ಎಡಿಡೆಟ್ ವಿಡಿಯೋ ಹಂಚಿಕೊಂಡು ಸುಳ್ಳು ಹರಡಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ

ವಿಡಿಯೋ

ನವೆಂಬರ್ 25ರ ಶನಿವಾರದಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ಹಾಲಿ ಸಿಎಂ ಅಶೋಕ್ ಗೆಹ್ಲೋಟ್‌ರವರು ಟೋಂಕ್‌ನಲ್ಲಿ ತಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಭಾಷಣ ಮಾಡುವ ವೇಳೆ ಸಭಿಕರು ಮೋದಿ ಮೋದಿ ಎಂದು ಕೂಗುವ ಮೂಲಕ ಗೆಹ್ಲೋಟ್ ಭಾಷಣಕ್ಕೆ ಅಡ್ಡಿಪಡಿಸಿ ಅವಮಾನ ಮಾಡಿದ್ದಾರೆ ಎಂದು 17 ಸೆಕೆಂಡ್‌ಗಳ ವಿಡಿಯೋವನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೋದಿಜೀಯವರ ಗ್ಯಾರಂಟಿ, ಕೇವಲ ಮೋದಿ ಮಾತ್ರ ಗೆಲ್ಲುವುದು ಎಂಬ ಶೀರ್ಷಿಕೆಯಡಿಯಲ್ಲಿ ಹಿಮಂತ ಶರ್ಮಾ ಟ್ವೀಟ್ ಮಾಡಿದ್ದಾರೆ.

ಇದು ನಿಜವೇ ಎಂದು ಪರಿಶೀಲಿಸಿದಾಗ ಇದು ಬಿಜೆಪಿ ಐಟಿ ಸೆಲ್ ಎಡಿಟ್ ಮಾಡಿರುವ ನಕಲಿ ವಿಡಿಯೋ ಎಂದು ಸಾಬೀತಾಗಿದೆ. ಅಶೋಕ್ ಗೆಹ್ಲೋಟ್‌ರವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆ ಚುನಾವಣಾ ಭಾಷಣದ ಲೈವ್ ಮಾಡಲಾಗಿದೆ.  ವಿಡಿಯೋದ 2.13ನೇ ಸೆಕೆಂಡ್‌ನಲ್ಲಿ ಕೆಲವರು ಗದ್ದಲ ಮಾಡುತ್ತಾರೆ. ಆಗ ಗೆಹ್ಲೋಟ್‌ರವರು,  ನಿಲ್ಲಿಸಿ, ನೀವು ಏಕೆ ಬಂದಿದ್ದೀರಿ? ಕಾಂಗ್ರೆಸ್ ಅಭ್ಯರ್ಥಿ ಘಾಸಿ ಲಾಲ್ ಚೌಧರಿ ಅವರನ್ನು ಬೆಂಬಲಿಸುತ್ತೀರೊ, ಇಲ್ಲವೋ ಎಂದು ಪ್ರಶ್ನಸಿದ್ದಾರೆ. ಆಗ ಜನರು ಗದ್ದಲ ನಿಲ್ಲಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮೋದಿ ಮೋದಿ ಎಂಬ ಯಾವ ಘೋಷಣೆಗಳು ಸಹ ಕೇಳಿಸುವುದಿಲ್ಲ.

ಲಾಲ್ ಚೌಧರಿ ಅವರು ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಎಡಿಟೆಡ್ ಆಗಿದ್ದು, ನಕಲಿಯಾಗಿದೆ ಮತ್ತು ಒರಿಜಿನಲ್ ವಿಡಿಯೋ ಇಲ್ಲಿದೆ ಎಂದು ಎರಡು ವಿಡಿಯೋಗಳ ಹೋಲಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರ ಕಚೇರಿಯ ಸಿಬ್ಬಂದಿ, ಗೆಹ್ಲೋಟ್‌ರವರು ಭಾಷಣ ಮಾಡುವಾಗ ಕೆಲವರು ಅಶೋಕ್ ಗೆಹ್ಲೋಟ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಅದರಿಂದ ಭಾಷಣಕ್ಕೆ ಅಡ್ಡಿಯಾಗುತ್ತದೆ ಎಂದು ಸುಮ್ಮನಿರಿಸಲಾಗಿದೆ. ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ ಎಂಬುದು ಸುಳ್ಳು ಎಂದು ಮಾಧ್ಯಮದವರಿಗೆ ಸ್ಪಷ್ಟೀಕರಣ ನೀಡಲಾಗಿದೆ. ಕೆಳಗಿನ ವಿಡಿಯೋ ನೋಡಿ.

ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಪತ್ರಕರ್ತ ಕೇಸರ್ ಕಿರಣ್ ವೆಬ್‌ಸೈಟ್ ಸಂಪಾದಕ ಅಬ್ದುಲ್ಲಾ ಖಾನ್ ರವರರನ್ನು ಬೂಮ್ ಸಂಪರ್ಕಿಸಿದೆ. ಅವರು “ಅಲ್ಲಿ ಮೋದಿ ಮೋದಿ ಎಂಬ ಘೋಷಣೆ ಯಾರೂ ಕೂಗಿಲ್ಲ, ಬದಲಿಗೆ ಪ್ರೇಕ್ಷಕರು ‘ಗೆಹ್ಲೋಟ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಅಶೋಕ್ ಗೆಹ್ಲೋಟ್ ಆ ಗದ್ದಲಕ್ಕೆ ಪ್ರತಿಕ್ರಿಯೆ ನೀಡಿದರು” ಎಂದು ತಿಳಿಸಿದ್ದಾರೆ.

ಕಳೆದ ಸೆಪ್ಟಂಬರ್ ತಿಂಗಳಿನಲ್ಲಿಯೂ ಸಹ ಗೆಹ್ಲೋಟ್ ಕಾರಿನ ಮುಂದೆ ಪ್ರೇಕ್ಷರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆಂದು ಎಡಿಟ್ ಮಾಡಿದ ನಕಲಿ ವಿಡಿಯೋ ಹಂಚಿಕೊಳ್ಳಲಾಗಿತ್ತು. ಈಗಲೂ ಅದೇ ತಂತ್ರ ಅನುಸರಿಸಲಾಗಿದೆ. ಆದರೆ ಅಲ್ಲಿ ನಿಜವಾಗಿಯೂ ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಿಲ್ಲ. ಬದಲಿಗೆ ಇದು ಬಿಜೆಪಿ ಐಟಿ ಸೆಲ್ ಮಾಡಿದ ಕುತಂತ್ರವಾಗಿದೆ. ಅದನ್ನು ಅಸ್ಸಾಂ ಸಿಎಂ ಹಿಮಂತ ಶರ್ಮಾ ಸಹ ಹಂಚಿಕೊಂಡು ಸುಳ್ಳು ಹರಡಿದ್ದಾರೆ.


ಇದನ್ನೂ ಓದಿ: Fact Check: ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *