Fact Check: ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ

ದೇಶದಲ್ಲಿ ಲೋಕಸಭಾ ಚುನಾವಣಾ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ನಡೆದಿದೆ. ಒಟ್ಟು ಏಳು ಹಂತದಲ್ಲಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ನೆನ್ನೆಯಷ್ಟೇ ರಾಜಸ್ತಾನದ ಬನ್ಸವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಕೋಮುವಾದಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಭಾರತ ದೇಶದ ಪ್ರಧಾನ ಮಂತ್ರಿಗಳು ಧರ್ಮದ ಆಧಾರದ ಮೇಲೆ ಇಲ್ಲಿನ ಜನರನ್ನು ವಿಭಜಿಸಿ ಮಾತನಾಡುವುದು ಅಸಂವಿಧಾನಿಕ ನಡೆಯಾಗುತ್ತದೆ . ನಮ್ಮ ಸಂವಿಧಾನ ಭಾರತದ ಎಲ್ಲಾ ಧರ್ಮ, ಜಾತಿ, ಭಾಷಿಗರನ್ನು ಸಹ ಯಾವುದೇ ಭೇದ-ಭಾವವಿಲ್ಲದೆ ಭಾರತದ ಪ್ರಜೆಗಳೆಂದು ಗೌರವಿಸಿ ಅವರಿಗೆ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ಕಲ್ಪಿಸುತ್ತದೆ.  

ಆದರೆ ಮೋದಿಯವರು ತಮ್ಮ ಭಾಷಣದಲ್ಲಿ “ತಾಯಂದಿರೇ ಮತ್ತು ಸಹೋದರೇ.. ನಗರ ನಕ್ಸಲರ ಮನಸ್ಥಿತಿಯ ಅವರು ನಿಮ್ಮ ಮಂಗಳಸೂತ್ರವನ್ನೂ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಹೋಗಬಲ್ಲರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ. ದೇಶದ ಸಂಪನ್ಮೂಲಗಳಿಗೆ ಅಲ್ಪಸಂಖ್ಯಾತರು ಮೊದಲ ಹಕ್ಕುದಾರರು ಎಂದು ಮನಮೋಹನ್ ಸಿಂಗ್ ಸರ್ಕಾರ ಹೇಳಿತ್ತು, ಅಂದರೆ ಅವರು ಈ ಆಸ್ತಿಯನ್ನು ಸಂಗ್ರಹಿಸಿ ಯಾರಿಗೆ ಹಂಚುತ್ತಾರೆ – ಹೆಚ್ಚು ಮಕ್ಕಳನ್ನು ಹೊಂದಿರುವವರು ಮತ್ತು ಅದನ್ನು ನುಸುಳುಕೋರರಿಗೆ ಹಂಚುತ್ತಾರೆ. ನಿಮ್ಮ ಶ್ರಮದ ಹಣ ನುಸುಳುಕೋರರಿಗೆ ಸಿಗಬೇಕೆ? ನೀವು ಇದನ್ನು ಒಪ್ಪುತ್ತೀರಾ?”ಎಂದು ಜನರನ್ನುದ್ದೇಶಿಸಿ ಮತಯಾಚನೆ ನಡೆಸಿದ್ದಾರೆ. ಹಾಗಾದರೆ ಪ್ರಧಾನಿ ಮೋದಿಯವರ ಹೇಳಿಕೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 9 ಡಿಸೆಂಬರ್ 2006ರಲ್ಲಿ ನ್ಯಾಷನಲ್ ಡೆವಲಪ್‌ಮೆಂಟ್ ಕೌಂಸಿಲ್‌ನ 52 ನೇ ಸಭೆಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು “ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ನಾನು ನಂಬುತ್ತೇನೆ: ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ ಮತ್ತು ಸಾಮಾನ್ಯ ಮೂಲಸೌಕರ್ಯಗಳ ಅಗತ್ಯ ಸಾರ್ವಜನಿಕ ಹೂಡಿಕೆ ಅಗತ್ಯಗಳು, ಜೊತೆಗೆ SC/ST ಗಳು, ಇತರ ಹಿಂದುಳಿದ ವರ್ಗಗಳ ಉನ್ನತಿಗಾಗಿ ಕಾರ್ಯಕ್ರಮಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಮತ್ತು ಮಕ್ಕಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು, ಅಭಿವೃದ್ಧಿಯ ಫಲಗಳಲ್ಲಿ ಸಮಾನವಾಗಿ ಹಂಚಿಕೊಳ್ಳಲು ಅಧಿಕಾರವನ್ನು ಹೊಂದಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಅವರು ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿರಬೇಕು. ಕೇಂದ್ರವು ಅಸಂಖ್ಯಾತ ಇತರ ಜವಾಬ್ದಾರಿಗಳನ್ನು ಹೊಂದಿದೆ, ಅದರ ಬೇಡಿಕೆಗಳನ್ನು ಒಟ್ಟಾರೆ ಸಂಪನ್ಮೂಲ ಲಭ್ಯತೆಯೊಳಗೆ ಅಳವಡಿಸಬೇಕಾಗುತ್ತದೆ. ಎಂದು ST, ST ಮತ್ತು ಅಲ್ಪಸಂಖ್ಯಾತರಿಗೆ ದೇಶದ ಸಂಪನ್ಮೂಲಗಳ ಹಂಚಿಕೆ ಕುರಿತು ಮಾತನಾಡಿದ್ದರು.

ಪ್ರಧಾನಿ ಮೋದಿಯವರ ಈ ಹೇಳಿಕೆಯ ಕುರಿತು ಇದು ಸುಳ್ಳು ಮತ್ತು ಕೋಮುಪ್ರಚೋದನಾಕಾರಿ ಭಾಷಣ ಎಂದು ದಿ ವೈರ್ ವರದಿ ಮಾಡಿದೆ. ತಮ್ಮ ಭಾಷಣವನ್ನು ತಿರುಚಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ 2006ರ ಭಾಷಣದ ಕುರಿತು ಸ್ಪಷ್ಟನೆ ನೀಡಿ ಮೋದಿಯವರು ತಮ್ಮ ಮಾತನ್ನು ತಿರುಚಿರುವ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ನೂ ಪ್ರಧಾನಿ ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಮತ್ತು ಬಲಪಂಥಿಯರು ದೇಶದಲ್ಲಿ ಮುಸ್ಲಿಂ ಜನಸಂಖ್ಯಾ ಜಿಹಾದ್ ಇಂದ ಮುಂಬರುವ ದಿನಗಳಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಾಗುತ್ತದೆ ಎಂದು ಜನರನ್ನು ಹೆದರಿಸಿ ಹಿಂದುತ್ವದ, ಹಿಂದು ಧರ್ಮದ ಹೆಸರಿನಲ್ಲಿ ದ್ವೇಷರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತದೆಯೇ?

ನಾಗರೀಕ ನೊಂದಾಣಿ ವ್ಯವಸ್ಥೆ (CRS) ಹೇಳಿಕೆಯ ಪ್ರಕಾರ ಕೇಂದ್ರ ಗೃಹ ಸಚಿವಾಲಯ ಜನನ-ಮರಣ ನೊಂದಾಣಿ ಪ್ರಕ್ರಿಯೆಯನ್ನು ಮಾಡುತ್ತದೆ, ಆದರೆ ಅದರ ಮಾಹಿತಿ ಯಾವುದೇ ಧರ್ಮದ ಆಧಾರದ ಮೇಲೆ ಲಭಿಸುವುದಿಲ್ಲ. NHFS-5ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9 ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ. 2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಪ್ಯೂ ರಿಸರ್ಚ್ ಸೆಂಟರ್ ಭಾರತದಲ್ಲಿ ಎಲ್ಲಾ ಧರ್ಮದ ಮಹಿಳೆಯರ ಫಲವತ್ತತೆಯ ದರದಲ್ಲೂ ಇಳಿಕೆಯಾಗಿದೆ ಎಂದು ವರದಿ ಮಾಡಿದೆ. ಆದರೂ ಹಿಂದು ಮಹಿಳೆಗೆ ಹೋಲಿಸಿದರೆ ಮುಸ್ಲಿಂ ಫಲವತ್ತತೆಯ ದರ ಹೆಚ್ಚಿದ್ದು ಮುಂಬರುವ ದಿನಗಳಲ್ಲಿ ಹಿಂದು ಮತ್ತು ಮುಸ್ಲಿಂ ಎರಡೂ ಧರ್ಮದ ಫಲವತ್ತತೆಯ ದರದಲ್ಲೂ ಇಳಿಕೆಯಾಗಲಿದೆ ಎಂದು ವರದಿಗಳು ಹೇಳುತ್ತಿವೆ. ಹಾಗಾಗಿ ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು.


ಇದನ್ನು ಓದಿ: ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *