Fact Check: ರಾಜಸ್ತಾನದಲ್ಲಿ ಜಮೀನು ವ್ಯಾಜ್ಯದ ಗಲಾಟೆಯನ್ನು ಹಿಂದು ಮನೆಗೆ ಕಲ್ಲು ತೂರಾಟ ಎಂದು ತಪ್ಪಾಗಿ ಹಂಚಿಕೆ

ಹಿಂದು

ಇತ್ತೀಚೆಗೆ ಜನರಲ್ಲಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಬಿತ್ತುವ ಸಲುವಾಗಿ ಅನೇಕ ಪ್ರಯತ್ನಗಳನ್ನು ನಮ್ಮ ದೇಶದಲ್ಲಿ ನಡೆಸಲಾಗುತ್ತಿದೆ. ಎಲ್ಲಿಯೇ ಜಗಳಗಳು, ಕೊಲೆ, ಹಲ್ಲೆಗಳು ನಡೆದರೂ ಅದಕ್ಕೆ ಧರ್ಮದ ಬಣ್ಣ ಹಚ್ಚುವುದು, ಆರೋಪಿ ಮುಸ್ಲಿಂ ಆಗಿದ್ದರೆ ಅದನ್ನು ದೊಡ್ಡ ಸಂಗತಿ ಮಾಡಿ ರಾಜಕೀಯವಾಗಿ ಬದಲಾಯಿಸಲು ಹುನ್ನಾರಗಳು ನಡೆಯುತ್ತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಕುರಿತು ಇತರೆ ಜನರಲ್ಲಿ ಭಯ ಹುಟ್ಟಿಸಿ ನಾವು ನಿಮ್ಮ ರಕ್ಷಿಸುತ್ತೇವೆ ಎಂಬ ಸುಳ್ಳು ಭರವಸೆಗಳ ನೀಡಿ ಮತ ಪಡೆಯಲಷ್ಟೇ ಇಂತಹ ದ್ವೇಷದ ರಾಜಕಾರಣವನ್ನು ಹುಟ್ಟು ಹಾಕಲಾಗಿದೆ.

ಈಗ, ಇದು ಯಾವುದೇ ಚಲನಚಿತ್ರದ ದೃಶ್ಯವಲ್ಲ. ಉತ್ತರಾಖಂಡದ ಡೆಹರಾಡೂನ್‌ನಲ್ಲಿರುವ ಲೋಹಿಯಾ ನಗರದಲ್ಲಿ ಜಿಹಾದಿಗಳು ಹಿಂದೂ ಕುಟುಂಬಗಳನ್ನು ಓಡಿಸಿ ಓಡಿಸಿ ಹತ್ಯೆ ಮಾಡುವ ಘಟನೆಯ ಪ್ರಸಾರವಾಗಿದೆ. ಜಾತಿಯ ಹೆಸರಿನಲ್ಲಿ ಜಿಹಾದಿ ಪ್ರಿಯರಿಗೆ ಮತ ನೀಡುವವರು, ಕಣ್ಣುಗಳನ್ನು ತೆರೆದು ಕಾಣಿರಿ.” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ರಾಜಸ್ತಾನದ ಜೈಪುರ ಬಳಿಯ ಮಲ್ಪುರ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೋಲಿಸ್ ಹೇಳಿಕೆಯ ಪ್ರಕಾರ ಸಂಗನೇರ್‌ನ ಮಲ್ಪುರ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ದಾದಾ ಗುರುದೇವ್ ನಗರದಲ್ಲಿ ಇದ್ದ ತಮ್ಮ ಖಾಲಿ ನಿವೇಶನಕ್ಕೆ ಮಾಲೀಕರು ಕುಟುಂಬ ಸಮೇತ ಸ್ಥಳಕ್ಕೆ ಆಗಮಿಸಿದ್ದರು. ಮನೆ ಮಾಲೀಕರು ಅಲ್ಲಿಗೆ ತಲುಪುತ್ತಿದ್ದಂತೆ ಅಲ್ಲಿದ್ದ ದುಷ್ಕರ್ಮಿಗಳು ಇಡೀ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲಿನಿಂದ ಕುಟುಂಬದ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಕುಟುಂಬ ಸದಸ್ಯರಿಗೆ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸಂಚಿನ ಬಗ್ಗೆ ಈಗಾಗಲೇ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಮತ್ತೆ ಕೆಲ ಕಿಡಿಗೇಡಿಗಳು ಕೈಯಲ್ಲಿ ದೊಣ್ಣೆ ಹಿಡಿದು ಬಂದು ಪ್ಲಾಟ್ ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಭರತ್‌ಪುರ ಮೂಲದವರು ಎನ್ನಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಎಂದು  ಸಚ್ ಬೇದ್ಡಕ್(ಸತ್ಯ ನಿರ್ಭಯ) ಎಂಬ ಹಿಂದಿ ಮಾಧ್ಯಮ ವರದಿ ಮಾಡಿದೆ.

ಜೈಪುರದ ಭೂ ವಿವಾದ ಪ್ರಕರಣದಲ್ಲಿ ಸೋಮವಾರ, ಭೂಮಿಯನ್ನು ವಶಪಡಿಸಿಕೊಳ್ಳಲು ಬಂದ ದುಷ್ಕರ್ಮಿಗಳು ಕುಟುಂಬದ ಸದಸ್ಯರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಅದೇ ಸಮಯದಲ್ಲಿ, ಮಾಹಿತಿಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳದಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇತರರಿಗಾಗಿ ಶೋಧ ನಡೆಯುತ್ತಿದೆ. ಎಂದು ಈ ಟಿವಿ ಭಾರತ್ ರಾಜಸ್ತಾನ ಏಪ್ರಿಲ್ 8, 2024ರಂದು ತನ್ನ ವರದಿಯಲ್ಲಿ ತಿಳಿಸಿದೆ.

ಮಾಲಿಕ ಶಂಕರ್ ಲಾಲ್ ಸುಯಿವಾಲ್ ಅವರು ಮಾಲ್ಪುರ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದಾದಾಬರಿ ಜೈನ್ ಮಂದಿರ ಸ್ಟೇಷನ್ ರೋಡ್ ಸಂಗನೇರ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ 50ರಿಂದ 60 ಮಂದಿ ಕೈಯಲ್ಲಿ ದೊಣ್ಣೆ ಹಿಡಿದು ಬಂದಿದ್ದರು. ಏಕಾಏಕಿ ದುಷ್ಕರ್ಮಿಗಳು ಮಾಲಿಕರ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜನರು ತೀವ್ರವಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಪ್ಲಾಟ್(ಜಾಗ) ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಅವರು ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ಸಂತ್ರಸ್ತ ಕುಟುಂಬದ ಮಹಿಳೆಯರ ಮೇಲೆ ಹಲ್ಲೆ ನಡೆಸಿದರು.” ಎಂದು ತನ್ನ ವರದಿಯಲ್ಲಿ  ತಿಳಿಸಿದೆ.

ಪೋಲೀಸರು ಹಲ್ಲೆ ನಡೆಸಿದವರು ಮುಸ್ಲಿಂ ಎಂದು ತಿಳಿಸಿಲ್ಲ. ಇದು ಜಮೀನಿನ ವಿಚಾರವಾಗಿ ನಡೆದ ಜಗಳ ಎಂದಿದ್ದಾರೆ. ಆಗಾಗಿ ಇದು ಉತ್ತರಕಾಂಡದ ಡೆಹರಾಡೂನ್‌ಗೆ ಸಂಬಂದಿಸಿದ್ದಲ್ಲ. ಬೇಕಂತಲೇ ಕೆಲವು ಕಿಡಿಗೇಡಿಗಳು ಈ ಪ್ರಕರಣಕ್ಕೆ ಹಿಂದು-ಮುಸ್ಲಿಂ ಕೋಮು ಕಲಹ ಎಂದು ಹರಿಬಿಟ್ಟಿದ್ದಾರೆ.


ಇದನ್ನು ಓದಿ: Fact Check: ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ


ವಿಡಿಯೋ ನೊಡಿ: Fact Check | ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *