ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಇಸ್ರೇಲ್ ಸರ್ಕಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿದೆ ಎಂಬುದು ಸುಳ್ಳು

ರಾಮ ಮಂದಿರದ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕೆ ಭಾರತದಾದ್ಯಂತ ರಾಮ ಭಕ್ತರು ಅಯೋಧ್ಯೆಗೆ ಹೋಗುವ ಸಾಧ್ಯತೆ ಇದ್ದು ಜನವರಿ 22ರಂದು ರಜೆ ಘೋಷಿಸಲಾಗುವುದು ಎಂದು ಜನ ನಂಬಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ.

ಈಗಿರುವಾಗ, ಜನವರಿ 22,2024ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ, ಇಸ್ರೇಲ್ ಸರ್ಕಾರ ಅಂದಿನ ದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿದೆ ಎಂಬ ಸಂದೇಶವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಸಿದ್ದು ಅದಿನ್, ಮನೋಹರ್ ಸೇರಿದಂತೆ ಅನೇಕ ಜನ ಬಲಪಂಥೀಯ ಪೇಸ್‌ಬುಕ್‌ ಬಳಕೆದಾರರು “ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಭಾರತದ ಮಿತ್ರ ರಾಷ್ಟ್ರ ಇಸ್ರೇಲ್ ರಾಷ್ಟ್ರೀಯ ರಜಾದಿನ ಘೋಷಣೆ ಮಾಡಿದೆ” ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಜಾಗತಿಕ ಮಾಹಿತಿಗಳನ್ನು ತಿಳಿಸುವ worlddata.info ಎಂಬ ವೆಬ್‌ಸೈಟ್‌ನಲ್ಲಿ ಇಸ್ರೇಲ್‌ನ 2024ರ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಜನವರಿ 25, 2022ರಂದು New year festival of trees and bushes (ಮರಗಳು ಮತ್ತು ಪೊದೆಗಳ ಹೊಸ ವರ್ಷದ ಹಬ್ಬ) ಎಂಬ ಹೆಸರಿನಲ್ಲಿ ರಜಾದಿನ ಕಂಡು ಬಂದಿದೆ. ಜನವರಿ 22ರಂದು ಯಾವುದೇ ರಜೆ ಇರುವುದಾಗಿ ಉಲ್ಲೇಖಿಸಿಲ್ಲ.

ವಿವಿಧ ದೇಶಗಳ ಮಾಹಿತಿ ತಿಳಿಸುವ timeanddate.com ಎಂಬ ಮತ್ತೊಂದು ವೆಬ್‌ಸೈಟ್‌ನಲ್ಲಿಯೂ ಜನವರಿ 25, 2024ರಂದು ಇಸ್ರೇಲ್‌ನಲ್ಲಿ ರಜಾದಿನ ಇರುವುದಾಗಿ ಹೇಳಲಾಗಿದೆ. ಜನವರಿ 22ರ ರಜೆಯ ಕುರಿತು ಉಲ್ಲೇಖಿಸಿಲ್ಲ.ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತ ವೆಬ್‌ಸೈಟ್‌ನಲ್ಲಿ 2024 ಇಸ್ರೇಲ್‌ ಮತ್ತು ಭಾರತದ ರಜಾದಿನಗಳ ಮಾಹಿತಿ ನೀಡಲಾಗಿದೆ. ಅದರಲ್ಲಿ ಜನವರಿ 26 ಭಾರತ ಗಣರಾಜ್ಯೋತ್ಸವದಂದು ಇಸ್ರೇಲ್‌ನಲ್ಲಿರುವ ರಾಯಭಾರ ಕಚೇರಿಗೆ ರಜೆ ಇರುವುದಾಗಿ ಹೇಳಲಾಗಿದೆ. ಆದರೆ, ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ರಾಯಭಾರ ಕಚೇರಿಗಾಗಲಿ, ಇಸ್ರೇಲ್ ದೇಶದಲ್ಲಾಗಲಿ ಯಾವುದೇ ರಜೆ ಇರುವ ಬಗ್ಗೆ ಉಲ್ಲೇಖಿಸಿಲ್ಲ.ಇಸ್ರೇಲ್‌ಗಿಂತ ಭಾರತದಲ್ಲೇ ಜನವರಿ 22ರಂದು ಯಾವುದೇ ರಾಷ್ಟ್ರೀಯ ರಜೆ ಇರುವುದಾಗಿ ಸರ್ಕಾರ ಘೋಷಣೆ ಮಾಡಿಲ್ಲ. ಉತ್ತರ ಪ್ರದೇಶ ಸರ್ಕಾರ ಅಂದು ಉತ್ತರ ಪ್ರದೇಶ ರಾಜ್ಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ ಮತ್ತು ಮದ್ಯದಂಗಡಿಗಳನ್ನು ಮುಚ್ಚಿಸಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಭಾರತದ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಇಸ್ರೇಲ್ ರಾಷ್ಟ್ರೀಯ ರಜಾದಿನ ಘೋಷಣೆ ಮಾಡಿದೆ ಎಂದು ಎಲ್ಲೂ ಸುದ್ದಿ ಪ್ರಕಟಿಸಿಲ್ಲ. ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜನವರಿ 22ರಂದು ಇಸ್ರೇಲ್‌ನಲ್ಲಿ ರಜೆ ಇರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ 2024ರ ರಜಾದಿನಗಳ ಪಟ್ಟಿ ಇನ್ನೂ ಅಪ್ಡೇಟ್ ಆಗಿಲ್ಲ. ಹಳೆಯ 2023ರ ಪಟ್ಟಿಯೇ ಇದೆ.


ಇದನ್ನು ಓದಿ: Fact Check: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ


ವಿಡಿಯೋ ನೋಡಿ: Fact Check | ಜನ್ ಧನ್ ಯೋಜನೆಯಿಂದ ಪ್ರತಿಯೊಬ್ಬರ ಖಾತೆಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *