ಏಕದಿನ ವಿಶ್ವಕಪ್ ಕಿಕೆಟ್ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತ ತಂಡದ ಆಟಗಾರರ ಮೇಲೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಕುರಿತು ಹಲವು ರೀತಿಯಾದ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ.
ಅವುಗಳಲ್ಲಿ ಪ್ರಮುಖವಾಗಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿಯೆಂದರೆ ರೋಹಿತ್ ಶರ್ಮಾ ಅವರ ನಿವೃತ್ತಿ ವಿಚಾರ ಇದಕ್ಕೆ ಸಂಬಂಧ ಪಟ್ಟಂತೆ ಪೋಸ್ಟರ್‌ವೊಂದು ವೈರಲ್ ಕೂಡ ಆಗಿತ್ತು ಅದರಲ್ಲಿ “ಬ್ರೆಕಿಂಗ್ ನ್ಯೂಸ್.. ರೋಹಿತ್ ಶರ್ಮಾ ಅವರು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ” ಎಂದು ಹಂಚಿಕೊಳ್ಳಲಾಗಿತ್ತು
ಈ ಕುರಿತು ಫ್ಯಾಕ್ಟ್‌ಚೆಕ್ ಮಾಡಿದಾಗ ರೋಹಿತ್ ಶರ್ಮಾ ಅವರು ಎಲ್ಲಿಯೂ ತಾವು ಎಲ್ಲಾ ಮಾದರಿಯ ಕ್ರಿಕೆಟ್ ತ್ಯಜಿಸುತ್ತೇನೆ ಎಂದು ಹೇಳಿಲ್ಲ. ಲಭ್ಯವಿರುವ ಬಿಸಿಸಿಐ ಮೂಲಗಳ ಪ್ರಕಾರ ರೋಹಿತ್ ಶರ್ಮಾ ಅವರು ಮುಂಬರುವ ಟಿ-20 ವಿಶ್ವಕಪ್‌ನ ನಂತರದಲ್ಲಿ ಟಿ-20 ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಬಹದು.
ಆ ಮೂಲಕ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗಳಲ್ಲಿ ಹೆಚ್ಚು ಗಮನ ಹರಿಸಬಹುದು ಎನ್ನಲಾಗುತ್ತಿದೆ. ಆದರೆ ಇದು ಕೂಡ ಅಧಿಕೃತವಾಗಿ ಬಿಸಿಸಿಐ ಹೇಳಿಲ್ಲ. ಆದರೂ ಕೂಡ ರೋಹಿತ್ ಶರ್ಮಾ ಅವರು ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ ಎಂದು ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಎಲ್ಲಾ ಸುದ್ದಿಗಳನ್ನು ಒಮ್ಮೆ ಪರಿಶೀಲಿಸಿ ನೋಡಿದರೆ ರೋಹಿತ್ ಶರ್ಮಾ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ರಾಜಿನಾಮೆ ನೀಡಿದ್ದಾರೆ ಎಂಬುದು ಸುಳ್ಳು ಎಂದು ಸುಲಭವಾಗಿ ತಿಳಿಯುತ್ತದೆ.
ಇನ್ನು ಇದರ ಜೊತೆ ರೋಹಿತ್ ಶರ್ಮಾ ಅವರ ಕುರಿತು ಮತ್ತೊಂದು ಸುಳ್ಳು ಸುದ್ದಿ ಕೂಡ ವ್ಯಾಪಕವಾಗಿ ಹಬ್ಬತ್ತಿದೆ ಅದರಲ್ಲಿ ರೋಹಿತ್ ಶರ್ಮಾ ಅವರು ಮೈದಾನದಲ್ಲೇ ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದು ಆಶಿರ್ವಾದವನ್ನು ಪಡೆದುಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಪರಿಶೀಲನೆ ನಡೆಸಿದಾಗ ಬಯಲಾದ ಸತ್ಯವೇ ಬೇರೆಯದ್ದಾಗಿದೆ.
ಫೈನಲ್ ಪಂದ್ಯ ಮುಗಿದ ನಂತರ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ನೀಡಲು ಪ್ರಧಾನಿ ಮೋದಿಯವರು ಆಸ್ಟ್ರೇಲಿಯಾದ ಡೆಪ್ಯುಟಿ ಪಿಎಂ ಜೊತೆ ಮೈದಾನದ ಪೋಡಿಯಂ ಕಡೆ ನಡೆದುಕೊಂಡು ಹೋಗುತ್ತಿರುವ ಫೋಟೊ ಇದಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿಯಲ್ಲಿ ಈ ವಿಡಿಯೋ ನೋಡಬಹುದು. ಆದರೆ ಆ ವೇಳೆಯಲ್ಲಿ ರೋಹಿತ್ ಶರ್ಮಾ ಹಾಜರಿರಲಿಲ್ಲ. ಆದರೆ ಕಿಡಿಗೇಡಿಗಳು ಎಡಿಟ್ ಮಾಡಿ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆಯ ಫೋಟೊ ಸೇರಿಸಿ ತಿರುಚಿದ್ದಾರೆ.
ಇನ್ನು ಇದರ ಜೊತೆ ರೋಹಿತ್ ಶರ್ಮಾ ಮಗಳು ಶಮಾರಿಯಾ ಶರ್ಮಾ ಒಂದು ತಿಂಗಳಲ್ಲಿ ಅವರು ಮತ್ತೆ ನಕ್ಕರು ಎಂದು ಹೇಳಿದ್ದಾರೆ. ಫೈನಲ್ ಸೋಲಿನ ಬಳಿಕ ರೋಹಿತ್ ಶರ್ಮಾ ಮಗಳ ಕ್ಯೂಟ್ ಪ್ರತಿಕ್ರಿಯೆ ಎಂದು ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಕುರಿತು ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿವೆ. ಆದರೆ ಇದು ಹಳೆಯ ವಿಡಿಯೋವಾಗಿದೆ.
ಈ ಕುರಿತು ಹುಡುಕಿದಾಗ ಒಂದು ವರ್ಷದ ಹಿಂದಿನ ವಿಡಿಯೋ ಎಂದು ತಿಳಿದುಬಂದಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೋವನ್ನು ಜೂನ್ 28, 2022ರಂದು ಅಪ್ಲೋಡ್ ಮಾಡಲಾಗಿದೆ. ಕಳೆದ ವರ್ಷ ರೋಹಿತ್ ಶರ್ಮಾರವರಿಗೆ ಅನಾರೋಗ್ಯ ಇದ್ದ ಸಮಯದಲ್ಲಿ ಆ ವಿಡಿಯೋ ಚಿತ್ರೀಕರಿಸಿದ್ದು ಎಂದು ತಿಳಿದು ಬಂದಿದೆ.
ಅವರು ರೂಮ್‌ನಲ್ಲಿದ್ದಾರೆ, ಪಾಸಿಟಿವ್ ಆಗಿದ್ದಾರೆ, ಒಂದು ತಿಂಗಳಲ್ಲಿ ಅವರು ಮತ್ತೆ ನಕ್ಕರು ಎಂದು ಶಮಾರಿಯ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ವಿಶ್ವಕಪ್ ಸೋಲಿನ ನಂತರ ರೋಹಿತ್ ಶರ್ಮಾ ಮಗಳು ತಂದೆಯ ಬಗ್ಗೆ ಕ್ಯೂಟ್ ಆಗಿ ಪ್ರತಿಕ್ರಿಯೆ ನೀಡಿದ್ದಾಳೆ ಎಂದು ತಪ್ಪಾಗಿ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು
ವಿಡಿಯೋ ನೋಡಿ: ರಾಜಸ್ಥಾನ ಚುನಾವಣೆ ಸಂಬಂಧ ಎಡಿಡೆಟ್ ವಿಡಿಯೋ ಹಂಚಿಕೊಂಡು ಸುಳ್ಳು ಹರಡಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ