“ದೀಪಾವಳಿಯನ್ನು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿಯೂ ಸಹ ಅಂದು ರಾಷ್ಟ್ರೀಯ ರಜೆ ಘೋಷಿಸಿದ್ದಾರೆ. ಆದರೆ ಭಾರತದಲ್ಲಿ ಒಂದು ರಾಜ್ಯ ಮಾತ್ರ ಸಡಗರದಿಂದ ದೀಪಾವಳಿಯನ್ನು ಆಚರಿಸುವುದಿಲ್ಲ. ನಿಜ ನೀವು ಕೇಳಿದ್ದು ಸತ್ಯ. ಭಾರತದಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯಂದೇ ಭಗವಾನ್ ರಾಮ ತನ್ನ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಕೇರಳದಲ್ಲಿ ಈ ಹಬ್ಬವನ್ನು ಆಚರಿಸುವುದಿಲ್ಲ. ಇದರ ಕಾರಣ ಏನು ಅಂದರೆ ಆ ದಿನವೇ ಮಹಾರಾಜ ಮಹಾಬಲಿಯು ಸಾವನ್ನಪ್ಪಿದ್ದರಿಂದ ಆ ದಿನ ದೀಪಾವಳಿಯನ್ನು ಆಚರಿಸುವುದಿಲ್ಲ. ಇದರ ಹಿಂದೆ ಇನ್ನೊಂದು ಕಾರಣವಿದೆ ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇರುವುದರಿಂದ ಕೂಡ ಹಬ್ಬವನ್ನು ಆಚರಿಸುವುದಿಲ್ಲ.” ಎಂದು ಆಜ್‌ತಕ್ ನ ವರದಿಗಾರ್ತಿ ತಿಳಿಸಿದ್ದಾರೆ. ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇದೆ ಎಂದಿರುವ ಕಾರಣಕ್ಕೆ ಅನೇಕರು ಅಜ್‌ತಕ್ ವರದಿಯನ್ನು ಟೀಕಿಸಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿದ್ದು 2011ರ ಜನಗಣತಿಯ ಪ್ರಕಾರ 54.9% ರಷ್ಟು ಹಿಂದುಗಳಿದ್ದಾರೆ. ಕೇರಳವು ಭಾರತದ ಉಳಿದ ಭಾಗಗಳಿಗಿಂತ ವಿಭಿನ್ನ ಕ್ಯಾಲೆಂಡರ್ ಮತ್ತು ಹವಾಮಾನವನ್ನು ಅನುಸರಿಸುತ್ತದೆ. ದೀಪಾವಳಿಯು ಮಳೆಗಾಲದ ಅಂತ್ಯ ಮತ್ತು ಉತ್ತರದಲ್ಲಿ ಚಳಿಗಾಲದ ಆರಂಭವನ್ನು ಸೂಚಿಸುತ್ತದೆ, ಆದರೆ ಕೇರಳವು ಯಾವುದೇ ವಿಶಿಷ್ಟ ಋತುಗಳಿಲ್ಲದ ಉಷ್ಣವಲಯದ ಹವಾಮಾನವನ್ನು ಹೊಂದಿರುತ್ತದೆ.
ಕೇರಳಕ್ಕೆ ರಾಮಾಯಣದ ಪ್ರಭಾವ ಕಡಿಮೆ ಇರುವ ಕಾರಣದಿಂದಲೂ ಸಹ ದೀಪಾವಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿಲ್ಲ. ಕೇರಳದಲ್ಲಿ ಹಿಂದುಗಳಂತೆಯೇ ಕ್ರಿಶ್ಚಿಯನ್ನರು ಮತ್ತು ಮುಸ್ಲಿಂ ಸಮುದಾಯದ ಹಬ್ಬಗಳಿಗೂ ಸಮಾನವಾದ ಪ್ರಾಶಸ್ತ್ಯ ನೀಡುವ ಕಾರಣದಿಂದಲೂ ದೀಪಾವಳಿ ಹಿಂದುಗಳ ಕೂಡಿಸುವ ಹಬ್ಬವಾಗದೇ ಉಳಿದಿದೆ. ಬಹುಸಾಂಸ್ಕೃತಿಕತೆಯ ಪ್ರಭಾವ ಹೊಂದಿರುವ ಜನರ ನಂಬಿಕೆಯಲ್ಲಿನ ವ್ಯತ್ಯಾಸವು ಸಹ ಪ್ರಮುಖ ಅಂಶವಾಗಿದೆ.
ಇನ್ನೂ ಬಹುಮಖ್ಯವಾದ ಕಾರಣ ಎಂದರೆ ಕೇರಳದ ಪ್ರಸಿದ್ಧ ರಾಜ ಬಲಿ ಚಕ್ರವರ್ತಿಯನ್ನು ಕೊಂದ ನೆನಪಿಗೆ ದೀಪಾವಳಿಯನ್ನು ಆಚರಿಸುವುದನ್ನು ಕೇರಳಿಗರು ನಿರಾಕರಿಸಿದ್ದಾರೆ. ಆದ್ದರಿಂದ ಕೇರಳದಲ್ಲಿ ದೀಪಾವಳಿ ಪ್ರಸಿದ್ದಿ ಪಡೆದಿಲ್ಲವೇ ಹೊರತು ಹಿಂದುಗಳ ಸಂಖ್ಯೆ ಕಡಿಮೆ ಇರುವುದರಿಂದ ದೀಪಾವಳಿಯನ್ನು ಆಚರಿಸುವುದಿಲ್ಲ ಎಂಬ ಆಜ್‌ತಕ್ ವರದಿ ಸುಳ್ಳು.
ಇದನ್ನು ಓದಿ: ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ