Fact Check | ಬುರ್ಜ್‌ ಖಲೀಫಾ ಮೇಲೆ ಶ್ರೀ ರಾಮನ ಫೋಟೋ ಪ್ರದರ್ಶಿಸಲಾಗಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಉದಯವಾಣಿ

ಸಾಮಾಜಿಕ ಜಾಲತಾಣದಲ್ಲಿ “ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ಬೆಳಕಿನಲ್ಲಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಗವಾನ್ ರಾಮನ ಚಿತ್ರ ಮೂಡಿ ಬಂದಿದೆ.” ಎಂದು ಸಾಕಷ್ಟು ಮಂದಿ ಪೋಟೋವೊಂದನ್ನು ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ  “22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ” ಮುಸ್ಲಿಂ ರಾಷ್ಟ್ರವೂ ಸಂತಸವನ್ನು ವ್ಯಕ್ತ ಪಡಿಸಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಫೋಟೋ
                                         ವೈರಲ್‌ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬುತ್ತಿದ್ದರೆ ಕನ್ನಡದ ಖ್ಯಾತ ದಿನ ಪತ್ರಿಕೆಯಾದ ಉದಯವಾಣಿ ಕೂಡ ತನ್ನ ಪತ್ರಿಕೆಯ 5ನೇ ಪುಟದಲ್ಲಿ “ಬುರ್ಜ್‌ನಲ್ಲಿ ಶ್ರೀರಾಮನ ಚಿತ್ತಾರ” ಎಂದು ಪೋಟೋದೊಂದಿಗೆ ಸಣ್ಣ ವರದಿಯನ್ನ ನೀಡಿ, ತನ್ನ ಓದುಗರ ದಾರಿ ತಪ್ಪಿಸುವ ಕೆಲಸ ಮಾಡಿದೆ.

ಉದಯವಾಣಿ ಪತ್ರಿಕೆಯಲ್ಲೂ ಪ್ರಕಟವಾದ ಸುಳ್ಳು ಸುದ್ದಿ

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರು ಫೋಟೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿತು ಈ ವೇಳೆ  ಬುರ್ಜ್ ಖಲೀಫಾದ ಒಂದೇ ರೀತಿಯ ಚಿತ್ರವನ್ನು ಒಳಗೊಂಡಿರುವ ಟ್ರ್ಯಾವೆಲ್‌ ಬ್ಲಾಗ್‌ನ ಬ್ಲಾಗಿಂಗ್‌ ತಾಣ ಕಾಣಿಸಿಕೊಂಡಿದೆ. ಆ ಬ್ಲಾಗ್‌ ಅನ್ನು ಪರಿಶೀಲನೆ ನಡೆಸಿದಾಗ ಅದು ಅಕ್ಟೋಬರ್ 2019 ರಲ್ಲಿ ಚಿತ್ರ ಎಂಬುದು ತಿಳಿದು ಬಂದಿದ್ದು ‘ಬುರ್ಜ್ ಖಲೀಫಾ ರಾತ್ರಿಯಲ್ಲಿ’ ಎಂಬ ಶೀರ್ಷಿಕೆಯೊಂದಿಗೆ ಅಂಕಣ ಬರೆದಿರುವುದು ಕೂಡ ಕಂಡು ಬಂದಿದೆ.

ಟ್ರ್ಯಾವೆಲ್‌ ಬ್ಲಾಗ್‌ನಲ್ಲಿ ಪತ್ತೆಯಾದ ಫೋಟೋ
  ಟ್ರ್ಯಾವೆಲ್‌ ಬ್ಲಾಗ್‌ನಲ್ಲಿ ಪತ್ತೆಯಾದ ಫೋಟೋ

ಹೀಗಾಗಿ ಈ ಬ್ಲಾಗಿಂಗ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ಮತ್ತು ಈಗ ವೈರಲ್‌ ಆಗುತ್ತಿರುವ ಎರಡೂ ಚಿತ್ರಗಳನ್ನು ಅಕ್ಕ-ಪಕ್ಕದಲ್ಲಿಟ್ಟು ಹೋಲಿಕೆ ಮಾಡಿ ನೋಡಿದಾಗ ಕಟ್ಟಡ ಮತ್ತು ಅದರ ಸುತ್ತಮುತ್ತಲಿನ ಮೇಲೆ ಹೊಂದಿಕೆಯಾಗುವ ಬೆಳಕಿನ ಮಾದರಿಗಳನ್ನು ಒಂದೇ ರೀತಿಯಲ್ಲಿರುವುದು ಕಂಡು ಬಂದಿದೆ.

ಪೋಟೋಗಳನ್ನು ಹೋಲಿಕೆ ಮಾಡಿದಾಗ ಕಂಡು ಬಂದ ಸಾಮ್ಯತೆಗಳು
                                      ಪೋಟೋಗಳನ್ನು ಹೋಲಿಕೆ ಮಾಡಿದಾಗ ಕಂಡು ಬಂದ ಸಾಮ್ಯತೆಗಳು

ಇನ್ನು ಕಳೆದ ಎರಡೂ ಮೂರು ದಿನಗಳಿಂದಲೂ ರಾಮ ಮಂದಿರದ ಉದ್ಘಾಟನೆಯ ಸುದ್ದಿಯನ್ನೇ ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಿರುವ ಮಾಧ್ಯಮಗಳು ಈ ಕುರಿತು ಯಾವುದಾದರೂ ಸುದ್ದಿಯನ್ನು ಪ್ರಸಾರ ಮಾಡಿವೆಯೇ ಎಂದು ಪರಿಶೀಲಿಸಿದಾಗ ಯಾವುದೇ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬುರ್ಜ್‌ ಖಲೀಫಾ ಮೇಲೆ ಶ್ರೀ ರಾಮನ ಫೋಟೋ ಕಂಡುಬಂದಿದೆ ಎಂಬ ಉದಯವಾಣಿ ವರದಿ ಸುಳ್ಳಾಗಿದ್ದು, ವೈರಲ್‌ ಆಗಿರುವ ಪೋಟೋ ಎಡಿಟೆಡ್‌ ಫೋಟೋವಾಗಿದೆ ಎಂಬುದು ಖಚಿತವಾಗಿದೆ.


ಇದನ್ನೂ ಓದಿ : Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ


ಈ ವಿಡಿಯೋ ನೋಡಿ : Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *