ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ

Love Marriage

ಭಾರತದಲ್ಲಿ ಪ್ರೇಮ ವಿವಾಹಗಳು ಇಂದಿಗೂ ಸವಾಲಾಗಿಯೇ ಪರಿಣಮಿಸುತ್ತಿವೆ. ಜಾತಿಗ್ರಸ್ಥ ದೇಶವಾದ ನಮ್ಮಲ್ಲಿ ಅಂತರ್ಜಾತಿ ಅಥವಾ ಅಂತರ್ಧಮಿಯ ವಿವಾಹವಾದರೆಂತೂ ಮನೆಯಿಂದ ತಮ್ಮ ಕುಲದಿಂದ ಹೊರಗಿಡುವ, ಮರ್ಯಾದೆ ಹತ್ಯೆಯಂತಹ ಅಮಾನುಷ, ಅಮಾನವೀಯ ನಡೆಗಳು ಇಂದಿಗೂ ನಮ್ಮ ಸಮಾಜವನ್ನು ಬಾದಿಸುತ್ತಿವೆ. ಇಂದಿಗೂ ತಾವು ಪ್ರೀತಿಸಿದ ಯುವಕ/ಯುವತಿಯನ್ನು ಮದುವೆಯಾಗುವ ಸ್ವತಂತ್ರ್ಯ ನಮ್ಮ ದೇಶದ ಯುಪೀಳಿಗೆಗೆ ಕಷ್ಟಸಾಧ್ಯವಾಗಿದೆ. ಇತ್ತೀಚೆಗೆ ನಮ್ಮ ಸಂವಿಧಾನ ಕಲ್ಪಿಸಿರುವ ಸ್ವೆಷಲ್ ಮ್ಯಾರೆಜ್ ಆಕ್ಟ್‌ ಕೂಡ ಕೆಲವರ ಬಾಯಲ್ಲಿ “ಲವ್‌ ಜಿಹಾದ್” ಎಂದು ಕರೆಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರೇಮ ವಿವಾಹಗಳ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಈಗ, ಪ್ರೀತಿಸಿ ಮದುವೆಯಾಗುವವರು ಅಥವಾ ನ್ಯಾಯಾಲಯದ ಮದುವೆಗಳಿಗೆ ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿವೆ. 

ಫ್ಯಾಕ್ಟ್‌ಚೆಕ್: ಸುಪ್ರೀಂ ಕೋರ್ಟ್, ನ್ಯಾಯಾಲಯ ಅಥವಾ ಪ್ರೇಮ ವಿವಾಹಗಳಿಗೆ ಪೋಷಕರ ಅನುಮೋದನೆಯನ್ನು ಕಡ್ಡಾಯಗೊಳಿಸುವ ಯಾವುದೇ ತೀರ್ಪನ್ನು ನೀಡಿಲ್ಲ. ಭಾರತದ ಸಂವಿಧಾನದ 21 ನೇ ವಿಧಿಯ  ಅಡಿಯಲ್ಲಿ ವಿವಾಹದ ಸ್ವಾತಂತ್ರ್ಯ ಮೂಲಭೂತ ಹಕ್ಕಿನ ಅಡಿ ಬರುತ್ತದೆ. ಅದರ ಆಧಾರದ ಮೇಲೆ ನ್ಯಾಯಾಲಯ ಅಥವಾ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯ ಅಗತ್ಯವಿಲ್ಲ ಎಂದು ನ್ಯಾಯಾಲಯವು ನಿರಂತರವಾಗಿ ಅಭಿಪ್ರಾಯಪಟ್ಟಿದೆ.“ಇಬ್ಬರು ವಯಸ್ಕ ವ್ಯಕ್ತಿಗಳು ವೈವಾಹಿಕ ಜೀವನಕ್ಕೆ ಪ್ರವೇಶಿಸಲು ಒಪ್ಪಿದ ನಂತರ ಕುಟುಂಬ ಅಥವಾ ಸಮುದಾಯ ಅಥವಾ ಕುಲದ ಒಪ್ಪಿಗೆ ಅಗತ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನದ 21 ನೇ ವಿಧಿಯಡಿ ಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯವು 2018 ರಲ್ಲಿ ತೀರ್ಪು ನೀಡಿತು.2020 ರಲ್ಲಿ ಲಕ್ಷ್ಮಿಬಾಯಿ ಚಂದರಗಿ ವರ್ಸಸ್ ಕರ್ನಾಟಕ ರಾಜ್ಯ(Laxmibai Chandaragi B. vs. The State Of Karnataka) ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಮದುವೆಯಾಗುವ ಹಕ್ಕು ಅಥವಾ ಆಯ್ಕೆಯು “ವರ್ಗ ಗೌರವ” ಅಥವಾ “ಗುಂಪು ಚಿಂತನೆ” ಎಂಬ ಕಲ್ಪನೆಗಳಿಗೆ ಮಣಿಯಬಾರದು ಮತ್ತು ಇಬ್ಬರು ವಯಸ್ಕ ವ್ಯಕ್ತಿಗಳು ಮದುವೆಗೆ ಪ್ರವೇಶಿಸಲು ಒಪ್ಪಿದ ನಂತರ ಕುಟುಂಬ ಅಥವಾ ಸಮುದಾಯ ಅಥವಾ ಕುಲದ ಒಪ್ಪಿಗೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಆದ್ದರಿಂದ ಪ್ರೀತಿಸಿ ಮದುವೆಯಾಗುವವರು ಅಥವಾ ನ್ಯಾಯಾಲಯದ ಮದುವೆಗಳಿಗೆ ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ಹೇಳಿದೆ ಎಂಬುದು ಸುಳ್ಳಿನ ಸಂಗತಿಯಾಗಿದೆ.


ಇದನ್ನು ಓದಿ: Fact Check : ಭಾರತದ ಫುಟ್‌ಬಾಲ್‌ ತಂಡ 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ ಎಂಬ ಸುದ್ದಿ ಸುಳ್ಳು


ವಿಡಿಯೋ ನೋಡಿ: Fact Check: Tippu Sultan | ಟಿಪ್ಪುವಿನ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿಲ್ಲ | Tippu’s Sword |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *