ಜಸ್ಟೀಸ್ ದಲ್ವೀರ್ ಭಂಡಾರಿಯವರು ಅಂತರಾಷ್ಟ್ರೀಯ ನ್ಯಾಯಾಲಯದ(ICJ) ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ.

ಭಾರತದ ದೊಡ್ಡ ಗೆಲುವು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚಾಣಕ್ಯ ನೀತಿಯಿಂದ ಜಗತ್ತಿನ ಮುಂದೆ ಮಣಿದ ಬ್ರಿಟನ್; ಜಸ್ಟೀಸ್ ದಲ್ವೀರ್ ಭಂಡಾರಿಯವರು ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್(ICJ)ನ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ದಲ್ವೀರ್ ಭಂಡಾರಿಯವರು ಎಲ್ಲಾ ದೇಶಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳಿಂದ ಒಟ್ಟು 193 ಮತಗಳಲ್ಲಿ 183 ಮತಗಳನ್ನು ಪಡೆದು ಬ್ರಿಟನ್ನಿನ ಜಸ್ಟೀಸ್ ಕ್ರಿಸ್ಟೋಫರ್ ಗ್ರೀನ್‌ಹುಡ್‌ರನ್ನು ಸೋಲಿಸಿದ್ದಾರೆ. ಈ ಮೂಲಕ ಬ್ರಿಟನ್‌ನ 71 ವರ್ಷಗಳ ಅಧಿಪತ್ಯವನ್ನು ಮುರಿದ್ದಾರೆ.

 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ಸಚಿವಾಲಯದ ಆರು ತಿಂಗಳ ಸತತ ಪ್ರಯತ್ನದಿಂದ ಈ ಗೆಲುವು ಸಾಧಿಸಲಾಗಿದೆ. 193 ದೇಶದ ಪ್ರತಿನಿಧಿಗಳನ್ನು ಸಂಪರ್ಕಿಸಿ, ಸುಲಭವಾಗಿ ಗೆಲ್ಲಬಹುದಾದ ಬ್ರಿಟನ್ನಿನ ಅಭ್ಯರ್ಥಿಯ ಎದುರು ಭಾರತದ ಅಭ್ಯರ್ಥಿಯ ಸಾಮರ್ಥ್ಯದ ಕುರಿತು ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸ. 11 ಸುತ್ತಿನ ಮತದಾನದಲ್ಲಿ ಜಸ್ಟೀಸ್ ದಲ್ವೀರ್‌ ಭಂಡಾರಿಯವರು ಒಟ್ಟು 193 ಮತಗಳಲ್ಲಿ 183 ಮತಗಳನ್ನು ಪಡೆದಿದ್ದಾರೆ. ಯುನೈಟೆಡ್ ನೇಷನ್ಸ್ ಸೆಕ್ಯೂರಿಟಿ ಕೌಂಸಿಲ್‌ನ ಒಟ್ಟು 15 ಮತಗಳಲ್ಲಿ 15 ಮತಗಳನ್ನೂ ಪಡೆದುಕೊಂಡಿದ್ದಾರೆ.

ಜಸ್ಟೀಸ್ ದಲ್ವೀರ್ ಭಂಡಾರಿಯವರು 9 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. 183 ದೇಶಗಳು ಭಾರತದ ಪರವಾಗಿ ಮತ ಚಲಾಯಿಸಿದ್ದು ಯಾರು ಸಹ ಮೋದಿಯವರ ಕುರುಡು ಅನುಯಾಯಿಗಳಲ್ಲ, ಮತ್ತು ಎಲ್ಲರೂ ಚಿಂತನಾಶೀಲರೇ. ನಮ್ಮ ದೇಶಕ್ಕೆ ಸ್ವತಂತ್ರ್ಯ ಬಂದು 70 ವರ್ಷಗಳ ನಂತರ ಪ್ರಧಾನಿ ಮೋದಿಯವರು ಜಗತ್ತಿನ ಎಲ್ಲಾ ದೇಶಗಳ ನಡುವೆ ಗೌರವ ಮತ್ತು ಉತ್ತಮ ಸಂಬಂಧ ಹೋಂದಿರುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ.

ಇಂತಹ ದೊಡ್ಡ ಸುದ್ಧಿಯನ್ನು ಭಾರತದ ಯಾವ ಮಾಧ್ಯಮಗಳೂ ವರದಿ ಮಾಡುವುದಿಲ್ಲ. ಅವರಿಗೆ ಮೋದಿಯವರ ವಿರುದ್ಧವಿರುವ ಸುದ್ಧಿಗಳು ಬೇಕಷ್ಟೇ ಅದನ್ನಷ್ಟೇ ಅವರು ಹುಡುಕುವುದು ಮತ್ತು ಪ್ರಸಾರ ಮಾಡುವುದು. ಇದನ್ನು ನಿಮ್ಮ ಇತರ ಗೆಳೆಯರೊಡನೆಯೂ ಹಂಚಿಕೊಳ್ಳಿ. ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವರ್ಷಗಳಿಂದ ಹರಿದಾಡುತ್ತಿದೆ. ಈ ಸುಳ್ಳನ್ನು ಬಿಜೆಪಿ ಪಕ್ಷದ ಅನೇಕ ರಾಜಕಾರಣಿಗಳು ಮತ್ತು ಅನುಯಾಯಿಗಳು ಹಂಚಿಕೊಂಡಿದ್ದಾರೆ. ರಾಜಸ್ತಾನದ ಜಾಲೂರ್‌ನ ಬಿಜೆಪಿ ಶಾಸಕ ಜೋಗೇಶ್ವರ್ ಗಾರ್ಗ್ ಮತ್ತು ಬಿಹಾರದ ಬಿಜೆಪಿ ಜೆನರಲ್ ಸೆಕ್ರೆಟ್ರಿ ನರೇಂದ್ರ ನಾಥ್ ಸಹ ಈ ಸುಳ್ಳನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: ಭಾರತದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿಯವರು ಅಂತರಾಷ್ಟ್ರೀಯ ನ್ಯಾಯಾಲಯದ(ICJ) ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ಸತ್ಯವೇನೆಂದರೆ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್‌ನಲ್ಲಿ ಮುಖ್ಯ ನ್ಯಾಯಾಧೀಶರು ಎಂಬ ಹುದ್ದೇಯೇ ಇಲ್ಲ. ಕೇವಲ ಅಧ್ಯಕ್ಷರು ಮತ್ತು ಉಪಾದ್ಯಕ್ಷರು ಎಂಬ ಹುದ್ದೆಗಳಿವೆ. ಅಂತರಾಷ್ಟ್ರೀಯ ನ್ಯಾಯಾಲಯದ 15 ನ್ಯಾಯಾಧೀಶರಲ್ಲಿ ದಲ್ವೀರ್ ಭಂಡಾರಿಯವರು ಸಹ ಒಬ್ಬರಾಗಿದ್ದಾರೆ. ಇದುವರೆಗೂ ಭಾರತದ ಮೂರು ಜನ ನ್ಯಾಯಾಧೀಶರು ICJಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದರಲ್ಲಿ ನರೇಂದ್ರ ಸಿಂಗ್ ರವರು 1985 ರಿಂದ 1988 ರವರೆಗೆ ICJಯ ಅಧ್ಯಕ್ಷರಾಗಿ  ಕಾರ್ಯ ನಿರ್ವಹಿಸಿದ್ದಾರೆ

ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್‌ನಲ್ಲಿರುವ ಮಾಹಿತಿಯಂತೆ ಇದುವರೆಗೂ 26 ಅಧ್ಯಕ್ಷರು ICJಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದರಲ್ಲಿ ಭಾರತವೂ ಸೇರಿದಂತೆ ವಿವಿಧ ದೇಶದ ನ್ಯಾಯಧೀಶರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇವಲ ನಾಲ್ಕು ಬಾರಿ ಮಾತ್ರ ಬ್ರಿಟನ್ ದೇಶದ ನ್ಯಾಯಧೀಶರು ಅಧ್ಯಕ್ಷರಾಗಿದ್ದಾರೆ ಹಾಗಾಗಿ 71 ವರ್ಷಗಳ ಬ್ರಿಟನ್ ಅಧಿಪತ್ಯವನ್ನು ಭಾರತ ಮುರಿದಿದೆ ಎಂಬುದು ಸುಳ್ಳು. ಇನ್ನೂ ದಲ್ವೀರ್ ಭಂಡಾರಿಯವರು 27 ಏಪ್ರಿಲ್, 2012 ರಿಂದಲೇ ICJಯ ನ್ಯಾಯಾಧೀಶರಾಗಿದ್ದು, 6 ಫೆಬ್ರವರಿ 2018 ರಲ್ಲಿ ಮರು ಆಯ್ಕೆಯಾಗಿದ್ದಾರೆ.  ಪ್ರಸ್ತುತ  ICJಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರು ಅಮೇರಿಕ ಮೂಲದ ಜಡ್ಜ್ ಜಾನ್ ಇ. ಡೊನೊಗ್ಯೂರವರು.  ಇವರ ಆಡಳಿತಾವಧಿ ಮೂರು ವರ್ಷಗಳ ಕಾಲ ಇದ್ದು ನಂತರ ಅಂತರಿಕ ಚುನಾವಣೆಗಳು ಜರುಗುತ್ತವೆ. ಆದ್ದರಿಂದ ದಲ್ವೀರ್ ಭಂಡಾರಿಯವರು 9 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಎಂಬುದು ಸಹ ಸುಳ್ಳು ಸುದ್ದಿಯಾಗಿದೆ.

ಹಾಗಾಗಿ ಜಸ್ಟೀಸ್ ದಲ್ವೀರ್ ಭಂಡಾರಿಯವರು ತಮ್ಮ ಸ್ವಂತ ಶ್ರಮದಿಂದ ಮತ್ತು ಅನುಭವದಿಂದ ICJಯ ನ್ಯಾಯಾಧೀಶರಾಗಿದ್ದಾರೆಯೇ ಹೊರತು ಇದರಲ್ಲಿ ಮೋದಿಯವರ ಶ್ರಮವಿದೆ ಎಂಬುದೂ ಸುಳ್ಳು.


ಇದನ್ನು ಓದಿ: ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *