ರಾಮನ ಕೆತ್ತನೆ ಎಂದು ಇರಾಕ್‌ ರಾಜ ತಾರ್ದುನ್ನಿ ಫೋಟೊ ಹಂಚಿಕೊಂಡ ಪೋಸ್ಟ್ ಕಾರ್ಡ್ ಕನ್ನಡ

ಇರಾಕ್‌ನ ಸಿಲೆಮೇನಿಯಾದಲ್ಲಿರುವ ಸುಮಾರು 6000 ವರ್ಷಗಳಷ್ಟು ಹಳೆಯದಾದ ಪ್ರಭು ಶ್ರೀರಾಮ ಮತ್ತು ಹನುಮಂತನ ಕೆತ್ತನೆ ಎಂದು ಫೋಟೊವೊಂದನ್ನು ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡಿದೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2015ರಲ್ಲಿ ಇರಾಕಿನ ಇತಿಹಾಸಕಾರರಾದ ಒಸಾಮಾ ಎಸ್.ಎಂ. ಅಮೀನ್ ಅವರು etc.worldhistory.org ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಲೇಖನ ದೊರಕಿತು.  ಆ ಲೇಖನದಲ್ಲಿ ವೈರಲ್ ಚಿತ್ರದ ಕೆತ್ತನೆಯನ್ನು “ರಿಲೀಫ್ ತಾರ್ದುನ್ನಿ” ಅಥವಾ “ಬೆಲುಲಾ ಪಾಸ್ ರಾಕ್ ರಿಲೀಫ್” ಎಂದು ಕರೆಯಲಾಗಿದೆ. ಇದು ಇರಾಕಿನ ಸುಲೈಮಾನಿಯಾ ನಗರದ ಸಮೀಪದಲ್ಲಿದೆ. ಈ ಕಲ್ಲಿನ ಕೆತ್ತನೆಯು ಅಕ್ಕಾಡಿಯನ್ ಶಾಸನಗಳ ಆಧಾರದಲ್ಲಿ ಸುಮಾರು 4,000 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಇಕ್ಕಿಡ್ ಸಮದ್ ರವರ ಮಗ ಸಶಸ್ತ್ರ ಆಡಳಿತಗಾರ ರಾಜ ತಾರ್ದುನ್ನಿಯವರನ್ನು ಪ್ರತಿನಿಧಿಸುತ್ತದೆ.

29 ಮೇ, 2019 ರಂದು ವರ್ಲ್ಡ್ ಹಿಸ್ಟರಿ ಎನ್ಸೈಕ್ಲೋಪೀಡಿಯಾದಲ್ಲಿ ಪ್ರಕಟವಾದ ವರದಿಯಲ್ಲಿಯೂ “ರಾಕ್-ರಿಲೀಫ್ ಆಫ್ ತಾರ್ದುನ್ನಿ, ದರ್ಬಂದ್-ಐ ಬೆಲೂಲಾ” ಎಂಬ ಶೀರ್ಷಿಕೆಯೊಂದಿಗೆ ಅದೇ ಚಿತ್ರವನ್ನು ಲಗತ್ತಿಸಲಾಗಿದೆ. ಅದರ ವಿವರಣೆಯ ಪ್ರಕಾರ “ಈ ರಾಕ್-ರಿಲೀಫ್ ವಿಜಯಶಾಲಿ ಯೋಧನನ್ನು ಚಿತ್ರಿಸುತ್ತದೆ. ಅವನ ಮುಂದೆ, ಇಬ್ಬರು ಸೆರೆಯಾಳುಗಳನ್ನು (ಬಹುಶಃ ಹುರಿಯನ್ಸ್) ಕಾಣಬಹುದು. ಬಲಭಾಗದಲ್ಲಿರುವ ಅಕ್ಕಾಡಿಯನ್ ಕ್ಯೂನಿಫಾರ್ಮ್ ಶಾಸನವು ಯೋಧನ ಹೆಸರನ್ನು ಇಕ್ಕಿಯ ಮಗನಾದ “ತಾರ್…ದುನ್ನಿ” ಎಂದು ಉಲ್ಲೇಖಿಸುತ್ತದೆ. ಶಮಾಶ್ ಮತ್ತು ಅದಾದ್ ಎಂಬ ದೇವರುಗಳ ಹೆಸರುಗಳನ್ನು ಸಹ ಉಲ್ಲೇಖಿಸಲಾಗಿದೆ. “ತಾರ್…ದುನ್ನಿ” ಸ್ಥಳೀಯ ರಾಜ, ರಾಜಕುಮಾರ, ಆಡಳಿತಗಾರ ಅಥವಾ ಉನ್ನತ-ಶ್ರೇಣಿಯ ಅಧಿಕಾರಿಯಾಗಿರಬಹುದು, ಬಹುಶಃ ಲುಲುಬಿಯನ್ ಆಗಿರಬಹುದು. ಈ ವ್ಯಕ್ತಿಗಳು ಮತ್ತು ಅವರ ಜೀವನದ ನಿಖರವಾದ ದಿನಾಂಕಗಳು ತಿಳಿದಿಲ್ಲ. ದರ್ಬಂದ್-ಐ ಬೆಲುಲಾ (ಬೆಲುಲಾ ಪಾಸ್), ಸುಲೈಮಾನಿಯಾ ಗವರ್ನರೇಟ್, ಇರಾಕಿ ಕುರ್ದಿಸ್ತಾನ್. ಅಕ್ಕಾಡಿಯನ್ ಅವಧಿ, 2350-2006 BCE ಎನ್ನಲಾಗಿದದೆ.

ಪುರಾತತ್ವಶಾಸ್ತ್ರಜ್ಞರು ತಾರ್ದುನ್ನಿಯ ಮುಂದೆ ಮಂಡಿಯೂರಿ ಕುಳಿತಿರುವ ವ್ಯಕ್ತಿಗಳ ಚಿತ್ರಣವು ಸೋಲಿಸಲ್ಪಟ್ಟ ಹುರಿಯನ್ ಪಡೆಗಳನ್ನು ತೋರಿಸುತ್ತದೆ ಎಂದು ನಂಬುತ್ತಾರೆ. ಒಸಾಮಾ S. M. ಅಮೀನ್ ಅವರ ಈ ರಾಕ್ ರಿಲೀಫ್ನ YouTube ವೀಡಿಯೊವನ್ನು ಇಲ್ಲಿ ನೋಡಬಹುದು.

ಭಾರತದ ನಿಯೋಗವು ಇರಾಕ್‌ಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದೆ. ಆದರೆ ಇರಾಕ್‌ನ ಪುರಾತತ್ವಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಇದು ರಾಮನಿಗೆ ಸಂಬಂಧಿಸಿಲ್ಲ, ಬದಲಿಗೆ ಮ್ಯೂರಲ್ ಪರ್ವತ ಬುಡಕಟ್ಟಿನ ಮುಖ್ಯಸ್ಥ ಟಾರ್ದುನ್ನಿಯನ್ನು ಚಿತ್ರಿಸುತ್ತದೆ ಎಂದು ಹೇಳುತ್ತಾರೆ. ಇರಾಕ್‌ನಲ್ಲಿ ಬೇರೆಡೆ ಇರುವ ಇದೇ ರೀತಿಯ ಕೆತ್ತನೆಗಳು ರಾಜರು ಮತ್ತು ಮಂಡಿಯೂರಿರುವವರು ಕೈದಿಗಳೆಂದು ನಂಬಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಇರಾಕ್‌ನ ಸಿಲೆಮೇನಿಯಾದಲ್ಲಿರುವ ಸುಮಾರು 6000 ವರ್ಷಗಳಷ್ಟು ಹಳೆಯದಾದ ಪ್ರಭು ಶ್ರೀರಾಮ ಮತ್ತು ಹನುಮಂತನ ಕೆತ್ತನೆ ಎಂದು ಅಲ್ಲಿನ ಸ್ಥಳೀಯ ರಾಜ ತಾರ್ದುನಿಯವರ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ಕಾರ್ಡ್ ಕನ್ನಡ ತಪ್ಪು ಮಾಹಿತಿಯನ್ನು ಹಂಚಿ ಜನರನ್ನು ದಿಕ್ಕು ತಪ್ಪಿಸುತ್ತಿದೆ.


ಇದನ್ನೂ ಓದಿ; Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *