ಏಪ್ರಿಲ್ 16ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ ಎಂಬುದು ನಿಜವೇ?

ಏಪ್ರಿಲ್

2024ರ ಲೋಕಸಭಾ ಚುನಾವಣೆಯು ಏಪ್ರಿಲ್ 16 ರಂದು ನಡೆಯಲಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಚುನಾವಣಾ ಯೋಜನಾ ಭಾಗವಾಗಿ ಭಾರತದ ಚುನಾವಣಾ ಆಯೋಗವು ಭಾಗಶಃ ಏಪ್ರಿಲ್ 16, 2024 ರಂದು “ಚುನಾವಣೆ ದಿನಾಂಕ” (ಎರಡನ್ನೂ ದಪ್ಪ ಅಕ್ಷರಗಳಲ್ಲಿ ಉಲ್ಲೇಖಿಸಲಾಗಿದೆ) ಎಂದು ಉಲ್ಲೇಖಿಸಿ ಜನವರಿ 19, 2024 ರಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರಲ್ಲಿ ಚುನಾವಣೆಯ ಸಮಯದಲ್ಲಿ ನಿಭಾಯಿಸಬೇಕಾದ ವಿವಿಧ ಚಟುವಟಿಕೆಗಳನ್ನು ಪಟ್ಟಿ ಮಾಡಲಾಗಿದೆ.

ದೆಹಲಿಯ ಎಲ್ಲಾ 11 ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (DEO) ಹೊರಡಿಸಲಾದ ಸುತ್ತೋಲೆಯು, “ಭಾರತೀಯ ಚುನಾವಣಾ ಆಯೋಗದ ಚುನಾವಣಾ ಯೋಜಕದಲ್ಲಿ ನೀಡಲಾದ ಸಮಯಕ್ಕೆ ಅನುಗುಣವಾಗಿ” ಎಂಬ ಶೀರ್ಷಿಕೆಯನ್ನು ಹೊಂದಿದೆ.  2024 ರ  ಸಾರ್ವತ್ರಿಕ ಚುನಾವಣೆಗಾಗಿ, ಆಯೋಗವು ಚುನಾವಣಾ ಪ್ಲಾನರ್‌ನಲ್ಲಿ ಉಲ್ಲೇಖದ ಉದ್ದೇಶಕ್ಕಾಗಿ ಮತ್ತು ಪ್ರಾರಂಭ ಮತ್ತು ಅಂತ್ಯದ ದಿನಾಂಕಗಳನ್ನು ಲೆಕ್ಕಾಚಾರ ಮಾಡಲು ಚುನಾವಣಾ ದಿನವನ್ನು 16.04.2024 ಎಂದು ತಾತ್ಕಾಲಿಕವಾಗಿ ನೀಡಿದೆ ಎಂದು ಬರೆಯಾಲಾಗಿದೆ. ಇದರಿಂದ ಲೋಕಸಭಾ ಚುನಾವಣೆ ಏಪ್ರಿಲ್ 16 ರಂದು ನಡೆಯಲಿದೆ ಎಂದು ಹಲವರು ಹಂಚಿಕೊಂಡಿದ್ದರು.

ಟ್ವೀಟ್ ಮೂಲಕ ಇದಕ್ಕೆ ಸ್ಪಷ್ಟೀಕರಣ ನೀಡಿರುವ  ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳು, “ಇದು ಕೇವಲ ಅಧಿಕಾರಿಗಳಿಗೆ ಚಟುವಟಿಕೆಗಳನ್ನು ಯೋಜಿಸಲು ಮತ್ತು ಸಕ್ರಿಯಗೊಳಿಸಲು ನೀಡಿರುವ “ತಾತ್ಕಾಲಿಕ ದಿನಾಂಕ” ಎಂದು ಹೇಳಿದ್ದಾರೆ. 16.04.2024 ಲೋಕಸಭೆ ಚುನಾವಣೆಯ ತಾತ್ಕಾಲಿಕ ಮತದಾನದ ದಿನವೇ ಹೊರತು ಅಂದೇ ಚುನಾವಣೆ ನಡೆಯುತ್ತದೆ ಎಂದಲ್ಲ. ECI ಯ ಚುನಾವಣಾ ಯೋಜಕರ ಪ್ರಕಾರ ಚಟುವಟಿಕೆಗಳನ್ನು ಯೋಜಿಸಲು ಅಧಿಕಾರಿಗಳಿಗೆ ‘ಉಲ್ಲೇಖ’ಕ್ಕಾಗಿ ಮಾತ್ರ ಈ ದಿನಾಂಕವನ್ನು ಉಲ್ಲೇಖಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಲೋಕಸಭೆಯ ಚುನಾವಣೆ ನಡೆಯುವ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಏಪ್ರಿಲ್ 16 ಚುನಾವಣಾ ಅಧಿಕಾರಿಗಳ ಆಂತರಿಕ ವ್ಯವಹಾರಕ್ಕಾಗಿ ಇರು ತಾತ್ಕಾಲಿಕ ದಿನಾಂಕ ಅಷ್ಟೇ. ಮೇ ಅಂತ್ಯದೊಳಗೆ ಭಾರತವು ಚುನಾವಣಾ ಪ್ರಕ್ರಿಯೆ ಮುಗಿಸಬೇಕಿರುತ್ತದೆ. ಆದ್ದರಿಂದ ಏಪ್ರಿಲ್‌ ತಿಂಗಳಿನಿಂದ ಮೇ ತಿಂಗಳವರೆಗೂ ಹಲವಾರು ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. 2019 ರ ಚುನಾವಣೆಯು ಏಳು ಹಂತಗಳಲ್ಲಿ ನಡೆಯಿತು, ಏಪ್ರಿಲ್ 11 ರಿಂದ ಪ್ರಾರಂಭವಾಗಿ ಮೇ 19 ಕ್ಕೆ ಕೊನೆಗೊಂಡಿತು, ಫಲಿತಾಂಶವು ಮೇ 23 ರಂದು ಪ್ರಕಟವಾಯಿತು.


ಇದನ್ನೂ ಓದಿ; ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಗೊತ್ತಿರಬೇಕೆಂಬ ಆದೇಶ ಹಿಂದಿನ ಬಿಜೆಪಿ ಸರ್ಕಾರದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *