Fact Check: ಸೋನಿಯಾ ಗಾಂಧಿಯವರು 28000 ಸಾವಿರ ಹೋಟೆಲ್ ಹೊಂದಿದ್ದಾರೆ ಎಂಬುದು ಸಂಪೂರ್ಣ ಸುಳ್ಳು

ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಆಸ್ತಿ ಕುರಿತಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. “ಇಟಲಿಯ ಟಾಪ್ 1000 ಹೋಟೆಲ್ ಗಳಲ್ಲಿ 753 ಹೋಟೆಲ್ ಯಜಮಾನಿ ಸೋನಿಯಾ ಗಾಂಧಿ ಒಂದು ಹೋಟೆಲ್ ನ ಬೆಲೆ 982ಸಾವಿರ ಕೋಟಿ. ಪ್ರಪಂಚದಲ್ಲಿ ಈ ತರಹದ 28000 ಸಾವಿರ ಹೋಟೆಲ್ ಇವರು ಹೊಂದಿದ್ದಾರೆ. ಪ್ರಾಮಾಣಿಕ ಪ್ರಧಾನಿಯನ್ನು ಕಳ್ಳ ಎಂದು ಹೇಳುವ ಚಮಚಾಗಳೇ ನಿಮ್ಮ ರಾಜಮಾತೆಯನ್ನು ಒಮ್ಮೆ ಕೇಳಿ ಇಷ್ಟೊಂದು ಹಣ ಇವರ ಅಪ್ಪ ವರದಕ್ಷಿಣೆ ಕೊಟ್ಟಿದಾರೆ ಅಂತ.” ಎಂದು ಪ್ರತಿಪಾದಿಸಿದ ಪೋಸ್ಟರ್ ಒಂದನ್ನು ಅನೇಕರು ಹಂಚಿಕೊಂಡಿದ್ದಾರೆ. ಹಾಗಾದರೆ ಈ ವೈರಲ್ ಸಂದೇಶದಲ್ಲಿರುವಂತೆ ಸೋನಿಯಾ ಗಾಂಧಿ 28 ಸಾವಿರ ಹೋಟೆಲ್‌ಗಳ ಒಡತಿಯೇ ಎಂದು ಈ ಲೇಖನದಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: ಈ ಕುರಿತಂತೆ ಹುಡುಕಿದಾಗ ಇಟಲಿಯಲ್ಲಿ ಸೋನಿಯಾ ಗಾಂಧಿಯವರ ಮಾಲಿಕತ್ವದ ಯಾವುದೇ ಹೋಟೆಲ್ ಇರುವುದು ಕಂಡು ಬಂದಿಲ್ಲ. ಈ ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಸಂಪತ್ತನ್ನು ಘೋಷಣೆ ಮಾಡಿದ್ದಾರೆ(Wealth Affidavit). ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಸೋನಿಯಾ ಗಾಂಧಿ ಅವರು ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 12. 53 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇಟಲಿಯಲ್ಲಿ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯ ಮೌಲ್ಯ 26.83 ಲಕ್ಷ ರೂ. ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಬಳಿ 90,000 ರೂಪಾಯಿ ನಗದು ಇದ್ದರೆ, ಕಾಂಗ್ರೆಸ್ ನಾಯಕಿಯ ಒಟ್ಟು ಆಸ್ತಿ ಮೌಲ್ಯ 12,53,76,822 (12.53 ಕೋಟಿ ರೂ.) ಎಂದು ಅವರ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಒಟ್ಟು ಸಂಪತ್ತು ವರ್ಷಗಳಲ್ಲಿ ಕ್ರಮೇಣ ಹೆಚ್ಚಳವನ್ನು ತೋರಿಸಲಾಗಿದೆ.

2014ರಲ್ಲಿ ಸೋನಿಯಾ ಗಾಂಧಿ ಅವರ ಸಂಪತ್ತು 9.28 ಕೋಟಿ ಎಂದು ತಿಳಿಸಲಾಗಿತ್ತು. ಅದು 2019 ರಲ್ಲಿ 11.82 ಕೋಟಿಗೆ ಏರಿತು ಮತ್ತು 2024 ರಲ್ಲಿ 12.53 ಕೋಟಿಗೆ ಹೆಚ್ಚಳವಾಯಿತು. 2014 ರಿಂದ 2019 ರವರೆಗೆ ಸರಿಸುಮಾರು 27.59% ರಷ್ಟು ಮತ್ತು 2019ರಿಂದ 2024ರವರೆಗೆ ಶೇ.5.89ರಷ್ಟು ಹೆಚ್ಚಳವಾಗಿದೆ. ಆದಾಗ್ಯೂ, ಅವರ ಸ್ವತ್ತುಗಳು 2009 ಮತ್ತು 2014 ರ ನಡುವೆ ಗಮನಾರ್ಹ ಜಿಗಿತವನ್ನು ಕಂಡಿವೆ.

6,38,11,415 ರೂ. ಮೌಲ್ಯದ ಚರ ಆಸ್ತಿಗಳು (6.38 ಕೋಟಿ ರೂ.) ಆಭರಣಗಳು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಯಧನ, ಹೂಡಿಕೆಗಳು, ಬಾಂಡ್‌ಗಳು, ಬ್ಯಾಂಕ್ ಠೇವಣಿಗಳು ಮತ್ತು ಕೈಯಲ್ಲಿ ನಗದು ಮುಂತಾದ ಆಸ್ತಿಗಳನ್ನು ಒಳಗೊಂಡಿದೆ. 1.07 ಕೋಟಿ ರೂ. ಮೌಲ್ಯ ಆಭರಣಗಳಿವೆ. ಇದರಲ್ಲಿ 1.3 ಕೆ.ಜಿ ಗೋಲ್ಡ್(49.95 ಲಕ್ಷ ರೂ.) ಮತ್ತು 88 ಕೆ.ಜಿ ಬೆಳ್ಳಿ(57.2 ಲಕ್ಷ ರೂ.) ಆಭರಣಗಳಿವೆ.

ಸಂಸದರ ವೇತನ, ರಾಯಲ್ಟಿ ಆದಾಯ, ಬ್ಯಾಂಕ್‌ಗಳಿಂದ ಬಡ್ಡಿ, ಬಾಂಡ್‌ಗಳು, ಡಿವಿಡೆಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಬಂಡವಾಳ ಲಾಭಗಳು ಸೋನಿಯಾ ಗಾಂಧಿ ಅವರ ಆದಾಯದ ಮಾರ್ಗಗಳಾಗಿವೆ. ಶೈಕ್ಷಣಿಕವಾಗಿ, ಸೋನಿಯಾ ಗಾಂಧಿ ಅವರು 1964 ರಲ್ಲಿ ಸಿಯೆನಾದಲ್ಲಿ ಇಸ್ಟಿಟುಟೊ ಸಾಂಟಾ ತೆರೇಸಾದಿಂದ ವಿದೇಶಿ ಭಾಷೆಗಳಲ್ಲಿ (ಇಂಗ್ಲಿಷ್ ಮತ್ತು ಫ್ರೆಂಚ್) ಮೂರು ವರ್ಷಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದರು ಎಂದು ಘೋಷಿಸಿದ್ದಾರೆ.

ಸೋನಿಯಾ ಗಾಂಧಿಯವರ ಆಸ್ತಿಗೆ ಸಂಬಂಧಪಟ್ಟಂತೆ ದೇಶದ ಅನೇಕ ಮಾಧ್ಯಮಗಳು ವರದಿ ಮಾಡಿದ್ದು, ವರದಿಗಳಲ್ಲಿ ಎಲ್ಲಿಯೂ ಸೋನಿಯಾ ಗಾಂಧಿಯವರು ಹೋಟೇಲ್ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಉಲ್ಲೇಖಿಸಿಲ್ಲ. ಮತ್ತು ಹಿಂದುಸ್ತಾನ್ ಟೈಮ್ಸ್‌, ದ ಎಕನಾಮಿಕ್ ಟೈಮ್ಸ್, ಮತ್ತು ಇಂಡಿಯಾ ಟುಡೆ ಅವರ ಒಟ್ಟು ಆಸ್ತಿ ಮೊತ್ತ 12 ಕೋಟಿ ಎಂದೇ ಉಲ್ಲೇಖಿಸಿವೆ.

ಆದ್ದರಿಂದ “ಇಟಲಿಯ ಟಾಪ್ 1000 ಹೋಟೆಲ್ ಗಳಲ್ಲಿ 753 ಹೋಟೆಲ್ ಯಜಮಾನಿ ಸೋನಿಯಾ ಗಾಂಧಿ, ಪ್ರಪಂಚದಲ್ಲಿ ಈ ತರಹದ 28000 ಸಾವಿರ ಹೋಟೆಲ್ ಇವರು ಹೊಂದಿದ್ದಾರೆ” ಎಂಬ ಆರೋಪಕ್ಕೆ ಯಾವುದೇ ತರ್ಕವಿಲ್ಲ. ಸೋನಿಯಾ ಗಾಂಧಿಯವರ ಕುರಿತು ದ್ವೇಷಕಾರಿಕೊಳ್ಳಲು ಈ ರೀತಿಯ ಸುದ್ದಿಯನ್ನು ಹರಿಬಿಡಲಾಗಿದೆ ಅಷ್ಟೇ.


ಇದನ್ನು ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಅತಿಥಿ ಉಪನ್ಯಾಸಕಿ ಸಾವಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ


ವಿಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *