ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು AI ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

Uttarkashi

ಇಲಿ-ರಂಧ್ರ(Rat-hole) ಗಣಿಗಾರಿಕೆಯು ಸಣ್ಣ ಗುಂಡಿಗಳನ್ನು ಅಗೆಯುವ ಮೂಲಕ ಕಲ್ಲಿದ್ದಲನ್ನು ಹೊರತೆಗೆಯುವ ಒಂದು ವಿಧಾನ, ಈ ಗಣಿಗಾರಿಕೆಯು ಹಸ್ತಚಾಲಿತ ಕಲ್ಲಿದ್ದಲು ಹೊರತೆಗೆಯುವಿಕೆಯ ಪ್ರಾಚೀನ, ಅಧಿಕೃತವಾಗಿ ನಿಷೇಧಿತ ವಿಧಾನವಾಗಿದ್ದು, ಇದು ಗಣಿಗಾರರು ಕಲ್ಲಿದ್ದಲನ್ನು ಹೊರತೆಗೆಯಲು ಭೂಮಿಗೆ ಇಳಿಯುವ ಅತ್ಯಂತ ಕಿರಿದಾದ, ಲಂಬವಾದ ಶಾಫ್ಟ್‌ಗಳನ್ನು ಅಗೆಯುವುದನ್ನು ಒಳಗೊಂಡಿರುತ್ತದೆ. ಈ ಅಭ್ಯಾಸವನ್ನು 2014 ರಲ್ಲಿ ಕಲ್ಲಿದ್ದಲು ಹೊರತೆಗೆಯುವ ಅವೈಜ್ಞಾನಿಕ ವಿಧಾನವೆಂದು ನಿಷೇಧಿಸಲಾಗಿದೆ. ನವೆಂಬರ್ 28 ರ ಸಂಜೆಯವರೆಗೆ, ಜನರು ಇಲಿ-ರಂಧ್ರ ಗಣಿಗಾರರ ಕೆಲಸಗಳನ್ನು ಕೀಳಾಗಿ ನೋಡುತ್ತಿದ್ದರು ಆದರೆ ನವೆಂಬರ್ 12 ರಿಂದ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ ನಂತರ ಅವರು ಹೀರೋಗಳಾಗಿ ಹೊರಹೊಮ್ಮಿದ್ದಾರೆ. ಮಂಗಳವಾರ(28 ನವೆಂಬರ್) ಸಂಜೆ ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಆದರೆ ಈ ರಕ್ಷಣಾ ತಂಡಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಇದು ಎಂಬ ಪೋಟೋ ಒಂದು ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಹಲವು ಪ್ರತಿಷ್ಟಿತ ಪತ್ರಿಕೆಗಳು, ಮಾಧ್ಯಮಗಳು ಮತ್ತು ಪತ್ರಕರ್ತರು ಈ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೊಂದು ಸುದ್ದಿ ಹರಿದಾಡುತ್ತಿದ್ದು, ಉತ್ತರಖಂಡದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಕ್ಕಿಕೊಂಡಿದ್ದ ಗಣಿ ಕಾರ್ಮಿಕನ ಚಿತ್ರ ಇದು ಎಂಬ ಪೋಟೋ ಒಂದು ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಈ ಚಿತ್ರ AI (ಕೃತಕ ಬುದ್ಧಿಮತ್ತೆ) ಸೃಷ್ಟಿಸಿದ ಚಿತ್ರವಾಗಿದೆ. ಇದೇ ನವೆಂಬರ್ 28ರಂದು ಎಕ್ಸ್ಕ್ಲೂಸಿವ್ ಮೈಂಡ್ಸ್(Exclusive Minds) ಎಂಬ X ಖಾತೆಯಿಂದ ಈ ಪೋಟೋಗಳನ್ನು ಮೊದಲು ಹಂಚಿಕೊಳ್ಳಲಾಗಿದೆ ಮತ್ತು ತಲೆಬರಹದಲ್ಲಿ ಇದು AI ಸೃಷ್ಟಿಸಿದ ಚಿತ್ರ ಎಂದು ಬರೆಯಲಾಗಿದೆ. ಆದರೆ ಇದನ್ನು ಪರೀಕ್ಷಿಸದೆ ದೇಶದ ಬಹುತೇಕ ಮಾಧ್ಯಮಗಳು ನಿಜವೆಂದು ಈ ಚಿತ್ರಗಳನ್ನು ಪ್ರಕಟಿಸಿವೆ.

ಸೂಕ್ಮವಾಗಿ ಗಮನಿಸಿದರೆ ಚಿತ್ರದಲ್ಲಿರುವ ವ್ಯಕ್ತಿಗಳ ಕಣ್ಣುಗಳು ಮತ್ತು ಕೈಗಳ ಮುದ್ರೆಗಳು ಸಾಮಾನ್ಯವಾಗಿಲ್ಲದಿರುವುದನ್ನು ಗುರುತಿಸಬಹುದು. ಇದು ಎಐ ಚಿತ್ರವೇ ಅಥವಾ ಇಲ್ಲವೇ ಎಂದು ಪರಿಶೀಲಿಸುವ ಸಾಧನವಾದ ಹೈವ್ ಎಐ ಡಿಟೆಕ್ಟರ್ನಲ್ಲಿ( Hive AI detector) ನಾವು ಚಿತ್ರವನ್ನು ನೋಡಿದಾಗ, ಈ ಚಿತ್ರವು 99% ಎಐ ಉತ್ಪತ್ತಿಯಾಗಿದೆ ಎಂದು ಪತ್ತೆಯಾಗಿದೆ.

ದ ಹಿಂದು ಸೇರಿದಂತೆ ಹಲವು ಮಾಧ್ಯಮಗಳು ಈ ಕುರಿತು ಲೇಖನಗಳನ್ನು ಪ್ರಕಟಿಸಿದ್ದು ನಿಜವಾದ ರಕ್ಷಣಾ ತಂಡದ ಚಿತ್ರಗಳನ್ನು ಪ್ರಕಟಿಸಿದ್ದಾರೆ ಮತ್ತು 12 ಜನರ ರಕ್ಷಣಾ ತಂಡದ ಮುಖ್ಯಸ್ಥರಾದ ವಕೀಕ್ ಹಸನ್ ರವರು ಹಿಂದೂ ದಿನಪತ್ರಿಕೆಯವರಿಗೆ ಸಂದರ್ಶನ ನೀಡಿದ್ದಾರೆ.

ಇನ್ನೂ ಸಿಲ್ಕ್ಯಾರ ಸುರಂಗದಲ್ಲಿ ಸಿಕ್ಕಿಕೊಂಡಿದ್ದ ಗಣಿ ಕಾರ್ಮಿಕನ ಚಿತ್ರ ಇದು ಎಂದು ವೈರಲ್ ಆಗಿರುವ ಫೋಟೊ 2019ರಿಂದಲೂ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಆಗಿದೆ. Qasem sultani ಎನ್ನುವ ಫೇಸ್‌ಬುಕ್ ಪುಟದಲ್ಲಿ 02 ಮೇ 2019ರಂದು ‘ಅತ್ಯಂತ ನೋವಿನ ಚಿತ್ರ ನಲವತ್ತು ವರ್ಷಗಳ ಹೇರಿದ ಯುದ್ಧದ ಕಥೆ!’ ಎಂಬ ಶೀರ್ಷಿಕೆಯೊಂದಿಗೆ ಇದೇ ಚಿತ್ರ ಹಂಚಿಕೊಳ್ಳಲಾಗಿದೆ. ವೃದ್ಧಾಶ್ರಮ, ಗಣಿ ಕಾರ್ಮಿಕರು ಇತ್ಯಾದಿ ಶೀರ್ಷಿಕೆಗೊಂದಿಗೆ ಈ ಚಿತ್ರವನ್ನು ಹಲವರು ಹಂಚಿಕೊಂಡಿದ್ದಾರೆ. ಹಾಗಾಗಿ ಇದು ಉತ್ತರಖಂಡದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಕ್ಕಿಕೊಂಡಿದ್ದ ಗಣಿ ಕಾರ್ಮಿಕನ ಚಿತ್ರ ಎಂಬುದು ಸುಳ್ಳು.


ಇದನ್ನು ಓದಿ: Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಕಿರಣ್‌ ದೇವಿ ಬಳಿ ಅಕ್ಬರ್‌ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *