ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಗೊತ್ತಿರಬೇಕೆಂಬ ಆದೇಶ ಹಿಂದಿನ ಬಿಜೆಪಿ ಸರ್ಕಾರದ್ದು

ಅಂಗನವಾಡಿ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ‘ಉರ್ದು ಭಾಷೆ’ ಗೊತ್ತಿರುವುದನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಆರೋಪಿಸುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮನೆಹಾಳು ಸರ್ಕಾರದ ಮತ್ತೊಂದು ಆದೇಶ *
ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕೇವಲ ಉರ್ದು ಗೊತ್ತಿರೋರು ಅರ್ಜಿ ಹಾಕಬೇಕಂತೆ ?
ಅಲ್ಲಿಗೆ ಮತ್ತೊಂದು ಕನ್ನಡದ ಕಗ್ಗೊಲೆ. ಅಂಗನವಾಡಿ ಕೆಲಸಕ್ಕೆ ಅರ್ಜಿ ಹಾಕಿರುವರು ಅತ್ಯಂತ ಕಡುಬಡವ ಹೆಣ್ಣುಮಕ್ಕಳು.. ತನ್ನ ಕುಟುಂಬಕ್ಕೆ ಒಂದೊತ್ತು ಅನ್ನ ಕಂಡುಕೊಳ್ಳುವವರು,,, ಅಲ್ಲಿ ಕೆಲಸಕ್ಕೆ ಕೇವಲ ಮುಸ್ಲಿಂ ಹೆಣ್ಣುಮಕ್ಕಳು ಮಾತ್ರ ಅರ್ಹರು ಅಂದರೆ ಪಾಪ ಬಡ ಹಿಂದೂ ಹೆಣ್ಣುಮಕ್ಕಳ ಕುಟುಂಬಕ್ಕೆ ವಿಷವೇ ಗತಿಯೇ ? ಸಿದ್ದರಾಮಯ್ಯನವರೆ. . ಅದರ ಬದಲು ನಿಮ್ಮ ಕೈಯ್ಯಾರೆ ಅವರಿಗೆ ಕೊಟ್ಟುಬಿಡಿ,,,, ಎಂದು ಹಲವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್‌ನಲ್ಲಿಯೂ ಇದನ್ನೇ ವೈರಲ್ ಮಾಡಲಾಗುತ್ತಿದೆ.

ಸಂವಾದ (Samvada) ಎಂಬ ಬಲ ಪಂಥೀಯ ಫೇಸ್‌ಬುಕ್ ಚಾನೆಲ್‌ನಲ್ಲಿ “ಉರ್ದು ಬಲ್ಲವರಿಗೆ ಮಾತ್ರ ಕೆಲಸ ಕರ್ನಾಟಕದಲ್ಲಿ ಘಾಜ್ವ-ಎ-ಹಿಂದ್‌ ಶುರು” ಎಂಬ ಶೀರ್ಷೆಕೆಯಲ್ಲಿ ವಿಡಿಯೋ ವರದಿಯನ್ನು ಮಾಡಲಾಗಿದೆ. ಈ ವರದಿಯಲ್ಲಿ ಈ ಹಿಂದಿನ ಆಗು-ಹೋಗುಗಳನ್ನು ಸೇರಿಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಕನ್ನಡ ವಿರೋಧಿ, ಉರ್ದು ಭಾಷೆ ಮತ್ತು ಮುಸ್ಲಿಮರ ಪರ ಎಂದು ಬಿಂಬಿಸಲಾಗಿದೆ. ವರದಿಯಲ್ಲಿ ಕನ್ನಡ ಹೋರಾಟಗಾರರು ಮತ್ತು ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಕಾರಲಾಗಿದೆ.

ತುಮಕೂರು ನಗರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಗೌರವಧನ ಆಧಾರಿತ ಅಂಗನವಾಡಿ ಕಾರ್ಯರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಬೇಕಾದರೆ ಉರ್ದು ಭಾಷೆ ಕಲಿತಿರುವುದು ಕಡ್ಡಾಯ, ಇದು ಮುಸ್ಲಿಂ ತುಷ್ಟೀಕರಣ ಎಂದು ಪ್ರತಿಪಾದಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯನವರ ಮೇಲೆ ಕಿಡಿಕಾರಲಾಗಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ತುಮಕೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಅವರನ್ನು ಸಂಪರ್ಕಿಸಿದಾಗ, “ಪ್ರಸ್ತುತ ಅಂಗನವಾಡಿ ಹುದ್ದೆಗಳ ಭರ್ತಿಗೆ 2022ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಆದೇಶದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಆ ಆದೇಶದ ಪ್ರಕಾರ ರಾಜ್ಯದ ಯಾವುದೇ ಪ್ರದೇಶದ ಅಂಗನವಾಡಿಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನೇಮಕ ಮಾಡಿಕೊಳ್ಳುವಾಗ, ‘ಆ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಜನಸಂಖ್ಯೆಯ ಶೇ.25ರಷ್ಟು ಜನರು ಮಾತನಾಡುವ ಭಾಷೆಯು ಅರ್ಜಿ ಸಲ್ಲಿಸುವವರಿಗೆ ಗೊತ್ತಿರಬೇಕು ಎಂದು ಸೂಚಿಸಲಾಗಿದೆ. ಉದಾಹರಣೆಗೆ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗಳಿಗೆ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳುವಾಗ ಅವರಿಗೆ ಕನ್ನಡದ ಜೊತೆಗೆ ಉರ್ದು ಭಾಷೆ ಗೊತ್ತಿರಬೇಕು. ಕ್ರೈಸ್ತ ಸಮುದಾಯದ ಜನರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗೆ ನೇಮಿಸಿಕೊಳ್ಳುವುದಾದರೆ ಅವರಿಗೆ ಕ್ರೈಸ್ತರು ಮಾತನಾಡುವ ಕೊಂಕಣಿಯೋ ಇತರ ಯಾವುದೇ ಭಾಷೆ ತಿಳಿದಿರಬೇಕು ಎಂದು ಉಲ್ಲೇಖಿಸಲಾಗಿದೆ.

ಇಲ್ಲಿ ಕನ್ನಡದ ಜೊತೆಗೆ ಉರ್ದು ಮಾತ್ರ ಗೊತ್ತಿರಬೇಕು ಎಂದು ಎಲ್ಲೂ ಕಡ್ಡಾಯ ಮಾಡಿಲ್ಲ. ಅಂಗನವಾಡಿ ಇರುವ ಪ್ರದೇಶದ ಜನ ಸಂಖ್ಯೆಯ ಶೇ.25ರಷ್ಟು ಅಲ್ಪ ಸಂಖ್ಯಾತರು ಮಾತನಾಡುವ ಭಾಷೆ ಗೊತ್ತಿರಬೇಕು ಎಂದು ಹೇಳಲಾಗಿದೆ. ಆ ಭಾಷೆ ಉರ್ದು, ಕೊಂಕಣಿ, ತುಳು ಇತರ ಯಾವುದಾದರೂ ಆಗಿರಬಹುದು. ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಎಲ್ಲಾ ಕಡೆಯೂ ಕನ್ನಡ ಗೊತ್ತಿರಬೇಕೆನ್ನುವುದು ಮೊದಲ ಆದ್ಯತೆಯಾಗಿದೆ. ನಂತರ ಇತರ ಭಾಷೆಗಳು ತಿಳಿದಿರಬೇಕು ಎಂದು ಹೇಳಲಾಗಿದೆ.

ಬಿಜೆಪಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್‌ಗಳ ವಿವಿಧ ಪ್ರದೇಶಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆ ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಅರ್ಜಿ ಸಲ್ಲಿಸುವವರಿಗೆ ಕನ್ನಡದ ಜೊತೆ ಉರ್ದು ಭಾಷೆ ತಿಳಿದಿರಬೇಕು ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಆದೇಶ ಡಿಸೆಂಬರ್ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿರುವುದಾಗಿದೆ. ಹಾಗಾಗಿ ಮುಸ್ಲಿಮರನ್ನು ಓಲೈಸಲು ಪ್ರಸ್ತುತ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು.


ಇದನ್ನೂ ಓದಿ: Fact Check: ಭಾರತ್ ನ್ಯಾಯ್ ಯಾತ್ರೆ ವೇಳೆ ಮೋದಿ ಮೋದಿ ಘೋಷಣೆಯಿಂದ ರಾಹುಲ್ ಗಾಂಧಿ ಕಿರಿಕಿರಿಯಾಗಿ ಸಿಟ್ಟಿನಿಂದ ಹೋಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *