ಜನವರಿ 22 ರಂದು ಅಯೋಧ್ಯೆಯ ರಾಮಮಂಂದಿರ ಉದ್ಘಾಟಿಸಿ, ಬಾಲರಾಮ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿಯನ್ನು ಕೆತ್ತಿದವರು ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್. ರಾಮನ ವಿಗ್ರಹ ತಯಾರಾಗಲು ಬಳಸಿದ ಕಪ್ಪು ಶಿಲೆ ಕೂಡ ಮೈಸೂರಿನದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 80 ಸಾವಿರ ರೂ ದಂಡವನ್ನು ಹಾಕುವ ಮೂಲಕ ರಾಮ ವಿರೋಧಿ ಎಂದು ಸಾಭೀತು ಪಡಿಸಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಪ್ರತಿಪಾದಿಸಿ ಹಲವಾರು ಜನ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: 2022ರಲ್ಲಿಯೇ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದ ನಿವಾಸಿ ಹನುಮಯ್ಯ ಅವರ ಪುತ್ರ ಹೆಚ್.ರಾಮದಾಸ್ ಅವರು ಗ್ರಾಮದಿಂದ 2.ಕಿ.ಮೀ ದೂರದ ಸರ್ವೇ ನಂ.176,177ರ ತಮ್ಮ ಜಮೀನನ್ನು ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು.
ಈ ವೇಳೆ ಕಲ್ಲುಗಳು ಸಿಕ್ಕಿದ್ದರಿಂದ ಹತ್ತು ಅಡಿ ಆಳದಲ್ಲಿ ಭೂಮಿ ಕೊರೆದು ಬೃಹತ್ ಕಲ್ಲುಗಳನ್ನು ತೆಗೆದು ಕೆಲವರಿಗೆ ಮಾರಿದ್ದರು. ಆಗ ಯಾರೋ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿರುವ ಅಧಿಕಾರಿಗಳು ಅನುಮತಿ ಇಲ್ಲದೇ ಅನಧಿಕೃತವಾಗಿ ಕಲ್ಲು ತೆಗೆದ ಹಿನ್ನೆಲೆಯಲ್ಲಿ ಕಲ್ಲುಗಳ ಗಾತ್ರಗಳ ಆಧಾರದಲ್ಲಿ 80 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಕಲ್ಲು ತೆಗೆಯಲು ಅನುಮತಿ ಪಡೆಯಬೇಕು ಎನ್ನುವ ಅರಿವಿಲ್ಲದ ಗುತ್ತಿಗೆದಾರ ಶ್ರೀನಿವಾಸ್ ನಟರಾಜನ್ ಅನ್ಯ ಮಾರ್ಗವಿಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ ದಂಡವನ್ನು ಪಾವತಿಸಿದ್ದಾರೆ. ಈ ಘಟನೆಯು 2022ರಲ್ಲಿ ನಡೆದಿದ್ದು, ಆಗ ಕಾಂಗ್ರೆಸ್ ಸರ್ಕಾರ ಇರಲಿಲ್ಲ. ಅಲ್ಲದೇ ಮುಂದೆ ಈ ಕಲ್ಲು ಅಯೋಧ್ಯೆಯ ಬಾಲರಾಮನನ್ನು ನಿರ್ಮಿಸಲು ಬಳಕೆಯಾಗುತ್ತದೆ ಎಂದು ಯಾವ ಅಧಿಕಾರಿಗಳು ತಿಳಿದಿರಲಿಲ್ಲ, ಸ್ವತಃ ಗುತ್ತಿಗೆದಾರನಿಗೂ ತಿಳಿದಿರಲಿಲ್ಲ. ಆಗ ಸರ್ಕಾರಕ್ಕೂ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ದಂಡ ವಿದಿಸಿದ ಬಳಿಕ ಅಧಿಕಾರಿಗಳು ತಮಗೆ ತಿಳಿ ಹೇಳಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ಅವರಿಗೆ ಲೈಸನ್ಸ್ ಮಾಡಿಕೊಡಲು ನೆರವಾಗಿದ್ದಾರೆ ಎಂದು ಸ್ವತಃ ಗುತ್ತಿಗೇದಾರ ಶ್ರೀನಿವಾಸ್ ಅವರೇ ಒಪ್ಪಿಕೊಂಡಿದ್ದಾರೆ.
ಇನ್ನೂ ಸಂಸದ ಪ್ರತಾಪ್ ಸಿಂಹ ಅವರು ಸಹ ಯಾವುದೇ ಕಲ್ಲುಗಳನ್ನು ಭೂಮಿಯಿಂದ ಹೊರತೆಗೆಯುವಾಗ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆದ್ದರಿಂದ ಶ್ರೀನಿವಾಸ್ ಅವರ ಮೇಲಿನ ದಂಡಕ್ಕೂ, ಬಾಲ ರಾಮ ವಿಗ್ರಹಕ್ಕೂ, ಕಾಂಗ್ರೆಸ್ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಈ ಘಟನೆ ಜರುಗಿಲ್ಲ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹಳೆಯ ಘಟನೆಯನ್ನು ಈಗ ನಡೆದಿದೆ ಎಂಬಂತೆ ತಪ್ಪಾಗಿ ಚಿತ್ರಿಸಲಾಗುತ್ತಿದೆ.
ಇದನ್ನು ಓದಿ: Fact Check: ಭಾರತ ಸರ್ಕಾರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ.ಗಳನ್ನು ನೀಡುತ್ತಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಉರ್ದು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು | Anganawadi
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.