ಬಿಜೆಪಿ ಆಡಳಿತಾವಧಿಯಲ್ಲೂ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು

2024-25ರ ವಾರ್ಷಿಕ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ನಂತರ ಬಿಜೆಪಿ ಮುಖಂಡರು ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಹಣವನ್ನು ಕಾಂಗ್ರೆಸ್‌ ಸರ್ಕಾರ ಮುಸ್ಲಿಮರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದು ಧಾರ್ಮಿಕ ದತ್ತಿ ಇಲಾಖೆಯ ಸಚಿವ ರಾಮಲಿಂಗರೆಡ್ಡಿ ಮತ್ತು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ ಬಳಿಕ ಬಿಜೆಪಿ ನಾಯಕರು ದೇವಾಲಯದ ಹಣದ ವಿಚಾರವನ್ನು ಕೈಬಿಟ್ಟಿದ್ದರು.

ಮತ್ತೆ ಈಗ, ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ಕಾಂಗ್ರೆಸ್‌ ಸರ್ಕಾರ ಅಯ್ಕೆ ಮಾಡಿದೆ. ನಮ್ಮ ದೇವಸ್ಥಾನಗಳನ್ನು ಕಾಂಗ್ರೆಸ್‌ ಲೂಟಿ ಮಾಡಿದ ಬಳಿಕ ಈಗ ಎಲ್ಲಾ ದೇವಸ್ಥಾನಗಳನ್ನು ಹದ್ದುಬಸ್ತಿಗೆ ತೆಗೆದುಕೊಳ್ಳಲು ನೋಡುತ್ತಿದೆ ಎಂದು ಆರೋಪಿಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬಿಜೆಪಿಯು ಆರೋಪಿಸಿದೆ.

ಫ್ಯಾಕ್ಟ್‌ಚೆಕ್: ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಸಾಮರಸ್ಯದ ಭಾಗವಾಗಿ ಒಬ್ಬ ಇತರ ಧರ್ಮಿಯ ಸದಸ್ಯರನ್ನು ಆಯ್ಕೆ ಮಾಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಆರೋಪಕ್ಕೆ ಪ್ರತಿಕ್ರಯಿಸಿರುವ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿಯವರು “ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಸದಸ್ಯರೊಬ್ಬರನ್ನು ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ಅಪಪ್ರಚಾರಕ್ಕೆ ಬಿಜೆಪಿ ಇಳಿದಿದೆ. ಆದರೆ ವಾಸ್ತವದಲ್ಲಿ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಅಂದಿನ ಸಚಿವರಾಗಿದ್ದ ಶ್ರೀಎಂಟಿಬಿ ನಾಗರಾಜ್ @MTBNagaraj ಅವರು 2022 ನೇ ಸಾಲಿನ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಅಫ್ಸರ್ ಎಂಬುವವರನ್ನು ಸದಸ್ಯರನ್ನಾಗಿ ಮಾಡಿದ್ದರು. 2020-21ನೇ ಸಾಲಿನ ಸಮಿತಿಯಲ್ಲಿ ಸಹ ಇದೇ ಬಿಜೆಪಿಯವರು ಇಮ್ತಿಯಾಜ್‌ ಪಾಷಾ ಎಂಬುವವರು ಸದಸ್ಯರನ್ನಾಗಿ ಮಾಡಿದ್ದನ್ನು ಮರೆತಂತಿದೆ. ಹಿಂದಿನ ಅವಧಿಯ ಎಲ್ಲ ಪಟ್ಟಿಗಳನ್ನು ಬಿಜೆಪಿ ತೆರೆದು ನೋಡಿ ಸ್ವಲ್ಪವಾದರೂ ವಿವೇಕದಿಂದ ವರ್ತಿಸಿದರೆ ಉತ್ತಮ. ಅನ್ಯಧರ್ಮಿಯರ ಬಗ್ಗೆ ದ್ವೇಷವನ್ನು ಬಿತ್ತಿ ಅವರ ವಿರುದ್ಧ ಹಿಂದೂ ಸಮುದಾಯವನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಣಹದ್ದುಗಳಂತೆ ಸದಾ ಹಪಹಪಿಸುವ ಬಿಜೆಪಿಗರು ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ.” ಎಂದು ಸುಳ್ಳು ಹಬ್ಬಿಸುತ್ತಿರುವ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ರಾಮಲಿಂಗರೆಡ್ಡಿಯವರು ಈ ಹಿಂದೆ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಸದಸ್ಯರು ಇದ್ದುದರ ದಾಖಲೆಗಳನ್ನು ಹಂಚಿಕೊಂಡಿದ್ದು ನೀವದನ್ನು ಈ ಕೆಳಗೆ ನೋಡಬಹುದು.

ಸಧ್ಯ ರಾಮಲಿಂಗರೆಡ್ಡಿಯವರು ಬಿಜೆಪಿ ಆಡಳಿತಾವದಿಯಲ್ಲೂ ಸಹ ಮುಸ್ಲಿಂ ಸದಸ್ಯರನ್ನು ನೇಮಕ ಮಾಡಿರುವ ಕುರಿತು ದಾಖಲೆ ಒದಗಿಸುತ್ತಿದ್ದಂತೆ. ಬಿಜೆಪಿಯು ತನ್ನ ಎಕ್ಸ್‌ ಖಾತೆಯಲ್ಲಿ ಮಾಡಿದ ಆರೋಪವನ್ನು ಡಿಲಿಟ್ ಮಾಡಿದೆ. ಆದ್ದರಿಂದ ಇದು ಹಿಂದಿನಿಂದ ನಡೆದುಕೊಂಡು ಬರುತ್ತಿರುವ ರೂಢಿಯೇ ಹೊರತು ಕಾಂಗ್ರೆಸ್‌ ಸರ್ಕಾರ ಹೊಸ ನಡೆಯನ್ನೇನು ಅನುಸರಿಸುತ್ತಿಲ್ಲ.


ಇದನ್ನು ಓದಿ: ಕಾಂಗ್ರೆಸಿಗೆ ಲಾಭ ಆಗುವುದು ಬೇಡ, ನನ್ನ ಪರವಾಗಿ ಬಿಜೆಪಿಗೆ ಮತ ನೀಡಿ ಎಂದು ಈಶ್ವರಪ್ಪ ಹೇಳಿಲ್ಲ


ವಿಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *