ಮೋದಿ ಪ್ರಧಾನಿಯಾದ ನಂತರ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು

ಸಾಲ

70 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮೋದಿಯವರು ಪ್ರಧಾನಿಯಾದ ನಂತರ ಮೂರು ವರ್ಷಗಳಲ್ಲಿ ಭಾರತ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಲೆಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದೇ ರೀತಿಯಾಗಿ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಎಲ್ಲಾ ಸಾಲವನ್ನು ತೀರಿಸಿಬಿಟ್ಟಿದ್ದಾರೆ. ಈ ರೀತಿ ಸಾಲ ತೀರಿಸಿರುವ 35 ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಮತ್ತೊಂದು ಪೇಪರ್ ಕಟಿಂಗ್ ಒಳಗೊಂಡಿರುವ ಪೋಸ್ಟರ್ ಸಹ ವೈರಲ್ ಮಾಡಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಪರಿಶೀಲಿಸುವಂತೆ ಕನ್ನಡ ಫ್ಯಾಕ್ಟ್ ಚೆಕ್ ತಂಡಕ್ಕೆ ಮನವಿಗಳು ಬಂದ ಹಿನ್ನೆಲೆಯಲ್ಲಿ ಸತ್ಯ ಪರಿಶೀಲನೆ ನಡೆಸಿದಾಗ ಕಂಡು ಬಂದ ಸಂಗತಿಗಳನ್ನು ಕೆಳಗೆ ದಾಖಲಿಸಲಾಗಿದೆ.

ವಿಶ್ವಬ್ಯಾಂಕ್‌ನಿಂದ ಭಾರತ ಸಾಲ ಪಡೆದಿರುವ ವಿವರ

ಮೋದಿ ಪ್ರಧಾನಿಯಾದ ನಂತರ ವಿಶ್ವ ಸಂಸ್ಥೆಯಲ್ಲಿ ಸಾಲ ಪಡೆದಿಲ್ಲವೇ ಎಂದು ಹುಡುಕಿದಾಗ ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ದಾಖಲೆಯೊಂದು ಕಂಡುಬಂದಿದೆ. ಭಾರತ ಸರ್ಕಾರವು COVID-19 ಸಾಂಕ್ರಾಮಿಕವನ್ನು ಎದುರಿಸಲು ವಿಶ್ವಸಂಸ್ಥೆಯಿಂದ 2.5 ಶತಕೋಟಿ ಡಾಲರ್ ಮೌಲ್ಯದ ಮೂರು ಸಾಲಗಳನ್ನು ಸ್ವೀಕರಿಸಿದೆ ಎಂದು ಹಣಕಾಸು ಸಚಿವಾಲಯವು 15 ಸೆಪ್ಟೆಂಬರ್ 2020 ರಂದು ಉತ್ತರ ನೀಡಿರುವುದು ಕಂಡುಬಂದಿದೆ. ರಾಜ್ಯಸಭೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಮಾಹಿತಿ ಒದಗಿಸಿದ್ದಾರೆ.

ಮೋದಿಯವರು ಪ್ರಧಾನಿಯಾದ ನಂತರ ವಿಶ್ವಬ್ಯಾಂಕ್‌ನಿಂದ ಯಾವ ಯಾವ ಯೋಜನೆಗಳಿಗಾಗಿ ಸಾಲ ಪಡೆದಿದ್ದಾರೆ ಎಂಬ ಪಟ್ಟಿಯಲ್ಲಿ ಇಲ್ಲಿ ನೋಡಬಹುದು. ಸುಮಾರು 88 ಯೋಜನೆಗಳಿಗಾಗಿ ಸಾಲ ಪಡೆಯಲಾಗಿದೆ.

ಪ್ರತಿ ವರ್ಷ ಭಾರತ ವಿಶ್ವಬ್ಯಾಂಕ್‌ನ ಭಾಗವಾದ ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (IBRD) ಮತ್ತು IDA (ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್) ನಿಂದ ಸಾಲ ಪಡೆದ ವಿವರವನ್ನು ಈ ಕೆಳಗೆ ನೋಡಬಹುದು.

ಇನ್ನು ವಿಶ್ವಬ್ಯಾಂಕ್‌ನ ದಾಖಲೆಗಳನ್ನು ಪರಿಶೀಲಿಸಿದಾಗ 1/1/2015 ಮತ್ತು 31/12/2018ರ ಅವಧಿಯಲ್ಲಿ 66 ಯೋಜನೆಗಳಿಗಾಗಿ ವಿಶ್ವಬ್ಯಾಂಕ್‌ನಿಂದ ಭಾರತ ಸರ್ಕಾರ ಧನ ಸಹಾಯ ಪಡೆಯಲಾಗಿದೆ. 2015 ಡಿಸೆಂಬರ್ 15ರಂದು ಸ್ವಚ್ಛ ಭಾರತ್ ಮಿಷನ್ ಅಭಿಯಾನಕ್ಕಾಗಿ 1.5 ಬಿಲಿಯನ್ ಅಮೆರಿಕನ್ ಡಾಲರ್ (₹10,600 ಕೋಟಿ -2019 ರಂತೆ) ಸಾಲ ಪಡೆಯಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ವಿಶ್ವಬ್ಯಾಂಕ್ ಮಾಹಿತಿಯ ಪ್ರಕಾರ, 2019 ರಲ್ಲಿ ಭಾರತಕ್ಕೆ $3277 ಮಿಲಿಯನ್ ಅಥವಾ $3.2 ಶತಕೋಟಿ ಸಾಲ ನೀಡಿದೆ.

ಈ ಎಲ್ಲಾ ಮಾಹಿತಿಗಳ ಆಧಾರದಲ್ಲಿ ಮೋದಿಯವರು ಪ್ರಧಾನಿಯಾದ ನಂತರ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು ಎಂಬುದನ್ನು ದೃಢವಾಗಿ ಹೇಳಬಹುದು.

ಮೋದಿಯವರು ವಿಶ್ವ ಬ್ಯಾಂಕ್‌ನ ಎಲ್ಲಾ ಸಾಲವನ್ನು ಮರುಪಾವತಿ ಮಾಡಿದ್ದಾರೆಯೇ?

2014 ರಿಂದ ಇಲ್ಲಿಯವರೆಗೆ ಕೈಗೊಂಡ 21 ಯೋಜನೆಗಳಿಗೆ $1.1 ಶತಕೋಟಿಗಿಂತ ಹೆಚ್ಚು ಹಣವನ್ನು IDA ಗೆ ಭಾರತವು ಮರುಪಾವತಿ ಮಾಡಬೇಕಿದೆ.

11 ಯೋಜನೆಗಳಿಗೆ ಭಾರತವು IBRD ಯಿಂದ ಪಡೆದ $2.3 ಶತಕೋಟಿಗಿಂತ ಹೆಚ್ಚಿನ ಸಾಲವನ್ನು ವಾಪಸ್ ನೀಡಬೇಕಿದೆ. ಅವುಗಳಲ್ಲಿ ಒಂಬತ್ತು ಯೋಜನೆಗಳಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ನೀಡಲಾಗಿತ್ತು.

ಮೇ 26, 2014 ರಂದು ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ ವಿಶ್ವ ಬ್ಯಾಂಕ್ ಅನುಮೋದಿಸಿದ 88 ಯೋಜನೆಗಳಲ್ಲಿ ಬಹುಪಾಲು ಪೂರ್ಣಗೊಂಡಿದೆ ಮತ್ತು ಉಳಿದವು ಸಕ್ರಿಯವಾಗಿವೆ. ಕೆಲವೊಂದನ್ನು ಕೈಬಿಡಲಾಗಿದೆ. ಸೆಪ್ಟೆಂಬರ್ 30, 2019 ರಂದು ಆರಂಭವಾದ ‘ಒಡಿಶಾ ಇಂಟಿಗ್ರೇಟೆಡ್ ನೀರಾವರಿ ಯೋಜನೆಗೆ $235.50 ಮಿಲಿಯನ್ ವೆಚ್ಚವಾಗಿದೆ. ಇದರಲ್ಲಿ ವಿಶ್ವಸಂಸ್ಥೆಯ IBRD $ 165 ಮಿಲಿಯನ್ ಸಾಲ ನೀಡಿದೆ. ಈ ಯೋಜನೆಗೆ ವಿಶ್ವಬ್ಯಾಂಕ್ ಮಂಡಳಿಯ ಒಪ್ಪಿಗೆ ಮಾತ್ರ ದೊರೆತಿದ್ದು, ಒಪ್ಪಂದಕ್ಕೆ ಸಹಿ ಹಾಕಬೇಕಿದೆ ಎಂಬುದು ಗಮನಾರ್ಹ. ಆದ್ದರಿಂದ ಭಾರತ ವಿಶ್ವಬ್ಯಾಂಕ್‌ಗೆ ತನ್ನ ಎಲ್ಲಾ ಸಾಲವನ್ನು ಮರುಪಾವತಿ ಮಾಡಿಲ್ಲ.

ವಾಸ್ತವದಲ್ಲಿ ವಿಶ್ವಸಂಸ್ಥೆಯಿಂದ ಅತಿ ಹೆಚ್ಚು ಸಾಲ ಪಡೆದ ದೇಶಗಳಲ್ಲಿ ಭಾರತವೂ ಒಂದಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೊದಲ ಅವಧಿಯಲ್ಲಿ ಪಡೆದ ಸಾಲಗಳು ಇದರಲ್ಲಿ ಸೇರಿವೆ. ಭಾರತವು ಮುಖ್ಯವಾಗಿ ಸಾರಿಗೆ, ಆರೋಗ್ಯ, ಶಿಕ್ಷಣ, ಇಂಧನ ಇತ್ಯಾದಿಗಳ ಮೇಲೆ ಕೇಂದ್ರೀಕರಿಸುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯಕ್ಕಾಗಿ ವಿಶ್ವ ಬ್ಯಾಂಕ್ ಅನ್ನು ಅವಲಂಬಿಸಿದೆ. ಮರುಪಾವತಿ ವೇಳಾಪಟ್ಟಿ ಮತ್ತು ಬಾಕಿ ಇರುವ ಮೊತ್ತದ ಕಾರಣದಿಂದಾಗಿ ಈ ಹಲವಾರು ಸಾಲಗಳನ್ನು ಪಾವತಿಸಲಾಗಿಲ್ಲ.  ‘ಭಾರತ: ಶಿಕ್ಷಕರ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಬಿಹಾರ’ ಯೋಜನೆಗೆ 2015 ರಲ್ಲಿ ಸಹಿ ಹಾಕಲಾಯಿತು. ಯೋಜನೆಯು ಜೂನ್ 30, 2020 ರಂದು ಪೂರ್ಣಗೊಂಡಿದೆ. ಆದರೆ ಸಾಲದ ಅಂತಿಮ ಕಂತಿನ ಪಾವತಿಯ ದಿನಾಂಕವು ಮೇ 15, 2040 ಆಗಿದೆ.

ಮೇಲಿನ ಅಂಶಗಳು ಭಾರತ ಸರ್ಕಾರ ಅಥವಾ ಮೋದಿ ಸರ್ಕಾರ ವಿಶ್ವ ಸಂಸ್ಥೆಯ ಎಲ್ಲಾ ಸಾಲಗಳನ್ನು ತೀರಿಸಿದೆ ಎಂಬುದು ಸುಳ್ಳು ಎಂಬುದನ್ನು ನಿರೂಪಿಸುತ್ತವೆ.


ಇದನ್ನೂ ಓದಿ: ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *