Fact Check |POK ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿಲ್ಲ; ಮತ್ತೆ ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್

“ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತಾ ಅನ್ನೋ ಹಲವು ಪ್ರಶ್ನೆಗಳಿಗೆ ಕೆಲ ಸೂಚನೆಗಳು ಸಿಗುತ್ತಿದೆ. ಕಾರಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯರು ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೇ ಮೊದಲ ಭಾರಿಗೆ ಭಾರತದ ದ್ವಜ ಹಾರಾಡಿದೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋಗಳು ಭಾರಿ ವೈರಲ್ ಆಗಿದ್ದು, ಪಾಕಿಸ್ತಾನದ ಆತಂಕ ಹೆಚ್ಚಾಗಿದೆ.” ಎಂದು 11 ಮೇ 2024ರಂದು ಸುವರ್ಣ ನ್ಯೂಸ್ ತನ್ನ ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದೆ

ಸುವರ್ಣ ನ್ಯೂಸ್‌ ಪ್ರಕಟಿಸಿದ ವರದಿ
ಸುವರ್ಣ ನ್ಯೂಸ್‌ ಪ್ರಕಟಿಸಿದ ವರದಿ

ಈ ವರದಿಯಲ್ಲಿ ಪಾಕಿಸ್ತಾನದಲ್ಲಿ ಭಾರತದ ಧ್ವಜ ಪ್ರದರ್ಶಿಸಲಾಗಿದೆ ಎಂದು ಪ್ರತಿಪಾದಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಪಾಕಿಸ್ತಾನದಲ್ಲಿನ ಹಲವು ಸಮಸ್ಯೆಗಳು ಮತ್ತು ಆ ಸಮಸ್ಯೆಗಳ ವಿರುದ್ಧ ಅಲ್ಲಿನ ಜನರು ಪ್ರತಿಭಟಿಸುವ ರೀತಿಯನ್ನು ಅಲ್ಲಿನ ಸ್ಥಳೀಯ ವರದಿಗಾರರು ಮಾಧ್ಯಮಗಳು ನೀಡುವ ವರದಿಗಿಂತಲೂ ಅದ್ಭುತವಾಗಿ ಸುದ್ದಿಯನ್ನು ಪ್ರಕಟಿಸಿದ್ದಾರೆ. ಆದರೆ ಸುವರ್ಣ ನ್ಯೂಸ್ ವರದಿ ಮಾಡಿರುವ ಹಾಗೆ ನಿಜಕ್ಕೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಪ್ರದರ್ಶಿಸಲಾಗಿದೆಯೇ ಎಂಬುದನ್ನು ಈ ಅಂಕಣದಲ್ಲಿ ನೋಡೋಣ ಬನ್ನಿ.

ಫ್ಯಾಕ್ಟ್‌ಚೆಕ್

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಿದಾಗ ಇದೇ ರೀತಿಯ ಹಲವು ವೈರಲ್ ಪೋಸ್ಟ್‌ಗಳು ಕಂಡು ಬಂದಿದೆ. ಆದರೆ ಈ ಫೋಟೋದ ಮೂಲವನ್ನು ಹುಡುಕಿದಾಗ ಹಲವರು ಈ ಫೋಟೋಗೆ ಹೋಲಿಕೆ ಆಗುವ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದೇ ಮೂಲ ಫೋಟೋ ಎಂಬುದು ತಿಳಿದುಬಂದಿದೆ. ಇಲ್ಲಿ ಮೂಲ ಫೋಟೋವನ್ನು ತದ್ವಿರುದ್ಧವಾಗಿ ತಿರುಗಿಸಲಾಗಿದೆ ಅಥವಾ ಫ್ಲಿಪ್ ಮಾಡಿ ಎಡಿಟ್ ಮಾಡಲಾಗಿದೆ ಎಂಬುದು ಫೋಟೋ ಪರಿಶೀಲಿಸಿದ ನಂತರ ಸ್ಪಷ್ಟವಾಗಿದೆ.

ಮೂಲ ಫೋಟೋ
ಮೂಲ ಫೋಟೋ
ತಿರುಚಿರುವ ಫೋಟೋ
ತಿರುಚಿರುವ ಫೋಟೋ

ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಕುರಿತು ಹುಡುಕಿದಾಗ ಈ ಘಟನೆ 12 ಮೇ 2024 ರಂದು ಪಾಕಿಸ್ತಾನದ ಪುಂಚ್ ಜಿಲ್ಲೆ ಅಥವಾ ಪಿಓಕೆಯ ಪ್ರಮುಖ ನಗರವಾಗಿರುವ ರಾವಾಲ್‌ಕೋಟ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿರುವುದು ನಿಜ ಎಂಬುದು ತಿಳಿದುಬಂದಿದೆ. ಇನ್ನು ಯೂಟ್ಯಬ್‌ ಶಾರ್ಟ್ಸ್‌ ಒಂದರಲ್ಲೂ ಈ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋದಲ್ಲಿನ ದೃಶ್ಯಕ್ಕೂ ಫೋಟೋದಲ್ಲಿನ ದೃಶ್ಯಕ್ಕೂ ಸಾಮ್ಯತೆ ಇದ್ದರಿಂದ ಇದು ಒಂದೇ ಸಮಯದಲ್ಲಿ ತೆಗೆದ ವಿಡಿಯೋ ಮತ್ತು ಫೋಟೋ ಎಂಬುದು ತಿಳಿದುಬಂದಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಕಾರದ ವಿರುದ್ಧ ನಡೆದಿದ್ದ ಈ ಬೃಹತ್ ಪ್ರತಿಭಟನೆಯಲ್ಲಿ ಒಂದು ವೇಳೆ ಭಾರತದ ದ್ವಜ ಪ್ರದರ್ಶನವಾಗಿದ್ದು ನಿಜವೇ ಆಗಿದ್ದರೆ ಆ ಕುರಿತು ಪಾಕಿಸ್ತಾನದ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಪಾಕಿಸ್ತಾನದ ಮಾಧ್ಯಮಗಳು ಭಾರತದ ಧ್ವಜ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುದ್ದಿಗಳನ್ನು ಮಾಡಿಲ್ಲ.

ಈ ಕುರಿತು ಸಾಮ ಟಿವಿ ಎಂಬ ಪಾಕಿಸ್ತಾನದ ಸುದ್ದಿ ಮಾಧ್ಯಮದ ಎಕ್ಸಿಕ್ಯೂಟಿವ್ ಎಡಿಟರ್ ಆದ ಜಬ್ಬರ್ ಚೌದರಿ ಎಂಬುವವರು ಇಂಡಿಯಾ ಟುಡೆ ಸುದ್ದಿವಾಹಿನಿಗೆ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಪಾಕಿಸ್ತಾನದಲ್ಲಿ ಭಾರತದ ಧ್ವಜ ಕಂಡುಬಂದಿಲ್ಲ. ವೈರಲಾಗುತ್ತಿರುವ ಫೋಟೋ ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಕಂಡು ಬಂದಿದೆ ಎಂಬುದು ಸುಳ್ಳಾಗಿದೆ ಮತ್ತು ಇದೇ ಸುಳ್ಳು ಸುದ್ದಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಇನ್ನೂ ಹಲವು ಮಾಧ್ಯಮಗಳು ಹಂಚಿಕೊಂಡು ಜನರನ್ನು ದಾರಿ ತಪ್ಪಿಸಲು ಮುಂದಾಗಿದೆ.


ಇದನ್ನೂ ಓದಿ : Fact Check | ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿದ್ದರು ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check | ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *