400 ಸಂತರು ಬೆಂಕಿಯ ಮೇಲೆ ಮಲಗಿದರೂ ಏನೂ ಆಗಲಿಲ್ಲವೆಂದು ಸಾಕ್ಷ್ಯಚಿತ್ರದ ವಿಡಿಯೋ ಹಂಚಿಕೆ

ಬೆಂಕಿಯ

“ಉತ್ತರಖಂಡದ ಹರಿದ್ವಾರದಲ್ಲಿ 2021ರ ಕುಂಭಮೇಳದಲ್ಲಿ, ಕುಂಭ ಸ್ನಾನದ ಮೊದಲು ಸುಮಾರು 400 ಸಾಧುಗಳು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುವುದನ್ನು ಬಿಬಿಸಿ ತಂಡವು ನೋಡಿದೆ.  ಈ ಸಂದರ್ಭದಲ್ಲಿ ಅವರು ವಿಡಿಯೋ ತೆಗೆದಿದ್ದಾರೆ.  ತೀವ್ರತೆರೆನಾದ ಬೆಂಕಿಯ ಜ್ವಾಲೆಯಿಂದ BBC ಕ್ಯಾಮರಾ ಸಿಬ್ಬಂದಿ  ದೂರ ಸರಿಯಬೇಕಾಯಿತು. ಆದರೆ ಉರಿಯುತ್ತಿರುವ ದಿಮ್ಮಿಗಳ ಮೇಲೆ ಮಲಗಿದ್ದ ಸಂತರಿಗೆ ಏನೂ ಆಗಲಿಲ್ಲ!. ಅಲ್ಲಿ ಬೆಂಕಿ ನಂದಿಸುವ ರಾಸಾಯನಿಕಗಳು ಸಹ ಇರಲಿಲ್ಲ. ಈ ಸಂತರನ್ನು ಸಿದ್ಧ ಸಂತರೆಂದು ಕರೆಯುತ್ತಾರೆ.  ನಂತರ BBC ತಂಡ ಅದನ್ನು ತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡಿತು. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿರುವುದು ನಿಜಕ್ಕೂ ನಮ್ಮ ಜನ್ಮದ ಭಾಗ್ಯ” ಎಂಬ ಪ್ರತಿಪಾದನೆಯೊಂದಿಗೆ ವ್ಯಕ್ತಿಯೊಬ್ಬರು ಬೆಂಕಿಯ ಮೇಲೆ ಮಲಗಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್ 

ಈ ಕುರಿತು ಹುಡುಕಿದಾಗ ಇದೇ ವಿಡಿಯೋದ ತುಣುಕುಗಳು 2008ರಿಂದಲೇ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗಿರುವುದು ಕಂಡುಬಂದಿದೆ.

ಇದು ಮೈಕ್ ವಾಸನ್ ಎಂಬುವವರು 2007ರಲ್ಲಿ ನಿರ್ಮಿಸಿರುವ The Fire Yogi ಎಂಬ ಸಾಕ್ಷ್ಯಚಿತ್ರವಾಗಿದೆ . rudrAgni108 ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 47 ನಿಮಿಷಗಳ ಪೂರ್ಣ ಸಾಕ್ಷ್ಯಚಿತ್ರವನ್ನು 02 ನವೆಂಬರ್ 2011ರಂದು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದ 20ನೇ ನಿಮಿಷದಲ್ಲಿ ಸದ್ಯ ವೈರಲ್ ಆಗುತ್ತಿರುವ ದೃಶ್ಯಗಳು ಇರುವುದು ಕಾಣುತ್ತದೆ.

 

‘ದಿ ಫೈರ್ ಯೋಗಿ’ ಬಗ್ಗೆ ಹುಡುಕಿದಾಗ ಈ ಸಾಕ್ಷ್ಯಚಿತ್ರ ತಮಿಳುನಾಡಿನ ತಂಜಾವೂರಿನ ಯೋಗಿ ರಾಂಭೌ ಸ್ವಾಮಿ (ಯೋಗಿ ರಾಮಬಾಹು ಸ್ವಾಮಿ)ಯವರು ಬೆಂಕಿಯೊಂದಿಗೆ ನಡೆಸುವ ಆಚರಣೆಗಳಿಗೆ ಸಂಬಂಧಿಸಿದೆ. ಅವರು ವಿಶಿಷ್ಟ ಉಸಿರಾಟದ ತಂತ್ರಗಳ ಮೂಲಕ ಬೆಂಕಿಯಿಂದ ಯಾವುದೇ ಅಪಾಯಗಳು ಉಂಟಾಗದಂತೆ ನೋಡಿಕೊಂಡಿದ್ದಾರೆ. ಅವರು ಹಲವು ವರ್ಷಗಳಿಂದ ಈ ರೀತಿಯ ಅಗ್ನಿ ಆಚರಣೆಗಳನ್ನು ನಡೆಸುತ್ತಿದ್ದಾರೆ, ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂದು ವಿಡಿಯೋ ವಿವರಣೆಯಲ್ಲಿ ಬರೆಯಲಾಗಿದೆ.

ಈ ಕುರಿತು ಆಜ್ ತಕ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ದಿ ಫೈರ್ ಯೋಗಿ ಸಾಕ್ಷ್ಯಚಿತ್ರದ ಡಿವಿಡಿಯನ್ನು ಅಕ್ಟೋಬರ್ 17, 2007 ರಲ್ಲಿ ಅಮೆಜಾನ್‌ ಮಾರಾಟಕ್ಕೆ ಬಿಟ್ಟಿರುವುದು ಸಹ ಕಂಡುಬಂದಿದೆ.

ನವೆಂಬರ್ 17, 2009 ರ ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಯೋಗಿ ರಾಂಭೌ ಸ್ವಾಮಿ ಕಲಬುರಗಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆಸಿದ ಅಗ್ನಿಹೋತ್ರ ಆಚರಣೆಯ ಬಗ್ಗೆ ವಿವರಿಸಲಾಗಿದೆ. ಆದರೆ ಹಲವಾರು ವೈದ್ಯರು, ಮನಶ್ಶಾಸ್ತ್ರಜ್ಞರು ಮತ್ತು ವಿಚಾರವಾದಿಗಳು ಈ ಘಟನೆಯನ್ನು ‘ಭ್ರಮೆ’ ಎಂದು ಕರೆದಿದ್ದಾರೆ ಮತ್ತು ಇದು ಯಾವುದೇ ಪವಾಡವಲ್ಲ ಬದಲಿಗೆ ಕಣ್ಕಟ್ಟಾಗಿದೆ ಎಂದು ಟೀಕಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕುಂಭಮೇಳದಲ್ಲಿ ಸಿದ್ಧ ಸಾಧುಗಳ ಕುರಿತು BBC ತಂಡವು ಚಿತ್ರೀಕರಿಸಿದ ವೀಡಿಯೊ ಎಂದು ತಂಜಾವೂರಿನ ಯೋಗಿ ರಾಂಭೌ ಸ್ವಾಮಿ ಕುರಿತಾದ ‘ದಿ ಫೈರ್ ಯೋಗಿ’ ಸಾಕ್ಷ್ಯಚಿತ್ರದ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಬಿಬಿಸಿ ಈ ರೀತಿಯ ಯಾವುದೇ ವಿಡಿಯೋ ಪ್ರಸಾರ ಮಾಡಿಲ್ಲ. ಬದಲಿಗೆ ಅದೊಂದು ಸಾಕ್ಷ್ಯಚಿತ್ರವಾಗಿದೆ ಹೊರತು ನಿಜವಾಗಿ ನಡೆದ ಘಟನೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಮತ್ತು ಈ ವಿಡಿಯೋಗೂ ಹರಿದ್ವಾರದ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ: ಜವಹರಲಾಲ್ ನೆಹರೂರವರು ಲಂಡನ್ ಪೌರತ್ವವನ್ನು ತೆಗೆದುಕೊಂಡಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *