ಬೇಸಿಗೆಯಲ್ಲಿ ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿದರೆ ನಿಮ್ಮ ವಾಹನ ಸ್ಪೋಟಗೊಳ್ಳುತ್ತದೆ. ಹಾಗಾಗಿ ಫುಲ್ ಟ್ಯಾಂಕ್ ಹಾಕಿಸಬೇಡಿ ಎಂದು ಇಂಡಿಯನ್ ಆಯಿಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಈ ಕುರಿತು ಹುಡುಕಿದಾಗ ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಇಂಡಿಯನ್ ಆಯಿಲ್ ವೆಬ್‌ಸೈಟ್ ಮತ್ತು ಅದರ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಎಚ್ಚರಿಕೆ ಕಂಡುಬಂದಿಲ್ಲ. ಮತ್ತಷ್ಟು ಹಿಂದಕ್ಕೆ ಹೋಗಿ ಹುಡುಕಿದಾಗ 2019ರಲ್ಲಿ ಇಂಡಿಯನ್ ಆಯಿಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಈ ಕುರಿತು ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ.
Important announcement from #IndianOil. It is perfectly safe to fill fuel in vehicles up to the limit(max) as specified by the manufacturer irrespective of winter or summer. pic.twitter.com/uwQFDtjTdi
— Indian Oil Corp Ltd (@IndianOilcl) June 3, 2019
ಬೇಸಿಗೆಯಲ್ಲಿ ಫುಲ್ ಟ್ಯಾಂಕ್ ತುಂಬಿಸುವುದರಿಂದ ವಾಹನಗಳು ಬ್ಲಾಸ್ಟ್ ಆಗುತ್ತವೆ ಎಂದು ಹಲವು ಪೋಸ್ಟರ್‌ಗಳು ಹರಿದಾಡುತ್ತಿವೆ. ಆದರೆ ಅವೆಲ್ಲವೂ ಸುಳ್ಳಾಗಿದ್ದು, ನಮಗೂ ಅವಕ್ಕೂ ಸಂಬಂಧವಿಲ್ಲ. ಆಟೋಮೊಬೈಲ್ ತಯಾರಕರು ತಮ್ಮ ವಾಹನಗಳ ಸಾಮರ್ಥ್ಯ ಮತ್ತು ಸಮಸ್ಯೆಗಳು ಎಲ್ಲಾ ಅಂಶಗಳನ್ನು ಸುರಕ್ಷತಾ ಅಂಶಗಳೊಂದಿಗೆ ಪರಿಗಣಿಸಿ ತಯಾರಿಸುತ್ತಾರೆ. ಜೊತೆಗೆ ವಾಹನಗಳಲ್ಲಿ ಪೆಟ್ರೋಲ್/ಡೀಸೆಲ್ ಟ್ಯಾಂಕ್‌ನಲ್ಲಿ ಎಷ್ಟು ತುಂಬಿಸಬೇಕು ಎನ್ನುವ ವಿಚಾರವನ್ನು ಸಹ ಗಮನಕ್ಕೆ ತೆಗೆದುಕೊಂಡಿರುತ್ತಾರೆ. ಇದಕ್ಕೆ ಹೊರತಾಗಿಲ್ಲ. ಚಳಿಗಾಲಕ್ಕೆ ಒಂದು ರೀತಿ, ಬೇಸಿಗೆ ಕಾಲಕ್ಕೆ ಒಂದು ರೀತಿ ಎಂದಿರುವುದಿಲ್ಲ. ಹಾಗಾಗಿ ಗ್ರಾಹಕರು ಎಷ್ಟು ಬೇಕಾದರೂ ಪೆಟ್ರೋಲ್, ಡಿಸೇಲ್ ತುಂಬಿಸಬಹುದು ಎಂದು ಇಂಡಿಯನ್ ಆಯಿಲ್ ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಫುಲ್ ಟ್ಯಾಂಕ್ ಮಾಡಿಸಿದರೆ ಬ್ಲಾಸ್ಟ್ ಆಗುತ್ತದೆ ಎಂಬುದು ಸುಳ್ಳು. ಈ ಸುಳ್ಳು 2019 ರಿಂದಲೂ ಪ್ರತಿ ಬೇಸಿಗೆ ಕಾಲದಲ್ಲಿ ಹರಡುತ್ತದೆ. ಇದನ್ನು ಇಂಡಿಯನ್ ಆಯಿಲ್ ಕಂಪನಿ ಸ್ಪಷ್ಟವಾಗಿ ನಿರಾಕರಿಸಿದೆ.
ಇದನ್ನೂ ಓದಿ: ಶ್ರೀ ಸಿದ್ದರಾಮಯ್ಯ ಲಾ ಕಾಲೇಜು ಹೊರಡಿಸಿದ ಸುತ್ತೋಲೆಗೂ ಆರೋಗ್ಯ ಇಲಾಖೆಗೂ ಸಂಬಂಧವಿಲ್ಲ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ