್ಥೆ ನೌಫ್ ಅಲ್ ಮರ್ವಾಯಿ ಎಂಬುವವರ ಟ್ವೀಟ್ ಒಂದು ಲಭ್ಯವಾಗಿದೆ. ಅದರಲ್ಲಿ ‘ಖಾಲಿ ಬಿಟ್ಟ ಜಾಗ ಭರ್ತಿ ಮಾಡಿ’ ಎಂದು ಬರೆದು ಕೆಲವು ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ. “ಸೌದಿ ಅರೇಬಿಯಾದ ನ್ಯೂ ವಿಷನ್-2030 ಮತ್ತು ಪಠ್ಯಕ್ರಮವು ಸಹಿಷ್ಣತೆ, ಒಳ್ಳಗೊಳ್ಳುವಿಕೆ ಮತ್ತು ಉದಾರವಾದದಿಂದಾಗಿ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಸಾಮಾಜಿಕ ಅಧ್ಯಯನಗಳ ಪುಸ್ತಕದಲ್ಲಿ ನನ್ನ ಮಗನ ಶಾಲಾ ಪರೀಕ್ಷೆಯ ಸ್ಕ್ರೀನ್ಶಾಟ್. ಹಿಂದೂ ಧರ್ಮ, ಬೌದ್ಧ ಧರ್ಮ, ರಾಮಾಯಣ, ಕರ್ಮ, ಮಹಾಭಾರತ ಮತ್ತು ಧರ್ಮದ ಪರಿಕಲ್ಪನೆಗಳು ಮತ್ತು ಇತಿಹಾಸವನ್ನು ಒಳಗೊಂಡಿದೆ. ನಾನು ಅವನಿಗೆ ಅಧ್ಯಯನ ಮಾಡಲು ಸಹಾಯ ಮಾಡುವುದನ್ನು ಆನಂದಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಆಧರಿಸಿ ಹಲವಾರು ಮಾಧ್ಯಮಗಳು ಸೌದಿಯಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂದು ವರದಿ ಮಾಡಿವೆ.

ಆದರೆ ವಾಸ್ತವ ಏನೆಂದರೇ ಸೌದಿ ಅರೇಬಿಯಾದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಬೋಧಿಸುತ್ತಿರುವುದಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಆದರೆ ಸೌದಿ ವಿಷನ್ 2030 ಸೌದಿ ಅರೇಬಿಯಾದ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಅದರ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಮನರಂಜನೆ ಮತ್ತು ಪ್ರವಾಸೋದ್ಯಮದಂತಹ ಸಾರ್ವಜನಿಕ ಸೇವಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಚೌಕಟ್ಟಾಗಿದೆ. ಇದರ ವಿವರಗಳನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಏಪ್ರಿಲ್ 25, 2016 ರಂದು ಘೋಷಿಸಿದರು.


ಸೌದಿ ವಿಷನ್ 2030 ರ ಅಧಿಕೃತ ವೆಬ್ಸೈಟ್ ನೋಡಿದಾಗ ಅದರಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಆಲ್ಟ್ ನ್ಯೂಸ್ ಸೌದಿ ಅರೇಬಿಯಾ ಮೂಲದ ಹಿರಿಯ ಸಂಪಾದಕರೊಂದಿಗೆ ಮಾತನಾಡಿದೆ. ಅವರು “ರಾಮಾಯಣ ಅಥವಾ ಮಹಾಭಾರತವನ್ನು ಕಲಿಸಲಾಗುವುದು ಎಂದು ಸರ್ಕಾರದಿಂದ ಅಧಿಕೃತ ಹೇಳಿಕೆ ಎಂದಿಗೂ ಬಂದಿಲ್ಲ. ಸೌದಿ ಸಾರ್ವಜನಿಕ/ಸರ್ಕಾರಿ ಶಾಲೆಗಳಲ್ಲಿ ಬೋಧನಾ ಮಾಧ್ಯಮವು ಅರೇಬಿಕ್ ಆಗಿದೆ. ನೌಫ್ ಮರ್ವಾಯಿ ಅವರು ಹಂಚಿಕೊಂಡಿರುವ ಸಮಾಜ ವಿಜ್ಞಾನ ಪರೀಕ್ಷೆಯ ಪತ್ರಿಕೆಯ ಸ್ಕ್ರೀನ್ಶಾಟ್ಗಳು ಇಂಗ್ಲಿಷ್ನಲ್ಲಿವೆ. ಆದ್ದರಿಂದ, ಇದು ಹೆಚ್ಚಾಗಿ ಸರ್ಕಾರೇತರ ಶಾಲಾ ಪಠ್ಯಕ್ರಮವಾಗಿದೆ” ಎಂದಿದ್ದಾರೆ.
ಅರಬ್ ನ್ಯೂಸ್ ವರದಿಗಾರ ನೈಮತ್ ಖಾನ್ ರವರು ಆ ರೀತಿಯ ಯಾವುದೇ ನಿರ್ಣಯವನ್ನು ಸೌದಿ ಸರ್ಕಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ನೂಫ್ ಐ ಮರ್ವಾಯಿಯವರು ಸಹ ನಾನು ನನ್ನ ಮಗನ ಪ್ರಶ್ನೆ ಪತ್ರಿಕೆ ಕುರಿತು ಹೇಳಿದ್ದೇನೆಯೇ ಹೊರತು ರಾಮಾಯಣ ಮಹಾಭಾರತ ಪಠ್ಯ ಬೋಧಿಸಲಾಗುತ್ತದೆ ಎಂದು ಹೇಳಿಲ್ಲ.ನನ್ನ ಟ್ವೀಟ್ ಅನ್ನು ತಿರುಚಿ ಪ್ರಸಾರ ಮಾಡಿದ್ದಾರೆ. ಈ ಕುರಿತು ಯಾವುದೇ ಮಾಧ್ಯಮಗಳು ನನ್ನ ಹೇಳಿಕೆ ಪಡೆಯದೇ ಆ ರೀತಿ ಸುಳ್ಳು ಸುದ್ದಿ ಪ್ರಕಟಿಸಿರುವುದು ತಪ್ಪು ಎಂದು ಆಲ್ಟ್ನ್ಯೂಸ್ ಜೊತೆ ಮಾತನಾಡಿದ್ದಾರೆ.


ಆದ್ದರಿಂದ ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು.


ಇದನ್ನು ಓದಿ: ಸೋನಿ ಲೈವ್ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಎಂಬುದು ಎಡಿಟೆಡ್ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *