ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರು ಮೋದಿಯವರು ತಮ್ಮ ಸ್ನೇಹಿತರಾದ ಅಂಬಾನಿ-ಅದಾನಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಹಿಂದೆ ಹಲವು ಬಾರಿ ಟೀಕಿಸಿದ್ದರು. ಆದರೆ ಈಗ ಅವರೊಡನೆ ಒಪ್ಪಂದ ಮಾಡಿಕೊಂಡು ಟೀಕಿಸುವುದನ್ನು ನಿಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ತೆಲಂಗಾಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ‘ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ಏಕಾಏಕಿ ಅಂಬಾನಿ-ಅದಾನಿಯ ವಿಷಯದ ಬಗ್ಗೆ ಟೀಕಿಸುವುದನ್ನು ನಿಲ್ಲಿಸಿದೆ. ಕಾಂಗ್ರೆಸ್‌ಗೆ ಎಷ್ಟು ಹಣ ತಲುಪಿದೆ? ಟೆಂಪೊದಲ್ಲಿ ಎಷ್ಟು ಕಪ್ಪು ಹಣ ಕಾಂಗ್ರೆಸ್‌ಗೆ ತಲುಪಿದೆ? ಅಂಬಾನಿ-ಅದಾನಿ ಬಗ್ಗೆ ಟೀಕಿಸುವುದನ್ನು ರಾತ್ರಿ ಕಳೆಯುವುದರೊಳಗಾಗಿ ನಿಲ್ಲಿಸಿದ್ದು ಏಕೆ ಎನ್ನುವುದನ್ನು ಜನರಿಗೆ ಹೇಳಬೇಕು’ ಎಂದು ಪ್ರಶ್ನಿಸಿದ್ದಾರೆ. ಇದು ನಿಜವೇ? ಕಾಂಗ್ರೆಸ್ ಟೀಕೆ ನಿಲ್ಲಿಸಿದೆಯೇ ಎಂದು ಪರಿಶೀಲಿಸೋಣ.
Why has Shahzade Ji stopped talking of Ambani and Adani in this election all of sudden? People are smelling a secret deal… pic.twitter.com/y5A87E6dfi
— Narendra Modi (@narendramodi) May 8, 2024
Modi Accusing Ambani and Adani.. 🤣 pic.twitter.com/314sAsCsUw
— Narundar (@NarundarM) May 8, 2024
ಈ ಕುರಿತು ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ವರದಿಯೊಂದು ಕಂಡುಬಂದಿದೆ. ಅದರಲ್ಲಿ “ತಕ್ಷಣವೇ ಮೌನವಾಗಿಲ್ಲ. ಕಳೆದ ಒಂದು ವಾರದ ಅವಧಿಯ ರಾಹುಲ್ ಗಾಂಧಿಯ ಬಹುತೇಕ ಎಲ್ಲಾ ಭಾಷಣಗಳಲ್ಲಿ ಅಂಬಾನಿ ಮತ್ತು ಅದಾನಿಯನ್ನು ಟೀಕಿಸಲಾಗಿದೆ” ಎಂದು ಬರೆದಿದೆ.
ಮೇ 7 – ಜಾರ್ಖಂಡ್
ಮೇ 7 ರಂದು ಜಾರ್ಖಂಡ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಬಿಜೆಪಿಯವರು ನಿಮ್ಮನ್ನು ವನವಾಸಿ ಎಂದು ಕರೆಯುತ್ತಾರೆ. ಅದೇ ಸಮಯದಲ್ಲಿ ಅರಣ್ಯ ಭೂಮಿಯನ್ನು ಅದಾನಿಗೆ ಕೊಡುತ್ತಾರೆ. ಮೋದಿಯವರಿಗೆ ಅದಾನಿ, ಅಂಬಾನಿ ಮುಂತಾದ 22-25 ಸ್ನೇಹಿತರಿದ್ದು ಅವರಿಗಾಗಿ ದಿನದ 24 ಗಂಟೆ ಕೆಲಸ ಮಾಡುತ್ತಾರೆ. ಭೂಮಿ ಅವರಿಗಾಗಿ, ಕಾಡು ಅವರಿಗಾಗಿ, ಮಾಧ್ಯಮ ಅವರದು, ಮೂಲಸೌಕರ್ಯ ಅವರದು, ಫ್ಲೈಓವರ್‌ಗಳು ಅವರದು, ಪೆಟ್ರೋಲ್ ಅವರದು… ಹೀಗೆ ಎಲ್ಲವೂ ಅವರಿಗಾಗಿಯೇ. ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯದವರು ಸಾರ್ವಜನಿಕ ವಲಯದಲ್ಲಿ ಮೀಸಲಾತಿ ಪಡೆಯುತ್ತಿದ್ದರು… ಈಗ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ… ಎಲ್ಲವನ್ನೂ (ಅದಾನಿಗೆ) ಕೊಡುತ್ತಾರೆ… ಮಾಧ್ಯಮದವರು ಇಲ್ಲಿದ್ದಾರೆ… ಆದರೆ ಅವರು ನಿಮ್ಮ ಪರವಲ್ಲ… ಮಾಧ್ಯಮದವರು ಕೋಟ್ಯಾಧಿಪತಿಗಳ ಪರ ಕೆಲಸ ಮಾಡುತ್ತಾರೆ … ಅವರು ಅಂಬಾನಿಯವರ ಮದುವೆಯನ್ನು 24 ಗಂಟೆಗಳ ಕಾಲ ತೋರಿಸುತ್ತಾರೆ” ಎಂದು ಟೀಕಿಸಿದ್ದಾರೆ.
ಮೇ 6 – ಮಧ್ಯ ಪ್ರದೇಶ
ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಮೇ 6 ರಂದು ಚುನಾವಣಾ ಭಾಷಣ ಮಾಡಿದ ರಾಹುಲ್ ಗಾಂಧಿ, “ಇಡೀ ಸಾರ್ವಜನಿಕ ವಲಯ ಕಣ್ಮರೆಯಾಗುತ್ತದೆ ಮತ್ತು ದೇಶವನ್ನು 22-25 ಜನರು ಆಳುತ್ತಾರೆ. ಈ ಜನರು ಯಾರು? ಅವರು ಭಾರತದ ಕೋಟ್ಯಾಧಿಪತಿಗಳು. ಅದಾನಿ ಅವರಂತಹ ಜನರು ನಿಮ್ಮ ನೆಲ, ಕಾಡು ಮತ್ತು ನೀರಿನ ಮೇಲೆ ಕಣ್ಣಿಟ್ಟಿದ್ದಾರೆ. ಈ ವಸ್ತುಗಳನ್ನು ನಿಮ್ಮಿಂದ ಕಿತ್ತು ಅವರಿಗೆ ಒಪ್ಪಿಸಬೇಕೆಂದು ಅವರು ಬಯಸುತ್ತಾರೆ. ಅವರು ನರೇಂದ್ರ ಮೋದಿಯವರ ವಿಶೇಷ ಸ್ನೇಹಿತರು. ಅದಾನಿ ಹೆಸರು ಕೇಳಿದ್ದೀರಾ? ಪ್ರಧಾನಿಯವರು ಅದಾನಿಗೆ ನಿಮ್ಮ ಭೂಮಿ, ನೀರು ಮತ್ತು ಅರಣ್ಯವನ್ನು ನೀಡಲು ಬಯಸುತ್ತಾರೆ… ಎಲ್ಲಾ ವಿಮಾನ ನಿಲ್ದಾಣಗಳು, ವಿದ್ಯುತ್ ಕೇಂದ್ರಗಳು, ಬಂದರುಗಳು, ಮೂಲಸೌಕರ್ಯಗಳನ್ನು ಈ 22-25 ಜನರಿಗೆ ಪ್ರಧಾನಿ ಮೋದಿ ನೀಡಿದ್ದಾರೆ. ಅವರು ನಿಮ್ಮ ಸಾಲವನ್ನು ಎಂದಿಗೂ ಮನ್ನಾ ಮಾಡಿಲ್ಲ, ಆದರೆ ಅವರು 22 ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಅದಾನಿಯವರಂತಹವರಿಗೆ 16 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಲಾಗಿದೆ ಎಂದು ಊಹಿಸಿಕೊಳ್ಳಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮೇ 5 – ತೆಲಂಗಾಣ
ಮೇ 5ರಂದು ತೆಲಂಗಾಣದ ನಾಗಕರ್ನೂಲ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ “ಬಿಜೆಪಿ 2-3 ಶೇಕಡಾ ಪಕ್ಷವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಮಾಡಿದ್ದೆಲ್ಲ 22 ಜನರಿಗಾಗಿ. ಅದಾನಿಗೆ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ದೇಶದ ವಿಮಾನ ನಿಲ್ದಾಣಗಳು, ಬಂದರುಗಳು, ಮೂಲಸೌಕರ್ಯಗಳು, ರಕ್ಷಣಾ ಉದ್ಯಮಗಳು… ಎಲ್ಲವನ್ನೂ ಒಬ್ಬ ವ್ಯಕ್ತಿಗೆ ಹಸ್ತಾಂತರಿಸಿದರು” ಎಂದು ಆರೋಪಿಸಿದ್ದರು.
ಮೇ 4 – ದೆಹಲಿ
“ಮಾಧ್ಯಮಗಳಲ್ಲಿ ದಲಿತರು, ಆದಿವಾಸಿಗಳು, ಬಡವರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಿಲ್ಲ….. ಕಾರ್ಪೊರೇಟ್ ಇಂಡಿಯಾವನ್ನು ನೋಡಿ. ಅತಿ ದೊಡ್ಡ 200 ಕಂಪನಿಗಳಲ್ಲಿ ನೀವು ಎಸ್‌ಸಿ, ಎಸ್‌ಟಿ, ಹಿಂದುಳಿದ ಸಮುದಾಯಗಳು ಮತ್ತು ಬಡವರು ಯಾರನ್ನೂ ಕಾಣುವುದಿಲ್ಲ… ನಿಮ್ಮ ಅಥವಾ ಯಾವುದೇ ಸಂಬಂಧಿಕರ ಸಾಲವನ್ನು ಮನ್ನಾ ಮಾಡಲಾಗಿದೆಯೇ? ಅದಾನಿ ಜಿ ಮತ್ತು 22 ಬಿಲಿಯನೇರ್‌ಗಳ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಇದು 24 ವರ್ಷಗಳ MGNREGA ಗಾಗಿ ಬಳಸಬಹುದಾದ ಹಣ” ಎಂದು ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಮೇ 2 – ಕರ್ನಾಟಕ
ಮೇ 2 ರಂದು ಕರ್ನಾಟಕದ ಶಿವಮೊಗ್ಗದಲ್ಲಿ ಚುನಾವಣಾ ಭಾಷಣ ಮಾಡಿದ ರಾಹುಲ್ ಗಾಂಧಿ, ‘‘ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ 22 ಮಂದಿಗೆ ದುಡಿದಿದ್ದಾರೆ. ಅವರು ಭಾರತದ ಸಂಪತ್ತನ್ನು 22 ಜನರ ಜೇಬಿನಲ್ಲಿ ಇಟ್ಟರು… ಅದಾನಿ, ಅಂಬಾನಿ ಮತ್ತು ಅಂತಹವರ ಜೇಬಿನಲ್ಲಿ… ಆದರೆ ನಾವು ಕೋಟಿಗಟ್ಟಲೆ ಲಕ್ಷಪತಿಗಳನ್ನು ಮಾಡಲಿದ್ದೇವೆ” ಎಂದು ಭರವಸೆ ನೀಡಿದ್ದರು.
ಇದಿಷ್ಟು ರಾಹುಲ್ ಗಾಂಧಿಯವರು ಕಳೆದ ಒಂದು ವಾರದಲ್ಲಿ ಅಂಬಾನಿ-ಅದಾನಿ ವಿರುದ್ಧ ಮಾಡಿರುವ ಭಾಷಣಗಳಾಗಿವೆ. ಅಲ್ಲಿಗೆ ನರೇಂದ್ರ ಮೋದಿಯವರು ತಕ್ಷಣವೇ ಅಂಬಾನಿ-ಅದಾನಿ ಬಗ್ಗೆ ಮಾತನಾಡುವುದನ್ನು ಕಾಂಗ್ರೆಸ್ ನಿಲ್ಲಿಸಿದೆ ಎಂಬುದು ಸುಳ್ಳಾಗಿದೆ.
ಇನ್ನು ನರೇಂದ್ರ ಮೋದಿಯವರ ಆರೋಪಕ್ಕೆ ಉತ್ತರಿಸಿ ವಿಡಿಯೋ ಬಿಡುಗಡೆ ಮಾಡಿರುವ ರಾಹುಲ್, “ನಮಸ್ಕಾರ ಮೋದಿಜಿಯವರೇ. ನೀವು ಸ್ವಲ್ಪ ಹೆದರಿದಂತಿದೆ. ಸಾಮಾನ್ಯವಾಗಿ ನೀವು ಮುಚ್ಚಿದ ಕೋಣೆಯೊಳಗೆ ಅದಾನಿ-ಅಂಬಾನಿಯವರ ಬಗ್ಗೆ ಮಾತನಾಡುತ್ತೀರಿ. ಆದರೆ ಇದೀಗ ಮೊದಲ ಬಾರಿ ಸಾರ್ವಜನಿಕವಾಗಿ ಅದಾನಿ-ಅಂಬಾನಿ ಎಂದಿದ್ದೀರಿ. ಅವರು ಟೆಂಪೋದಲ್ಲಿ ಹಣ ತಂದು ಕೊಡುತ್ತಿದ್ದಾರೆಂದೂ ನಿಮಗೆ ಗೊತ್ತಿದೆ. ಇದು ನಿಮ್ಮ ಸ್ವಂತ ಅನುಭವವೇ? ನೀವು ಸಿಬಿಐ, ಇಡಿಯನ್ನು ಇವರಲ್ಲಿಗೆ ಕಳುಹಿಸಿಕೊಟ್ಟು ತನಿಖೆ ಮಾಡಿ. ಹೆದರದೇ, ಆದಷ್ಟಿ ಬೇಗ ತನಿಖೆ ನಡೆಸಿ.
ನಾನು ದೇಶದ ಜನತೆಗೆ ಮತ್ತೊಮ್ಮೆ ಹೇಳುವುದೇನೆಂದರೆ, ಮೋದಿಜಿಯವರು ಅದಾನಿ-ಅಂಬಾನಿಯವರಿಗೆ ಎಷ್ಟೊಂದು ಹಣ ಕೊಟ್ಟಿದ್ದಾರೆ, ಅಷ್ಟೊಂದು ಹಣವನ್ನು ನಾವು ದೇಶದ ಬಡ ಜನತೆಗೆ ಕೊಡಲಿದ್ದೇವೆ. ಮಹಾಲಕ್ಷ್ಮಿ ಯೋಜನೆ, ಮೊದಲ ನೌಕರಿ ಖಾತರಿ ಯೋಜನೆಯಿಂದ ದೇಶದ ಕೋಟ್ಯಾಂತರ ಜನರನ್ನು ಲಕ್ಷಾದಿಪತಿ ಮಾಡಲಿದ್ದೇವೆ. ಇವರು ಇಪ್ಪತ್ತೆರಡು ಉದ್ಯೋಗಪತಿಗಳನ್ನು ಬಿಲಿಯನೇರ್ ಗಳನ್ನಾಗಿ ಮಾಡಿದ್ದಾರೆ. ನಾವು ಕೋಟ್ಯಾಂತರ ಜನರನ್ನು ಲಕ್ಷಾದಿಪತಿಗಳನ್ನಾಗಿ ಮಾಡಲಿದ್ದೇವೆ” ಎಂದು ತಿಳಿಸಿದ್ದಾರೆ.
भाजपा के भ्रष्टाचार के टेम्पो का ‘ड्राइवर’ और ‘खलासी’ कौन है, देश जानता है। pic.twitter.com/62N5IkhHWk
— Rahul Gandhi (@RahulGandhi) May 8, 2024
ಒಟ್ಟಾರೆಯಾಗಿ ಹೇಳುವುದಾದರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕುರಿತ ನರೇಂದ್ರ ಮೋದಿಯವರ ಆರೋಪ ಸಂಪೂರ್ಣ ಸುಳ್ಳಾಗಿದೆ.
ಇದನ್ನೂ ಓದಿ; Fact Check | ಕಾಂಗ್ರೆಸ್ ಮುಸಲ್ಮಾನರ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿಲ್ಲ ; ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ