Fact Check | ಮನೋಜ್‌ ತಿವಾರಿ ಸೋಲನ್ನು ಊಹಿಸುವ ಎಬಿಪಿ-ಸಿ ವೋಟರ್‌ ಗ್ರಾಫಿಕ್ಸ್‌ ಚಿತ್ರ ನಕಲಿ

ಪ್ರಸ್ತುತ ಬಿಜೆಪಿಯ ಸಂಸದರಾಗಿರುವ ಮನೋಜ್‌ ತಿವಾರಿಗೆ ಈಶಾನ್ಯ ದೆಹಲಿ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಮೀಕ್ಷೆಯ ವರದಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ದೇಶದ ಪ್ರಮುಖ ಸಮೀಕ್ಷಾ ವರದಿಯನ್ನು ಪ್ರಕಟಿಸುವ ಸಂಸ್ಥೆಯಾದ ಎಬಿಪಿ-ಸಿ ವೋಟರ್ ಸಮೀಕ್ಷೆಯ ವರದಿಯ ಗ್ರಾಫಿಕ್ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತದೆ.

ಈ ಸಮೀಕ್ಷೆ ವರದಿಯಲ್ಲಿ ಇಂಡಿಯಾ ಮೈತ್ರಿಕೂಟವು 258 ರಿಂದ 286 ಸ್ಥಾನಗಳನ್ನು ಗೆಲ್ಲಲಿದೆ. ಉತ್ತರ ಭಾರತದಲ್ಲಿ 70 ರಿಂದ 90 ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ 70 ರಿಂದ 80 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ 232 ರಿಂದ 253 ಸ್ಥಾನಗಳೊಂದಿಗೆ ಹಿಂದುಳಿಯಲಿದೆ. ಉತ್ತರ ಭಾರತದಲ್ಲಿ 90 ರಿಂದ 110 ಸೀಟುಗಳು ದಕ್ಷಿಣ ಭಾರತದಲ್ಲಿ 20 ರಿಂದ 30 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಈ ಗ್ರಾಫಿಕ್ಸ್‌ ಚಿತ್ರದಲ್ಲಿ ನೋಡಬಹುದಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಎಬಿಪಿ ಮತ್ತು ಸಿ ವೋಟರ್  ಸಮೀಕ್ಷೆಯ ಗ್ರಾಫಿಕ್ ಚಿತ್ರ ಎಂಬುದು ನಿಜವೇ ಎಂದು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಎಬಿಪಿ ಮತ್ತು ಸಿ ವೋಟರ್‌ ಸಮೀಕ್ಷೆಯ ಕುರಿತು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿತು. ಈ ವೇಳೆ 26 ಡಿಸೆಂಬರ್ 2023 ರಂದು ಎಬಿಪಿ – ಸಿ ವೋಟರ್ ನಡೆಸಿದ ಸಮೀಕ್ಷೆ ಒಂದು ಕಂಡುಬಂದಿದೆ. ಈ ವಿಡಿಯೋದಲ್ಲಿ 0.08 ಸೆಕೆಂಡ್ ನಲ್ಲಿ ವೈರಲ್ ಗ್ರಾಫಿಕ್ ಚಿತ್ರಕ್ಕೆ ಹೋಲಿಸಿರುವ ಗ್ರಾಫಿಕ್ ಚಿತ್ರ ಕಂಡು ಬಂದಿದೆ. ಆದರೆ ಇದರಲ್ಲಿನ ಅಂಕಿ ಅಂಶಕ್ಕೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಗ್ರಾಫಿಕ್ ಚಿತ್ರದಲ್ಲಿನ ಅಂಕಿ ಅಂಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಶಾನ್ಯ ದೆಹಲಿಯಲ್ಲಿ ಮನೋಜ್ ತಿವಾರಿ ಅವರು ಮುನ್ನಡೆ ಸಾಧಿಸಲಿದ್ದಾರೆ ಎಂದು ಈ ಅಂಕಿ ಅಂಶದಲ್ಲಿ ಉಲ್ಲೇಖಿಸಲಾಗಿದೆ.

ಈ ಗ್ರಾಫಿಕ್ ಚಿತ್ರದಲ್ಲಿ ಎನ್‌ಡಿಎ ಒಟ್ಟಾರೆಯಾಗಿ 295 ರಿಂದ 335 ಸ್ಥಾನಗಳನ್ನು ಗೆದ್ದುಕೊಳ್ಳುತ್ತದೆ. ಅವರ ಭದ್ರಕೋಟೆಯಾದ ಉತ್ತರ ಭಾರತದಲ್ಲಿ 150 ರಿಂದ 160 ಸ್ಥಾನಗಳನ್ನ ಎನ್‌ಡಿಎ ಮೈತ್ರಿಕೂಟ ಗೆಲ್ಲಲಿದೆ ಎಂದು ಈ ಗ್ರಾಫಿಕ್ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಇದೇ ಗ್ರಾಫಿಕ್ ಚಿತ್ರದಲ್ಲಿ ಇಂಡಿಯಾ ಒಕ್ಕೂಟ ಉತ್ತರ ಭಾರತದಲ್ಲಿ 20 ರಿಂದ 30 ಸ್ಥಾನಗಳನ್ನು ಗೆಲ್ಲಿದೆ ಒಟ್ಟಾರೆಯಾಗಿ 165 ರಿಂದ 205 ಸ್ಥಾನಗಳನ್ನು ಇಂಡಿಯಾ ಒಕ್ಕೂಟ ಗೆಲ್ಲುವ ಸಾಧ್ಯತೆ ಇದೆ ಇಂದು ಉಲ್ಲೇಖಿಸಲಾಗಿದೆ.

16 ಏಪ್ರಿಲ್ 2024 ರಂದು ಎಬಿಪಿ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ 373 ರಲ್ಲಿ ಎನ್‌ಡಿಎ ಗೆಲುವು ಸಾಧಿಸಲು ಸಜ್ಜಾಗಿದೆ. ಬಿಜೆಪಿ ಏಕಾಂಗಿಯಾಗಿ 323 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡಿದೆ. ಹಿಂದಿನ ಲೋಕಸಭೆ ಚುನಾವಣೆಗೆ ಹೋಲಿಸಿದರೆ 20 ಸ್ಥಾನಗಳು ಗಮನಾರ್ಹವಾಗಿ ಬಿಜೆಪಿಗೆ ಹೆಚ್ಚಳವಾಗಲಿದೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಎಬಿಪಿ ಮತ್ತು ಸಿ ವೋಟರ್‌ ಸಮೀಕ್ಷೆಗಳನ್ನು ಸಂಪೂರ್ಣವಾಗಿ ಗಮನಿಸಿದಾಗ, ಈ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ ಬರಲಿದೆ. ಮತ್ತು ಇಂಡಿಯಾ ಮೈತ್ರಿಕೂಟ ಸೋಲಲಿದೆ ಎಂಬ ರೀತಿಯ ವರದಿ ಕಂಡು ಬಂದಿದೆ. ಇನ್ನು ಈಶಾನ್ಯ ದೆಹಲಿಯಲ್ಲಿ ಮನೋಜ್‌ ತಿವಾರಿಗೆ ಮುನ್ನಡೆ ಲಭ್ಯವಾಗಲಿದ್ದು, ಅವರು ಗೆಲ್ಲುವ ಸಾಧ್ಯತೆ ಇದೆ ಎಂಬ ರೀತಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಮೂಲ ಗ್ರಾಫಿಕ್ ಚಿತ್ರಕ್ಕೂ ವೈರಲ್ ಗ್ರಾಫಿಕ್ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಮೂಲ ಗ್ರಾಫಿಕ್ ಚಿತ್ರದಲ್ಲಿನ ಅಂಕಿ ಅಂಶಗಳನ್ನು ಎಡಿಟ್ ಮಾಡಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ :  ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ


ಈ ವಿಡಿಯೋ ನೋಡಿ : ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *