ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು

ರೈಲು

ಪಶ್ಚಿಮ ಬಂಗಾಳದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿರುವ ಮುರಿಶಿದಬಾದ್ ಜಿಲ್ಲೆಯಲ್ಲಿ ನಮಾಜ್ ಮಾಡುವಾಗ ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತದೆ ಎಂದು ರೈಲು ಹಳಿಗಳನ್ನು ಕಾನೂನುಬಾಹಿರವಾಗಿ ಕಿತ್ತು ಬಿಸಾಡಿದ್ದಾರೆ, ಇನ್ನು ಮಠ-ಮಂದಿರ ದೇವಸ್ಥಾನಗಳು ಅವರಿಗೆ ಯಾವ ಲೆಕ್ಕ ಎಂದು ಪ್ರತಿಪಾದಿಸಿ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ನಮಾಜ್ ಮಾಡಲು ರೈಲಿನ ಶಬ್ದದಿಂದ ತೊಂದರೆ ಆಗುತ್ತದೆ ಎಂದು ರೈಲು ಹಳಿ ಮತ್ತು ರೈಲನ್ನೆ ನಾಶ ಮಾಡಲು ಪ್ರಯತ್ನ ಪಡುತ್ತಿರುವ ಜನ ಎಂದು ಮತ್ತೊಂದು ವಿಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ಇವುಗಳ ಹಿನ್ನಲೆಯೇನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಮೊದಲ ವಿಡಿಯೋ

ಇದೇ ರೀತಿಯ ಶೀರ್ಷಿಕೆಯಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರೈಲ್ವೆ ಹಳಿ ದ್ವಂಸಗೊಳಿಸುವಾಗ ಪ್ಲಾಟ್‌ಫಾರ್ಮ್‌ ಮೇಲೆ ಬರೆದಿರುವ ‘ನೋಪರಾ ಮಹಿಷಾಸುರ್’ ರೈಲು ನಿಲ್ದಾಣದ ಹೆಸರು ಕಾಣಿಸುತ್ತದೆ.  ಸಂಬಂಧಿತ ಕೀವರ್ಡ್‌ಗಳೊಂದಿಗೆ ಫೇಸ್‌ಬುಕ್ ನಲ್ಲಿ ಸರ್ಚ್ ಮಾಡಿದಾಗ ವೈರಲ್ ವಿಡಿಯೊದ ಮೂಲ ಆವೃತ್ತಿಯನ್ನು ಕಂಡುಬಂದಿದೆ. ಈ ವೀಡಿಯೊವನ್ನು ಡಿಸೆಂಬರ್ 2019 ರಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಈ ದೃಶ್ಯಗಳು ಪಶ್ಚಿಮ ಬಂಗಾಳದ ನೋಪರಾ ಮಹಿಷಾಸುರ್ ರೈಲ್ವೆ ನಿಲ್ದಾಣದ್ದು ಎಂದು ತಿಳಿದುಬಂದಿದೆ.

ಯುವಕರ ಗುಂಪು ನಿಲ್ದಾಣವನ್ನು ಧ್ವಂಸಗೊಳಿಸುತ್ತಿರುವ ಘಟನೆಗೆ ಸಂಬಂಧಿಸಿದ ಕೆಲವು ಇತರ ದೃಶ್ಯಗಳನ್ನು ಇಲ್ಲಿ ನೋಡಬಹುದು. ಈ ದಾಳಿಯನ್ನು ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ನೋಪರಾ ಮಹಿಷಾಸೂರ್ ರೈಲು ನಿಲ್ದಾಣವನ್ನು ಧ್ವಂಸಗೊಳಿಸಿದ ಸಂದರ್ಭದ್ದು ಎಂದು ವರದಿಗಳು ಉಲ್ಲೇಖಿಸಿವೆ.

ಅಲ್ಲದೆ, ಈ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನಾಕಾರರು ಬಂಗಾಳದ ಹಲವು ರೈಲು ನಿಲ್ದಾಣಗಳನ್ನು ಧ್ವಂಸಗೊಳಿಸಿದ ವರದಿಗಳಿವೆ ಮತ್ತು ಈ ಕುರಿತು 17 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎರಡನೇ ವಿಡಿಯೋ

ಈ ವಿಡಿಯೊದಲ್ಲಿರುವ ದೃಶ್ಯಗಳು ತಮಿಳುನಾಡಿನ ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿವೆ. ಚೆನ್ನೈ ಪಚಯ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳ ನಡುವಿನ ಕಲಹ ಗಲಾಟೆಗೆ ಕಾರಣವಾಗಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ.

ಬೂಮ್ ಲೈವ್ ಮಾಧ್ಯಮವು ಸಮೀಪದ ಸಾಗರ್ದಿಘಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಿಯೋತೋಷ್ ಸಿನ್ಹಾ ಅವರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದೆ. ಅವರು, “ಈ ಪ್ರದೇಶದಲ್ಲಿ 2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದೆ ಮತ್ತು ನಮಾಜ್ ಮಾಡುವುದಕ್ಕೆ ತೊಂದರೆ ಎಂಬುದು ಸುಳ್ಳು” ಎಂದು ಧೃಢಪಡಿಸಿದ್ದಾರೆ.

ಹಾಗಾಗಿ ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲ್ವೆ ನಿಲ್ದಾಣ ಧ್ವಂಸ ಎಂಬುದು ಸುಳ್ಳು. ಕೇವಲ ಮುಸ್ಲಿಮರ ಮೇಲಿನ ದ್ವೇಷದಿಂದಾಗಿ ಈ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ.


ಇದನ್ನೂ ಓದಿ; ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ನಿಲ್ಲಿಸಲು ಇರಾನ್ ಮೋದಿಯವರ ಸಹಾಯ ಕೇಳಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *