ಇತ್ತೀಚೆಗೆ ಅನ್ಯ ಕೋಮಿನವರು ಎಂಬ ಕಾರಣಕ್ಕೆ ಹಲ್ಲೆ ನಡೆಸುವುದು, ಅವರಿಗೆ ಆರ್ಥಿಕ ನಿರ್ಬಂಧನೆಗಳನ್ನು ಹೇರುವುದು, ಸುಳ್ಳು ಆರೋಪಗಳನ್ನು ಮಾಡುವುದು ದೇಶದಾದ್ಯಂತ ಕಂಡು ಬರುತ್ತಿದೆ. ರಾಜಕೀಯ ಪ್ರೇರಿತ ಧರ್ಮಾಂಧತೆಯು ದಿನೇ ದಿನೇ ಭಾರತವನ್ನು ಆವರಿಸಿಕೊಂಡು ಎರಡು ಕೋಮುಗಳ ನಡುವೆ ದ್ವೇಷ, ಅಸಹಿಷ್ಣುತೆ ಹೆಚ್ಚಾಗುವಂತೆ ಮಾಡಲಾಗುತ್ತಿದೆ.
ಈಗ ಇಂತಹದ್ದೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು “ಬೆಂಗಳೂರಿನಲ್ಲಿ ಉಪ್ಪಿನ ಬದಲು ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸುವಾಗ ಪಾಪ್ ಕಾರ್ನ್ ಸ್ಟಾಲ್ ನ ನಯಾಸ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ! ಮುಸ್ಲಿಮರನ್ನು ಸುಧಾರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಯಾವುದೇ ಸಂದರ್ಭದಲ್ಲೂ ಮುಸ್ಲಿಂ ಬೇಕರಿ ಹೋಟೆಲ್ ಅಥವಾ ಔಷಧಿ ಅಂಗಡಿಗಳಿಂದ ಏನನ್ನೂ ಖರೀದಿಸಬೇಡಿ.” ಎಂಬ ಸಂದೇಶದ ವಿಡಿಯೋ ಮತ್ತು ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೆಂಗಳೂರಿನ ಲಾಲ್ ಬಾಗ್ ಪ್ರದೇಶದಲ್ಲಿ ನಡೆದ ಘಟನೆ ಎಂದು ಟಿವಿ9 ವರದಿ ಮಾಡಿದ ವಿಡಿಯೋವೊಂದರ ಕ್ಲಿಫ್‌ಅನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡುತ್ತಿದ್ದು, ಅಲ್ಲಿ ಕಂಡುಬರುವ ದೃಶ್ಯಾವಳಿಗಳ ಪ್ರಕಾರ, ಪಾಪ್‌ಕಾರ್ನ್ ಮಾಡಲು ಇಟ್ಟಿರುವ ಎಣ್ಣೆಯ ಬಾಟಲಿಯಲ್ಲಿ ಮೂರು ಬಾರಿ ಉಗುಳುವುದನ್ನು ನೋಡಿದ್ದೇನೆ ಎಂದು ವ್ಯಕ್ತಿಯೊಬ್ಬರು ಆರೋಪಿಸುತ್ತಿರುವುದನ್ನು ಕೇಳಬಹುದು. ಅಂಗಡಿಯವನು ಮುಸ್ಲಿಂ ಎಂದು ಆ ವ್ಯಕ್ತಿ ಹೇಳುತ್ತಿರುವುದು ಕೂಡ ಕೇಳಿಬರುತ್ತಿದೆ. ಪಾಪ್ ಕಾರ್ನ್‌ಗೆ ಬಳಸಲು ಇಟ್ಟ ಎಣ್ಣೆಯ ಬಾಟಲಿಯನ್ನು ಪೊಲೀಸರು ಪರೀಕ್ಷೆಗೆಂದು ವಶಪಡಿಸಿಕೊಳ್ಳುವುದನ್ನು ನೋಡಬಹುದು. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಸೀಲಿಸೋಣ.
ಫ್ಯಾಕ್ಟ್‌ಚೆಕ್: ಜೂನ್ 14, 2022 ರಂದು ‘ದಿ ನ್ಯೂಸ್ ಮಿನಿಟ್’ ಮತ್ತು ವಾರ್ತಾಭಾರತಿ ಸುದ್ದಿ ಸಂಸ್ಥೆಯವರು ನವಾಝ್ ಪಾಷ ಅವರನ್ನು ಮಾತನಾಡಿಸಿದ್ದಾರೆ. “ಅಡುಗೆ ಎಣ್ಣೆಯ ಪ್ಯಾಕೆಟ್ ಅನ್ನು ಬಾಯಿಂದ ಕೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ನನ್ನ ಹೆಸರು ಕೇಳಿದರು ನಾನು ‘ನವಾಝ್’ ಎಂದೆ, ನೀನು ಮುಸ್ಲಿಮ್ಮಾ ಎಂದು ಕೇಳಿದರು “ಹೌದು ಸರ್” ಎಂದೆ. ಮುಸ್ಲಿಂ ಎಂದು ಕೇಳಿದ ತಕ್ಷಣ ಎಣ್ಣೆಯಲ್ಲಿ ಉಗುಳುತ್ತಿದ್ದೀಯಾ ಎಂದು ಅಲ್ಲಿ ಸುತ್ತಮುತ್ತ ಇದ್ದ ಅನೇಕರನ್ನು ಕರೆದು, ಇವನು ಎಣ್ಣೆಯಲ್ಲಿ ಮೂರು ಬಾರಿ ಉಗುಳುವುದನ್ನು ನಾನು ನೋಡಿ ಪ್ರಶ್ನಿಸಿದೆ, ಅದಕ್ಕೆ ಅವನು ತಪ್ಪಾಯ್ತು ಎಂದು ಕೇಳಿದ ಎಂದು ನನ್ನ ಮೇಲೆ ಗಲಾಟೆ ಮಾಡಿದರು. ಆದರೆ ಆ ವ್ಯಕ್ತಿಯ ಆರೋಪ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗ ಇದೇ ಪ್ರಕರಣವನ್ನು ಕೆಲವು ಮತೀಯವಾದಿಗಳು ಉಪ್ಪಿನ ಬದಲು ಮೂತ್ರ ಸೇರಿಸಿ ಪಾಪ್‌ಕಾರ್ನ್ ಮಾರಲಾಗುತ್ತಿತ್ತು ಎಂದು ಹಂಚಿಕೊಳ್ಳುತ್ತಿದ್ದಾರೆ. ಜನರು ಇದನ್ನೇ ನಂಬಿ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.
ನವಾಝ್ ಪಾಷ ಕಳೆದ ಹತ್ತು ವರ್ಷಗಳಿಂದಲೂ ಲಾಲ್‌ಬಾಗ್‌ನ ಸುತ್ತಾಮುತ್ತ ಪಾಪ್‌ಕಾರ್ನ್ ಮಾರಿಕೊಂಡು ಜೀವನ ನಡೆಸುತ್ತಿದ್ದು. “ನನ್ನ ಬಳಿ ಹಿಂದು, ಮುಸ್ಲಿಂ ಸೇರಿದಂತೆ ಎಲ್ಲಾ ಬಗೆಯ ಜನರು ಬಂದು ವ್ಯಾಪಾರ ಮಾಡುತ್ತಾರೆ. ಉಗುಳುವುದರಿಂದ ನನಗೆ ಸಿಗುವುದಾದರೂ ಏನು?” ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ “ಉಗುಳದೆ ಹಲಾಲ್ ಅಪೂರ್ಣ ಎಂದು ಮುಸ್ಲಿಮರು ತಮಿಳುನಾಡಿನ ನ್ಯಾಯಾಲಯದಲ್ಲಿ ವಾದಿಸಿದ್ದರು” ಎಂದು ಆರೋಪಿಸಿ ಹಲವಾರು ವಿಡಿಯೋಗಳನ್ನು, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಈ ಹಿಂದೆಯೇ ಫ್ಯಾಕ್ಟ್‌ಚೆಕ್ ಸಹ ನಡೆಸಿತ್ತು. ಇಂತಹ ವಿಡಿಯೋಗಳ, ಸುಳ್ಳು ಸುದ್ದಿಗಳ ನಂಬಿದ ಪರಿಣಾಮ ವ್ಯಕ್ತಿಯೊಬ್ಬರು ನವಾಝ್ ಮೇಲೆ ಇಂತಹ ಆರೋಪ ಎಸಗಿದ್ದಾರೆ. ಸಧ್ಯ ನವಾಝ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಅವರ ದುಡಿಮೆಗೆ ಈಗ ಸಂಕಷ್ಟ ಎದುರಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸಲಾಗುತ್ತಿತ್ತು ಎಂಬುದು ಸುಳ್ಳು ಆರೋಪವಾಗಿದೆ.
ಇದನ್ನು ಓದಿ: Fact Check: ಉಗುಳದೆ ಹಲಾಲ್ ಅಪೂರ್ಣ ಎಂದು ಮುಸ್ಲಿಮರು ತಮಿಳುನಾಡಿನ ನ್ಯಾಯಾಲಯದಲ್ಲಿ ವಾದಿಸಿಲ್ಲ
ವಿಡಿಯೋ ನೋಡಿ: Fact Check | ರಾಮಮಂದಿರಕ್ಕೆ ಮೌಲನಾ ಬಾಂ*ಬ್ ಹಾಕ್ತಾರ?: ನೈಜ ವಿಷಯ ತಿರುಚಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.