“ಮುಸಲ್ಮಾನರ ಶ್ರದ್ಧಾ ಕೇಂದ್ರ ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿಯೂ ಕೂಡ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೆಲವರು ಕೇಸರಿ ಬಣ್ಣದ ನಿಲವಂಗಿಯನ್ನು ಧರಿಸಿ, ರಾಮ ನಾಮವನ್ನು ಜಪ ಮಾಡಿದ್ದಾರೆ. ಜೊತೆಗೆ ಹಿನ್ನಲೆ ಸಂಗೀತದಲ್ಲಿ ರಾಮನ ಹಾಡನ್ನು ಕೇಳ ಬಹುದು” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಗೆ, ವಾಟ್ಸ್‌ಆಪ್‌ಗಳಲ್ಲಿ, ವಿವಿಧ ಅಂತರ್ಜಾಲ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನ ನಡೆಸಿದಾಗ ಅಸಲಿ ವಿಚಾರ ಬಹಿರಂಗಗೊಂಡಿದೆ.
ಫ್ಯಾಕ್ಟ್‌ಚೆಕ್
ಈ ವೈರಲ್ ವಿಡಿಯೋ ಕುರಿತು ಅಂತರ್ಜಾಲದಲ್ಲಿ ಹುಡುಕಿದಾಗ ಈ ಬಗ್ಗೆ ಯಾವುದೇ ರೀತಿಯಾದ ಅಧಿಕೃತ ಮಾಧ್ಯಮ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಇನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ಪರಿವರ್ತಿಸಲಾಯಿತು, ಬಳಿಕ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಈ ಕುರಿತು ವೈರಲ್ ಆಗಿರುವಂತೆ ಹಲವು ರೀತಿಯ ಸುಳ್ಳು ಸುದ್ದಿಗಳು ಪತ್ತೆಯಾಗಿದ್ದವು. ಇದೇ ವೇಳೆಯಲ್ಲಿ 9 ನವೆಂಬರ್ 2022 ರಿಂದಲೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.
ಈ ವಿಡಿಯೋವನ್ನು ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ “ಉಮ್ರಾ 2022 – ಇಂಡೋನೇಷಿಯಾದ ಯಾತ್ರಿಕರು ಕುಬಾ ಮಸೀದಿಗೆ ಭೇಟಿ ನೀಡಿದ್ದಾರೆ” ಎಂದು ಶೀರ್ಷಿಕೆಯಲ್ಲಿ ಕಂಡು ಬಂದಿದೆ. ಈ ಇಂಡೋನೇಷಿಯಾ ಯಾತ್ರಿಗಳ ಹಲವು ವಿಡಿಯೋಗಳು ಕಂಡು ಬಂದಿದ್ದು, ಅದರಲ್ಲೂ ಕೂಡ ಇವರು ಕೇಸರಿ ಬಣ್ಣದ ನಿಲುವಂಗಿ ಧರಿಸುವುದನ್ನ ಕಾಣಬಬಹುದಾಗಿದೆ. ಆದರೆ ಎಲ್ಲಿಯೂ ಅವರು ರಾಮ ನಾಮವನ್ನು ಜಪಿಸಿದ ವರದಿಗಳು ಕಂಡು ಬಂದಿಲ್ಲ.
ಇನ್ನು ವೈರಲ್ ವಿಡಿಯೋದ ಹಿಂದೆ ಹಾಕಲಾಗಿರುವ ಹಾಡನ್ನು ಎಡಿಟ್ ಮಾಡಲಾಗಿದೆ. ಅಸಲಿಗೆ ಮೂಲ ವಿಡಿಯೋದ ಹಿಂಭಾಗದಲ್ಲಿ ಯಾವುದೇ ರೀತಿಯಾದ ಹಾಡುಗಳನ್ನು ಹಾಕಲಾಗಿಲ್ಲ ಎಂಬುದು ತಿಳಿದು ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಮೆಕ್ಕಾದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮುಸಲ್ಮಾನರು ರಾಮನ ಜಪ ಮಾಡಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ ಎಂಬುದು ಸಾಭೀತಾಗಿದೆ.
ಇದನ್ನೂ ಓದಿ : Fact Check | ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ದಂಡ? – ಅಸಲಿ ವಿಷಯ ಇಲ್ಲಿದೆ
ವಿಡಿಯೋ ನೋಡಿ : Fact Check | ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ದಂಡ? – ಅಸಲಿ ವಿಷಯ ಇಲ್ಲಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.