ಭಾರತದಲ್ಲೇ ಮೊಟ್ಟಮೊದಲ ಇಂಟರ್ಸಿಟಿ ಎಲೆಕ್ಟ್ರಾನಿಕ್ ಬಸ್ ಸೇವೆಯನ್ನು ಅಳವಡಿಸಿಕೊಂಡ ರಾಜ್ಯ ನಮ್ಮ ಕರ್ನಾಟಕ. “ಸ್ಮಾರ್ಟ್ ಸಿಟಿ” ಯೋಜನೆಯ ಅಡಿಯಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋಟೇಷನ್ ಕಾರ್ಪೋರೇಷನ್(BMTC)ಯು ಮೊದಲು 1 ಅಕ್ಟೋಬರ್ 2021ರಲ್ಲಿ ತನ್ನ ಪ್ರಯೋಗಿಕ ಇ-ಬಸ್ ಸೇವೆಯನ್ನು ಬೆಂಗಳೂರಿನಲ್ಲಿ ನಡೆಸಿತ್ತು. ಇದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ್ದರು. ನಂತರ KSRTCಯು 16 ಜನವರಿ 2023ರಿಂದ ಇಂಟರ್ಸಿಟಿ ಇ-ಬಸ್‌ಗೆ ಚಾಲನೆ ನೀಡಲಾಗಿದ್ದು ಬೆಂಗಳೂರು-ಮೈಸೂರಿನ ಪ್ರಯಾಣಿಕರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಈ ಇ-ಬಸ್ ಯೋಜನೆಯ ಕುರಿತು ಜನರಿಂದ ಮೆಚ್ಚುಗೆ ಗಳಿಸಲು ರಾಜಕೀಯ ಪಕ್ಷಗಳು ಹರಸಾಹಸ ಪಡುತ್ತಿವೆ. ಇದರ ಭಾಗವಾಗಿ ಹಲವು ಸುಳ್ಳುಗಳು ಹರಿದಾಡುತ್ತಿವೆ.
“ದಯವಿಟ್ಟು ಗಮನಿಸಿ ಈ ಬಸ್ ಗಳನ್ನ ಕೇಂದ್ರ ಸರ್ಕಾರ ಕೊಡ್ತಿರೋದು. ಈಗಲೇ ಕಣ್ಣಿಟ್ಟು ನೋಡಳ್ಳಿ ಆಮೇಲೆ ಇಲ್ಲಿ – ಇವು ನಾವೇ ಕೊಟ್ಟಿದ್ದು ಅಂತ ದೊಡ್ಡ ದೊಡ್ಡ ಫೋಟೋ ಹೋಕೋತಾರೆ ಯಾಮಾರಿ ಬಿಡಬೇಡಿ. ಮೈಸೂರಿಗೆ ಮೆಟ್ರೋ: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್, ಮೋದಿ ಘೋಷಣೆ” ಎಂಬ ಪೋಸ್ಟರ್ ಒಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ಇದೇ ಸುಳ್ಳನ್ನು ಪಬ್ಲಿಕ್ ಟಿವಿ ಮತ್ತು ವಿಜಯ ಟೈಮ್ಸ್ ವರದಿ ಮಾಡಿವೆ.
ಫ್ಯಾಕ್ಟ್‌ಚೆಕ್: ಭಾರತದಲ್ಲೇ ಮೊಟ್ಟಮೊದಲ ಇಂಟರ್ಸಿಟಿ ಎಲೆಕ್ಟ್ರಾನಿಕ್ ಬಸ್ ಸೇವೆಯನ್ನು ಹೊಂದಿರುವ ಕರ್ನಾಟಕ ಮುಂದಿನ ದಿನಗಳಲ್ಲಿ FAME (Faster Adoption and Manufacturing of Electric Vehicles)ಯೋಜನೆಯ ಅಡಿಯಲ್ಲಿ ಪ್ರತೀವರ್ಷ ಕೈಬಿಡಲಾಗುವ 400 ಡೀಸೆಲ್ ಬಸ್‌ಗಳನ್ನು ಇ- ಬಸ್‌ಗಳೊಂದಿಗೆ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಕಂಪನಿಯೂ ರಾಜ್ಯಕ್ಕೆ ಇ-ಬಸ್ ಸೇವೆಗಳನ್ನು ಒದಗಿಸುತ್ತಿದ್ದು KSRTCಯು ಇದರ ಖರ್ಚು ಬರಿಸುತ್ತಿದೆ.
ಇನ್ನೂ ಪ್ರಧಾನಿ ಮೋದಿಯವರು ಮೈಸೂರಿಗೆ ಮುಂದಿನ ದಿನಗಳಲ್ಲಿ ಮೆಟ್ರೋ ಬರುವ ಸಾಧ್ಯತೆ ಬಗ್ಗೆ ಉಲ್ಲೇಖಿಸಿದ್ದಾರೇ ಹೊರತು ಆ ಕುರಿತು ಹೆಚ್ಚು ಪ್ರಗತಿ ಕಂಡುಬಂದಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 169 ನಗರಗಳಲ್ಲಿ 10,000 ಎಲೆಕ್ಟ್ರಿಕ್ ಬಸ್ ಗಳ ನಿಯೋಜನೆಗೆ “ಪಿಎಂ ಇ-ಬಸ್ ಸೇವೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ 57,613 ಕೋಟಿ ರೂ. ದೇಶಾದ್ಯಂತ ಸುಮಾರು 10,000 ಹೊಸ ಎಲೆಕ್ಟ್ರಿಕ್ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಅನುರಾಗ್ ಠಾಕೂರ್ 16 ಆಗಸ್ಟ್ 2023ರಂದು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಆದರೆ ಈ ಮೊದಲೇ ಕರ್ನಾಟಕವು ಇ-ಬಸ್ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಪಿಎಂ ಇ-ಬಸ್ ಸೇವೆಯಿಂದ ಬೆಂಗಳೂರು ನರಗರಕ್ಕೆ ಇ-ಬಸ್‌ಗಳು ದೊರೆತರೆ ಹೆಚ್ಚುವರಿಯಾದ ಇ-ಬಸ್ ಸೇವೆಗೆ ಅನುಕೂಲವಾಗಲಿದೆ.
ಇದನ್ನು ಓದಿ: Fact Check : ಮಸೀದಿ ಭೂಮಿ ಮತ್ತು ಆರ್ಟಿಕಲ್ 370 ವಾಪಸ್ಸು ಪಡೆಯುತ್ತೇವೆ ಎಂದು ಕಮಲ್ ನಾಥ್ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.