Fact Check: 2018ರಲ್ಲಿ ಸಿದ್ದರಾಮಯ್ಯನವರು 8 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿದ್ದಾರೆ ಎಂಬುದು ಸುಳ್ಳು

ಸಿದ್ದರಾಮಯ್ಯ

ಕಳೆದ ಫೆಬ್ರವರಿ ತಿಂಗಳಲ್ಲಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರ ಕಾನೂನು ಹೊರಡಿಸಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈಗ ಇದನ್ನೇ ಹಿನ್ನಲೆಯಾಗಿಟ್ಟುಕೊಂಡು “ಇನ್ಮುಂದೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಇಲ್ವಂತೆ ! ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ನೀವು ಕನ್ನಡ ರಾಮಯ್ಯ ಅಲ್ಲ ಕನ್ನಡ ದ್ರೋಹಿ ರಾಮಯ್ಯ” ಎಂದು ಆರೋಪಿಸಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಇಲ್ಲ, ಕನ್ನಡ ಭಾವುಟವನ್ನು ರಾಜ್ಯದ ಅಧಿಕೃತ ಭಾವುಟವನ್ನಾಗಿ ಮಾಡುತ್ತೇವೆ ಎಂದಿದ್ದರು ಅದನ್ನು ಸಹ ಮಾಡಿಲ್ಲ, ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಡಾ. ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಹೇಳಿ ಅದನ್ನು ಸಹ ಮಾಡಿಲ್ಲ, ಕನ್ನಡಕ್ಕೆ ಸಿದ್ದರಾಮಯ್ಯನವರ ಕೊಡುಗೆ ಎಂದರೆ ಅದು ಅವರ ಆಡಳಿತಾವಧಿಯಲ್ಲಿ 2018 ರಲ್ಲಿ 8,658 ಸರ್ಕಾರಿ ಶಾಲೆಗಳನ್ನು ಮುಚ್ಚಿಸಿದ್ದಾರೆ.” ಎಂದು ಆರೋಪಿಸಲಾಗಿದೆ. ಇದನ್ನು ನನ್ ಮಿನಿ ರೇಡಿಯೋ ಎಂಬ ಸಾಮಾಜಿಕ ಜಾಲತಾಣದ ಖಾತೆಯಿಂದ ಹರೀಶ್ ಎಂಬುವವರು ಫೆಬ್ರವರಿ ತಿಂಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇಂದಿಗೂ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ಈ ಆರೋಪಗಳು ನಿಜವೇ ನೋಡೋಣ ಬನ್ನಿ. 

ಫ್ಯಾಕ್ಟ್‌ಚೆಕ್: ಫೆಬ್ರವರಿ 16 ರಂದು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ನಂತರ ಖಾಸಗಿ ಶಾಲೆಗಳಿಗೆ ಈ ಕಾನೂನು ಅನ್ವಯಿಸುವುದಿಲ್ಲ ಎಂದು ತೀವ್ರ ಚರ್ಚೆಗೆ ಮತ್ತು ಟೀಕೆಗೆ ಒಳಗಾದ ನಂತರ ಎಚ್ಚೆತ್ತುಕೊಂಡ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್​ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

“ಪ್ರಿಂಟ್ ಮಿಸ್ಟೇಕ್ ಆಗಿದೆ. ಆದೇಶ ಮಾಡುವಾಗ ಎಲ್ಲಾ ಶಾಲೆ ಎಂದು ಬದಲಾಗಲಿದೆ” ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮಗೆ ಎಲ್ಲಾ ಶಾಲೆಗಳು ಒಂದೆ. ಸಣ್ಣ ತಪ್ಪಿನಿಂದ ಈ ಗೊಂದಲ ಆಗಿದೆ. ಎಲ್ಲವನ್ನೂ ಸರಿಪಡಿಸಿ ಆದೇಶ ಹೊರಡಿಸುತ್ತೇವೆ. ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ. ಈ ಬಗ್ಗೆ ನಾವು ಬಹಳ ಸ್ಪಷ್ಟವಾಗಿದ್ದೇವೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆಯಾಗಿದೆ” ಎಂದು ತಿಳಿಸಿದ್ದಾರೆ.

ಸಧ್ಯ ಈಗ ಖಾಸಗಿ ಶಾಲೆಗಳನ್ನು ಒಳಗೊಂಡಂತೆ, “ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು” ಎಂದು ತಿದ್ದಿ ಓದಿಕೊಳ್ಳತಕ್ಕದ್ದು” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ ಪತ್ರದಲ್ಲಿ ತಿಳಿಸಿದೆ.

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ಕುರಿತು:

“ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ದೊರಕಿಸಲು ಸಮಿತಿ ರಚಿಸಿ ಬಾವುಟಕ್ಕೆ ಅನುಮೋದನೆ ನೀಡಿ ಕೇಂದ್ರದ ಮಾನ್ಯತೆಗೆ ಕಳುಹಿಸಿತ್ತು. ಆದರೆ ಕೇಂದ್ರ ಬಿಜೆಪಿ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿ ನಮ್ಮ ಬಾವುಟಕ್ಕೆ ಅನುಮೋದನೆ ನೀಡದೆ ಕನ್ನಡಿಗರ ಭಾವನೆಗಳಿಗೆ ದಕ್ಕೆ ತಂದಿದೆ.” ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೇಂದ್ರ ಸರ್ಕಾರವನ್ನು ಆರೋಪಿಸಿದೆ. ಕನ್ನಡ ಬಾವುಟಕ್ಕೆ ಮಾನ್ಯತೆ ದೊರಕಬೇಕಾದರೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಿರುತ್ತದೆ. ಆದರೆ ಕೇಂದ್ರ  ಸರ್ಕಾರ ಕನ್ನಡ ಬಾವುಟಕ್ಕೆ ಅನುಮೋದನೆಯನ್ನು ನೀಡಿಲ್ಲ. 

2018 ರಲ್ಲಿ 8658 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆಯೇ?

ಕರ್ನಾಟಕ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 2016-17 ರಲ್ಲಿ, ಕರ್ನಾಟಕದಲ್ಲಿ 668 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು (LPS) ಕಡಿಮೆ ವಿದ್ಯಾರ್ಥಿಗಳ ದಾಖಲಾತಿಯಿಂದಾಗಿ ಮುಚ್ಚಲಾಗಿದೆ. ಶಾಲೆಗಳನ್ನು ಮುಚ್ಚುವ ಈ ಪ್ರವೃತ್ತಿ ಕರ್ನಾಟಕಕ್ಕೆ ಮಾತ್ರವೇ ಅಲ್ಲ; ಭಾರತದಾದ್ಯಂತ, ವರ್ಷಗಳಿಂದ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಕ್ರಮೇಣ ಕುಸಿತ ಕಂಡುಬಂದಿದೆ. ಉದಾಹರಣೆಗೆ, 2005 ರಿಂದ ಶಿಕ್ಷಣಕ್ಕಾಗಿ ಜಿಲ್ಲಾ ಮಾಹಿತಿ ವ್ಯವಸ್ಥೆ (DISE) ದ ದತ್ತಾಂಶದ ಮೂಲಕ ಸರ್ಕಾರಿ ಶಾಲೆಗಳನ್ನು ಖಾಲಿ ಮಾಡುವುದು ಗೋಚರಿಸುತ್ತದೆ. 

ಸೆಂಟರ್ ಫಾರ್ ಸಿವಿಲ್ ಸೊಸೈಟಿ, ನವದೆಹಲಿ ನಡೆಸಿದ “ಭಾರತ ಶಾಲೆ ಮುಚ್ಚುವಿಕೆ ವರದಿ 2018″ ರ ಲ್ಲಿ 2009 ರಿಂದ 2018ರ ವೆರೆಗೆ ಕರ್ನಾಟಕದಲ್ಲಿ 65 ಸರ್ಕಾರಿ ಶಾಲೆಗಳು ಹಾಜಾರಾತಿ ಕಡಿಮೆ ಇರುವುದರಿಂದ ಮುಚ್ಚಲಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಸರೋಜಿನಿ ಮಹಿಷಿ ವರದಿ ಕುರಿತು:

ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುವ ಮತ್ತು ಕರ್ನಾಟಕದ ಸಾರ್ವಜನಿಕ ವಲಯ ಸಂಸ್ಥೆಗಳು, ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಗಳಲ್ಲಿ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯನ್ನು ಕನ್ನಡಿಗರಿಗೆ ಮಾತ್ರ ನೀಡಬೇಕೆಂದು ಶಿಫಾರಸ್ಸು ಮಾಡುವ ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಇನ್ನಾದರೂ ರಾಜ್ಯ ಸರ್ಕಾರ ಅನುಮೋದಿಸಬೇಕಿದೆ. ಈ ವರದಿಯನ್ನು ಸಲ್ಲಿಸಿ ದಶಕಗಳೇ ಕಳೆದಿದ್ದರೂ ಇದನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು 2020 ರಲ್ಲಿ ಪ್ರತಿಭಟನೆ ನಡೆಸಿದರು ಸಹ ಅಂದಿನ ಬಸವರಾಜ್ ಬೊಮ್ಮಾಯಿಯವರ ಸರ್ಕಾರ ಕಿವಿಗೊಡಲಿಲ್ಲ. ಕನ್ನಡ ರಾಮಯ್ಯ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಾದರೂ ಈ ವರದಿಯನ್ನು ಜಾರಿಗೊಳಿಸುವಂತೆ ಕನ್ನಡಿಗರು ಒತ್ತಾಯಿಸಬೇಕಿದೆ.

ಆದ್ದರಿಂದ ಸಧ್ಯ ವೈರಲ್ ವಿಡಿಯೊದಲ್ಲಿ ಪ್ರತಿಪಾದಿಸಿರುವಂತೆ 2018ರಲ್ಲಿ 8 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಎಂಬುದು ಸುಳ್ಳು.


ಇದನ್ನು ಓದಿ: ಕೆನಡಾದಲ್ಲಿ ಮೋದಿ ವಿರೋಧಿ ಮೆರವಣಿಗೆಯನ್ನು AAP ನಡೆಸಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ


ವಿಡಿಯೋ ನೋಡಿ: ನೋಯ್ಡಾ ನಗರ ಎಷ್ಟು ಅಭಿವೃದ್ಧಿಯಾಗಿದೆ ನೋಡಿ ಎಂದು ದುಬೈನ ಚಿತ್ರ ಹಂಚಿಕೊಳ್ಳಲಾಗುತ್ತಿದೆ | Noida


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *