Fact Check | ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ

“ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ: ಸಿದ್ದರಾಮಯ್ಯ.. ಅವಕಾಶವಾದಿಗಳಿಗೆ, ಓಲೈಕೆ; ಭಾಗ್ಯ, ಗ್ಯಾರಂಟಿ ರಾಜಕಾರಣ ಮಾಡುತ್ತ ದೇಶದ ಸಂಪತ್ತನ್ನು ಲೂಟಿ ಮತ ನೀಡಬೇಡಿ. ಮತದಾನದ ದಿನದಂದು ಮೈಮರೆಯದಿರಿ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಿವಿ9 ಸುದ್ದಿ ವಾಹಿನಿಯ ವಿಡಿಯೋವೊಂದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಇದೇ ರೀತಿ ಬಿಜೆಪಿ ಕೂಡ ಪೋಸ್ಟ್‌ವೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಅದರಲ್ಲಿ “ಭಾರತದ ಸಂಪತ್ತು‌, ಆಸ್ತಿ ಮುಸ್ಲಿಂರಿಗೇ ಸೇರಬೇಕು ಇದು ನಾಡಿನ ಮುಖ್ಯಮಂತ್ರಿಯ ಮನದಾಳದ ಮಾತು. ಭಾರತವನ್ನು ಮತ್ತೊಂದು ಪಾ’ಕೈ’ಸ್ತಾನ್ ಮಾಡುವ ಕಾಂಗ್ರೆಸ್ ಅಂತರಾಳವನ್ನು @siddaramaiah ಅವರೇ ಒಪ್ಪಿಕೊಂಡು ಬಹಿರಂಗಪಡಿಸಿದ್ದಾರೆ. @INCIndia ಅಧಿಕಾರಕ್ಕೆ ಬಂದರೆ, ಹಿಂದೂಗಳ ಮಾಂಗಲ್ಯ ಸರಕ್ಕೆ ಮುಸ್ಲಿಮರಿಗೆ ಅಧಿಕಾರವಿದೆ ಎಂದು ಫತ್ವಾ ಹೊರಡಿಸುತ್ತೆ. ಕೋಮುವಾದಿ ಕಾಂಗ್ರೆಸ್ ದೇಶಕ್ಕೆ ಕಂಟಕ!” ಎಂದು ಸುಳ್ಳು ಹಂಚಿಕೊಂಡಿದೆ.

ಫ್ಯಾಕ್ಟ್‌ಚೆಕ್‌ 

ಬಿಜೆಪಿ ಹಾಗು ಬಸನಗೌಡ ಪಾಟೀಲ್‌ ಯತ್ನಾಳ್‌ ಹಂಚಿಕೊಂಡಿರುವಂತೆ ಸಿಎಂ ಸಿದ್ದರಾಮಯ್ಯ ಅವರು ದೇಶದ ಸಂಪತ್ತು ಮುಸ್ಲಿಂರಿಗೆ ಹಂಚುತ್ತೇನೆ ಎಂದು ಹೇಳಿದ್ದಾರಾ ಎಂದು ಪರಿಶೀಲಿಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಟಿವಿ 9 ಕನ್ನಡ ವರದಿಯನ್ನ ಪತ್ತೆ ಹಚ್ಚಿದ್ದೇವು, ಈ ವರದಿಯು 4 ಡಿಸೆಂಬರ್‌ 2023 ರಂದು ಹಂಚಿಕೊಳ್ಳಲಾಗಿತ್ತು

ಇದೇ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪೂರ್ತಿ ಭಾಷಣ ಕೂಡ ಇದೆ ಅದರಲ್ಲಿ “ನಿಮಗೂ ಶಿಕ್ಷಣ ಸಿಗಬೇಕು, ನಿಮ್ಮ ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಆಗಬೇಕು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು. ನೀವು ಕೂಡ ಭಾರತೀಯರಲ್ವಾ? ಈ ದೇಶ ನಿಮಗೂ ಸೇರಬೇಕು, ನನಗೂ ಸೇರಬೇಕು. ಈ ದೇಶದ ಸಂಪತ್ತು ನಿಮಗೂ ಸಿಗಬೇಕು, ನನಗೂ ಸಿಗಬೇಕು. ಈ ದೇಶದ ಸಂಪತ್ತನ್ನು ನಿಮಗೂ ಹಂಚುವ ಕೆಲಸ ಮಾಡುತ್ತೇನೆ. ನಿಮಗೆ ಯಾವುದೇ ಕಾರಣಕ್ಕೆ ಕೂಡ ಅನ್ಯಾಯ ಆಗಲು ಬಿಡಲ್ಲ. ನಿಮ್ಮ ರಕ್ಷಣೆ ಮಾಡುವಂತಹ ಕೆಲಸ ಮಾಡುತ್ತೇನೆ. ಆದೇ ರೀತಿ ಎಲ್ಲಾ ಧರ್ಮ, ಜಾತಿಯವರಿಗೂ ರಕ್ಷಣೆ ಕೊಡುವಂತಹ ಕೆಲಸ ಮಾಡುತ್ತೇನೆ” ಎಂದಿದ್ದರು. ಇದನ್ನು ಪೂರ್ತಿ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಕುರಿತು ನ್ಯೂಸ್‌ 18 ಕನ್ನಡ ಕೂಡ ವರದಿಯನ್ನು ಮಾಡಿದೆ.

ನ್ಯೂಸ್‌ 18 ಕನ್ನಡ ವರದಿ
ನ್ಯೂಸ್‌ 18 ಕನ್ನಡ ವರದಿ

ಆದರೆ ಬಿಜೆಪಿ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಂಚಿಕೊಂಡಿರುವ ವಿಡಿಯೋದ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಹೇಳಿರುವ “ಎಲ್ಲಾ ಧರ್ಮ, ಜಾತಿಯವರಿಗೂ ರಕ್ಷಣೆ ಕೊಡುವಂತಹ ಕೆಲಸ ಮಾಡುತ್ತೇನೆ” ಎಂಬ ಹೇಳಿಕೆಯನ್ನು ತೆಗೆದು ಹಾಕಿ ಎಡಿಟ್‌ ಮಾಡಿ ಸುಳ್ಳು ಹಂಚಿಕೊಂಡಿದ್ದಾರೆ.

ಇನ್ನು ಬಿಜೆಪಿ ಈ ರೀತಿಯ ಸುಳ್ಳು ಹೇಳುವುದು ಇದೇ ಮೊದಲಲ್ಲ ಈ ಹಿಂದೆ ರಾಜ್ಯದ ಬಜೆಟ್‌ನಲ್ಲಿ ಮುಸಲ್ಮಾನರಿಗೆ  ಹೆಚ್ಚಿನ ಪಾಲು ನೀಡಲಾಗಿದೆ, ಹಿಂದುಗಳ ತೆರಿಗೆ ಮುಸಲ್ಮಾನರ ಮೆನೆಗೆ ಎಂದು ಸುಳ್ಳು ಹಬ್ಬಿಸಿತ್ತು. ಇದಕ್ಕೆ ಸ್ವತಃ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರೇ ಉತ್ತರವನ್ನು ನೀಡಿದ್ದರು. ಈ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಯನ್ನು ಕೂಡ ಪ್ರಕಟಿಸಿತ್ತು

2024ರಲ್ಲಿ ರಾಜ್ಯದ ಒಟ್ಟು ಬಜೆಟ್ ಗಾತ್ರ 3,71,000 ಕೋಟಿ ರೂಗಳಾಗಿದ್ದು, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14 ಪರ್ಸೆಂಟ್ ಇದೆ. ಆದರೆ, ನಾನು ಮುಸ್ಲಿಂ ಸಮುದಾಯಕ್ಕೆ ಶೇ.0.8 ಪರ್ಸೆಂಟ್ ಅನುದಾನವನ್ನು ಮಾತ್ರ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಹಾಗಾಗಿ ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ ಎಂಬುದು ಸುಳ್ಳಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ


ಈ ವಿಡಿಯೋ ನೋಡಿ : ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *