ಬಾಂಗ್ಲಾದೇಶದ ಒಬ್ಬೊಬ್ಬ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿಯನ್ನು ಕೊಡುತ್ತಿರುವ “ರಾಜ್ಯ ಸರ್ಕಾರ”..? ಹಿಂದೂಗಳೇ ಎತ್ತ ಸಾಗುತ್ತಿದೆ ಕರ್ನಾಟಕ.? ಕನ್ನಡ ಮಾದ್ಯಮ ಮಿತ್ರರೇ ಕನ್ನಡಿಗರಿಗೆ ಇಂತಹ ಒಂದು ದೊಡ್ಡ ಅನ್ಯಾಯ ನಡೆಯುತಿದ್ದು ಇದು ನಿಮಗೆ ಕಾಣುತಿಲ್ಲವೆ..? ಈ ವಿಷಯ ನಮಗೆ ಆಂಗ್ಲ ಪತ್ರಿಕೆಯಿಂದಲೇ ಗೊತ್ತಾಗುವುದಾದರೆ ನಿಮ್ಮ ಅಗತ್ಯವೇನು.? ಬಾಂಗ್ಲಾದೇಶದ ಮುಸಲ್ಮಾನರಿಗೆ “SC” ಎಂದು ಕೊಟ್ಟು ದಲಿತರ ಮೀಸಲಾತಿ ಕಸೆದು ಮುಸಲ್ಮಾನರ ಓಲೈಕೆಗೆ ಮುಂದಾಯಿತೇ ಕಾಂಗ್ರೆಸ್..? ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಹಿಂದೂಗಳಿಗೆ ಬಗೆಯುತ್ತಿರುವ ದ್ರೋಹ ಎಲ್ಲರಿಗೂ ಗೊತ್ತಾಗಲಿ “ಷೇರ್ ಮಾಡಿ” ಎಂದು ಬರೆದಿರುವ ಪೋಸ್ಟರ್ ಒಂದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ವೈರಲ್ ಪೋಸ್ಟ್‌ನಲ್ಲಿ ಸಿಂಧನೂರಿನ ಶಾಸಕ ಬಾದರ್ಲಿ ಹಂಪನಗೌಡರವರನ್ನು ಉಲ್ಲೇಖಿಸಿದೆ. ಅದರ ಆಧಾರದಲ್ಲಿ ಕೆಲವು ಕೀವರ್ಡ್‌ಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಹಲವಾರು ವರದಿಗಳು ಲಭ್ಯವಾಗಿವೆ. 1971 ರ ಬಾಂಗ್ಲಾ ವಿಮೋಚನಾ ಸಂದರ್ಭ ನಿರಾಶ್ರಿತಗೊಂಡಿದ್ದ ಬಾಂಗ್ಲಾದ ಹಿಂದೂ ಜನರಿಗೆ ಪಶ್ಚಿಮ ಬಂಗಾಳ, ಓಡಿಸ್ಸಾ, ಮಹಾರಾಷ್ಟ್ರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿ ಜಾಗ ಸಾಲದಿದ್ದಾಗ 727 ಕುಟಂಬಗಳ 5300 ಜನರಿಗೆ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಸಿಂಧನೂರು ತಾಲೂಕಿನಲ್ಲಿ ಪುನವರ್ಸತಿ ಕ್ಯಾಂಪ್‌ನಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದ್ದರು. ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ಕೊಡುವುದಾಗಿ ಆಗಲೇ ಘೋಷಿಸಿದ್ದರು ಎಂದು ಕನ್ನಡ ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈಗ ಅವರ ಜನಸಂಖ್ಯೆ 16,000 ಮೀರಿದ್ದು ಅವರಿಗೆ ಇನ್ನೂ ಭಾರತೀಯ ಪೌರತ್ವ ಸಿಕ್ಕಿಲ್ಲ. 2019ರಲ್ಲಿ ಕೇಂದ್ರ ಸರ್ಕಾರ ಈ ವಲಸಿಗರಿಗೆ ಸಿಎಎ ಮೂಲಕ ಪೌರತ್ವ ನೀಡುತ್ತೇವೆ ಎಂದಾಗ ಇಲ್ಲಿನ ಜನರು ಸಂಭ್ರಮ ಪಟ್ಟಿದ್ದರು ಎಂದು ಹಲವಾರು ಪತ್ರಿಕೆಗಳು ವರದಿ ಮಾಡಿವೆ.
ಅಲ್ಲದೇ ಹಿಂದೂ ಬಾಂಗ್ಲಾ ನಿರಾಶ್ರಿತರಿಗೆ 5400 ಎಕರೆ ಭೂಮಿ ಕೊಡಲು 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮತ್ತು 2020ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರಗಳು ಪ್ರಯತ್ನ ನಡೆಸಿರುವುದರ ಬಗ್ಗೆಯೂ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ನೋಡಬಹುದು.
ಆಗಿನ ಕಂದಾಯ ಸಚಿವ ಆರ್ ಅಶೋಕ ಅವರು ಕಚೇರಿಯು ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, 5,400 ಎಕರೆ ಜಮೀನಿನ ಐದು ಪುನರ್ವಸತಿ ಶಿಬಿರಗಳನ್ನು ಸರ್ವೆ ಮಾಡಿ ಮತ್ತು ಅದಕ್ಕಾಗಿ ಕಂದಾಯ ನಕ್ಷೆಗಳನ್ನು ರಚಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ 15 ಫೆಬ್ರವರಿ 2020ರಲ್ಲಿ ವರದಿ ಮಾಡಿದೆ.
ಬಾಂಗ್ಲಾದಿಂದ ಬಂದಿರುವ ಬಹುತೇಕ ನಿರಾಶ್ರಿತರು ದಲಿತ ಹಿಂದೂಗಳು. ನಮಶೂದ್ರ, ಪೋದ, ಪೌಂಡ್ರ, ರಾಜವಂಶಿ ಉಪಜಾತಿಗಳಿಗೆ ಸೇರಿದವರು. ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ನೆಲೆಸಿರುವ ಬಾಂಗ್ಲಾ ನಿರಾಶ್ರಿತರಿಗೆ ಎಸ್.ಸಿ. ಮೀಸಲಾತಿ ಸೌಲಭ್ಯ ಇದೆ. ಆದರೆ, ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಈ ಉಪಜಾತಿಗಳ ಹೆಸರು ಸೇರ್ಪಡೆಯಾಗಿಲ್ಲ. ಇದರಿಂದ ಶಿಕ್ಷಣ ಹಾಗೂ ಇತರ ಉದ್ದೇಶಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಪ್ರಮಾಣಪತ್ರ ಪಡೆಯಲು ಅವರು ಹರಸಾಹಸ ಪಡಬೇಕು ಎಂದು ಜನವರಿ 10, 2020ರಂದು ಪ್ರಜಾವಾಣಿ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ನಿರಾಶ್ರಿತರಾಗಿ ಭಾರತಕ್ಕೆ ಬಂದವರು ಹಿಂದೂಗಳಾಗಿದ್ದಾರೆ. ಅವರಿಗೆ ಭೂಮಿ ಕೊಡಬೇಕೆಂದು 1971ರಲ್ಲಿಯೇ ನಿರ್ಧರಿಸಲಾಗಿದೆ. ಬಿಜೆಪಿ ಸರ್ಕಾರವೂ ಸಹ ಭೂಮಿ ನೀಡಲು ಪ್ರಯತ್ನ ನಡೆಸಿದೆ. ಹಾಗಾಗಿ ಕರ್ನಾಟಕ ಸರ್ಕಾರ ಬಾಂಗ್ಲಾದೇಶದ ವಲಸಿಗ ಮುಸಲ್ಮಾನರಿಗೆ ತಲಾ 5 ಎಕರೆ ಭೂಮಿ ಕೊಡುತ್ತಿದೆ ಎಂಬುದು ಸುಳ್ಳಾಗಿದೆ.
ಇದನ್ನೂ ಓದಿ: ರಾಮನ ಕೆತ್ತನೆ ಎಂದು ಇರಾಕ್ ರಾಜ ತಾರ್ದುನ್ನಿ ಫೋಟೊ ಹಂಚಿಕೊಂಡ ಪೋಸ್ಟ್ ಕಾರ್ಡ್ ಕನ್ನಡ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ