ಇತ್ತೀಚೆಗೆ ಹಲಾಲ್‌ಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲಾಲ್ ಎಂದರೆ ಏನು ಎಂಬ ಕುರಿತು ತಿಳಿದುಕೊಳ್ಳದೆ ಹಲಾಲ್‌ಗೆ ಸಂಬಂಧಿಸಿದಂತೆ ತಪ್ಪಾಗಿ ಅರ್ಥಿಸಲಾಗುತ್ತಿದೆ. ಇನ್ನೂ ಉತ್ತರ ಪ್ರದೇಶದ ಸರ್ಕಾರವು ಹಲಾಲ್‌ಗೆ ಸಂಬಂಧಿಸಿದ ಯಾವುದೇ ಆಹಾರವನ್ನು, ಬಳಸುವುದು, ಶೇಕರಿಸುವುದು ಮತ್ತು ಮಾರಾಟ ಮಾಡುವುದನ್ನು ತನ್ನ ರಾಜ್ಯದ ವ್ಯಾಪ್ತಿಯೊಳಗೆ ನಿಷೇಧಿಸಿದೆ.
ಈಗ, ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರವನ್ನು ಹಲಾಲ್ ಮಾಡಲು ಉಗುಳುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ತಮಿಳುನಾಡಿನ ನ್ಯಾಯಾಲಯದ ಪ್ರಕರಣದಲ್ಲಿ, ಅಡುಗೆಯವರು ಉಗುಳದ ಹೊರತು ಹಲಾಲ್ ಪೂರ್ಣವಾಗುವುದಿಲ್ಲ ಎಂದು ಮುಸ್ಲಿಮರು ವಾದಿಸಿದರು. ಆದ್ದರಿಂದಲೇ ಮುಸಲ್ಮಾನರು ತಯಾರಿಸಿದ ಆಹಾರ ಉಗುಳದೆ ಅಪೂರ್ಣ. ಕೋರ್ಟ್ ಕೇಸ್ ನಲ್ಲಿ ಉಗುಳುವುದನ್ನು ಒಪ್ಪಿಕೊಂಡರು. ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಹಲಾಲ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಚರ್ಚೆಯಾದ ಸುದ್ದಿ ತಮಿಳುನಾಡಿಗೆ ಸಂಬಂಧಿಸಿದ್ದಲ್ಲ ಬದಲಾಗಿ ಕೇರಳ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನೀಡುತ್ತಿರುವ ಪ್ರಸಾದದಲ್ಲಿ ಮುಸ್ಲಿಮರ ಹಲಾಲ್ ಬೆಲ್ಲ ಬಳಕೆ ಮಾಡಿದೆ ಎನ್ನುವ ವಿವಾದ ಭುಗಿಲೆದ್ದಿತ್ತು. ಆದರೆ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶಬರಿಮಲೆ ಅಯ್ಯಪ್ಪ ಪ್ರಸಾದದಲ್ಲಿ ಯಾವುದೇ ಅಪಚಾರವಾಗಿಲ್ಲ ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್ ಹೈಕೋರ್ಟ್‌ನಲ್ಲಿ ಸ್ಪಷ್ಟನೆ ನೀಡಿತ್ತು.
ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕ ಎಸ್‌ಜೆಆರ್ ಕುಮಾರ್ ಅಯ್ಯಪ್ಪ ಪ್ರಸಾದದಲ್ಲಿ ಹಲಾಲ್ ಬೆಲ್ಲ ಬಳಕೆ ಮಾಡುತ್ತಿರುವುದಾಗಿ ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೇರಳ ಹೈಕೋರ್ಟ್ ಅವರಿಗೆ ಆರೋಪ ಮಾಡುವ ಮೊದಲು ಆ ಕುರಿತು ಆಳವಾಗಿ ತಿಳಿದುಕೊಂಡು ಆರೋಪ ಮಾಡಬೇಕು ಎಂದು ಬುದ್ಧಿ ಹೇಳಿದೆ. ಇನ್ನೂ ಹಲಾಲ್‌ಗೆ ಸಂಬಂಧಿಸಿದ ಯಾವ ಪ್ರಕರಣವೂ ತಮಿಳುನಾಡಿನಲ್ಲಿ ನ್ಯಾಯಲಯದ ಮೆಟ್ಟಿಲೇರಿಲ್ಲ. ಇನ್ನೂ ಆಹಾರ ತಯಾರಿಸುವ ವೇಳೆ ಉಗುಳಿದ ಮುಸ್ಲಿಂ ವ್ಯಕ್ತಿಯನ್ನು ಗಾಜಿಯಾಬಾದ್ ಪೋಲಿಸರು ಬಂಧಿಸಿದ್ದು, ವಿಚಾರಣೆ ನಡೆಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂದರೆ ‘ಅನುಮತಿ ನೀಡಿರುವ’ ಎಂಬ ಅರ್ಥ ಬರುತ್ತದೆ. ಧಾರ್ಮಿಕ ಪದ್ದತಿ ಹಾಗೂ ನಂಬಿಕೆಗಳಿಗೆ ವಿರುದ್ಧವಾಗಿರುವ ಆಹಾರಗಳನ್ನು ಹರಾಮ್ ಎನ್ನಲಾಗುತ್ತದೆ. ಹರಾಮ್ ಎಂದರೆ ನಿಷೇಧಿತ. ಮುಸ್ಲಿಂ ಧರ್ಮೀಯರು ಸಾಮಾನ್ಯವಾಗಿ ಆಹಾರದ ವಿಚಾರದಲ್ಲಿ ಹಲಾಲ್, ಹರಾಮ್ ಪದ ಬಳಕೆ ಮಾಡುತ್ತಾರೆ. ಇಸ್ಲಾಮಿಕ್ ಧಾರ್ಮಿಕ ನಂಬಿಕೆಗಳ ಪ್ರಕಾರ ಅನುಮತಿಸಿರುವ ಖಾದ್ಯಗಳಿಗೆ ಹಲಾಲ್ ಎನ್ನಲಾಗುತ್ತದೆ. ಅದರಲ್ಲು ಮುಖ್ಯವಾಗಿ ಮಾಂಸಾಹಾರದ ವಿಚಾರದಲ್ಲಿ ಹಲಾಲ್ ಪದ ಬಳಕೆಯಲ್ಲಿದೆ.
ಹಲಾಲ್ ಭಾಗವಾಗಿ ಆಹಾರಕ್ಕೆ ಉಗುಳುವ ಸಂಸ್ಕೃತಿ ಇಸ್ಲಾಂನಲ್ಲಿ ಇಲ್ಲ. ಈ ಕುರಿತು ಎಲ್ಲಿಯೂ ಉಲ್ಲೇಖವಾಗಿಲ್ಲ. ಕೃತಕ ಬುದ್ದಿಮತ್ತೆ(AI) ಸಹಾಯದಿಂದ ಈ ಕುರಿತು ಹುಡುಕಲಾಗಿ ಇಂತಹ ಯಾವುದೇ ಆಚರಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಉಗುಳದೆ ಹಲಾಲ್ ಅಪೂರ್ಣ ಎಂದು ಮುಸ್ಲಿಮರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ ಎಂಬುದು ಸಂಪೂರ್ಣ ಸುಳ್ಳು.
ಇದನ್ನು ಓದಿ: Fact Check: ದರೋಡೆಕೋರರ ತಂಡವೊಂದು ಸರ್ಕಾರಿ ಸಮೀಕ್ಷೆಯ ನೆಪದಲ್ಲಿ ನಿಮ್ಮ ಮನೆಗೆ ಬರುತ್ತದೆ ಎಂಬುದು ಸುಳ್ಳು
ವಿಡಿಯೋ ನೋಡಿ: Fact Check |10 ನಿಮಿಷದಲ್ಲಿ ಸಕ್ಕರೆ ಖಾಯಿಲೆ ಗುಣಪಡಿಸಲು ಸಾಧ್ಯವಿಲ್ಲ | Fake News | Media
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ