Fact Check | ವಾಟ್ಸಾಪ್‌ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು..!

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ, ವಾಟ್ಸಾಪ್‌ ಸಂದೇಶಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಹಲವರು ಇದನ್ನೇ ನಿಜವಾದ ಮಾಹಿತಿ ಎಂದು ನಂಬಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಸಂದೇಶದಲ್ಲಿ ಈ ಕೆಳಗಿನ ವಿಚಾರಗಳನ್ನು ಪ್ರಮುಖ ಅಂಶಗಳಂತೆ ಉಲ್ಲೇಖ ಮಾಡಲಾಗುತ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಸುಳ್ಳು ಸಂದೇಶ
ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಸುಳ್ಳು ಸಂದೇಶ

“ಸಂದೇಶಗಳಲ್ಲಿ ಪ್ರಸ್ತಾಪಿಸಿರುವ ಹೊಸ ನಿಯಮಗಳು ಈ ಕೆಳಗಿನಂತಿವೆ:

01. ಎಲ್ಲಾ ಕರೆಗಳು ರೆಕಾರ್ಡಿಂಗ್ ಆಗುತ್ತಿವೆ.
02. ಎಲ್ಲಾ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗುತ್ತದೆ.
03. WhatsApp, Facebook, Twitter ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
04. ಗೊತ್ತಿಲ್ಲದ ಎಲ್ಲರಿಗೂ ತಿಳಿಸಿ.
05. ನಿಮ್ಮ ಸಾಧನಗಳು ಸಚಿವಾಲಯದ ವ್ಯವಸ್ಥೆಗೆ ಸಂಪರ್ಕಗೊಳ್ಳುತ್ತವೆ.
06. ಯಾರಿಗೂ ತಪ್ಪು ಸಂದೇಶಗಳನ್ನು ಕಳುಹಿಸದಂತೆ ಎಚ್ಚರಿಕೆ ವಹಿಸಿ.
07. ನಿಮ್ಮ ಮಕ್ಕಳು, ಸಹೋದರರು, ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರಿಗೆ ನೀವು ಎಚ್ಚರಿಕೆಯಿಂದ ಇರಬೇಕು ಮತ್ತು ಕಡಿಮೆ ಸಾಮಾಜಿಕ ತಾಣಗಳನ್ನು ಬಳಸಬೇಕೆಂದು ತಿಳಿಸಿ.
08. ರಾಜಕೀಯ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ಸರ್ಕಾರ ಅಥವಾ ಪ್ರಧಾನ ಮಂತ್ರಿಯ ಮುಂದೆ ನಿಮ್ಮ ಪೋಸ್ಟ್ ಅಥವಾ ವೀಡಿಯೊ… ಇತ್ಯಾದಿ. ಕಳುಹಿಸಬೇಡಿ
09. ಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಬಗ್ಗೆ ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧವಾಗಿದೆ … ಮತ್ತು ವಾರಂಟ್ ಇಲ್ಲದೆ ಬಂಧಿಸುವುದು.
10. ಪೋಲೀಸ್ ಅಧಿಸೂಚನೆ ಹೊರಡಿಸಿ… ಸೈಬರ್ ಕ್ರೈಮ್ ನಂತರ… ಕ್ರಮ ತೆಗೆದುಕೊಳ್ಳಿ, ಇದು ತುಂಬಾ ಗಂಭೀರವಾಗಿದೆ.
11. ದಯವಿಟ್ಟು ನೀವೆಲ್ಲರೂ, ಗುಂಪಿನ ಸದಸ್ಯರು, ನಿರ್ವಾಹಕರು,…ದಯವಿಟ್ಟು ಈ ವಿಷಯವನ್ನು ಪರಿಗಣಿಸಿ.
12. ತಪ್ಪು ಸಂದೇಶವನ್ನು ಕಳುಹಿಸದಂತೆ ಎಚ್ಚರವಹಿಸಿ ಮತ್ತು ಎಲ್ಲರಿಗೂ ತಿಳಿಸಿ ಮತ್ತು ಎಚ್ಚರದಿಂದಿರಿ.
13. ದಯವಿಟ್ಟು ಇದನ್ನು ಹಂಚಿಕೊಳ್ಳಿ.

ಗುಂಪುಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜಾಗರೂಕರಾಗಿರಬೇಕು. ಗುಂಪಿನ ಸದಸ್ಯರಿಗೆ WhatsApp ಕುರಿತು ಪ್ರಮುಖ ಮಾಹಿತಿ.

ವಾಟ್ಸ್ ಆಪ್ ನಲ್ಲಿ ಮಾಹಿತಿ
1. ✔= ಸಂದೇಶ ಕಳುಹಿಸಲಾಗಿದೆ
2. ✔✔ = ಸಂದೇಶವನ್ನು ತಲುಪಿಸಲಾಗಿದೆ
3. ಎರಡು ನೀಲಿ ✔✔ = ಸಂದೇಶ ಓದಿ
4. ಮೂರು ನೀಲಿ ✔✔✔= ಸರಕಾರದ ಸಂದೇಶವನ್ನು ಗಮನಿಸಿ
5. ಎರಡು ನೀಲಿ ಮತ್ತು ಒಂದು ಕೆಂಪು ✔✔✔= ಸರ್ಕಾರವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು
6. ಒಂದು ನೀಲಿ ಮತ್ತು ಎರಡು ಕೆಂಪು = ಸರ್ಕಾರವು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ
7. ಮೂರು ಕೆಂಪು ✔✔✔= ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಶೀಘ್ರದಲ್ಲೇ ನೀವು ನ್ಯಾಯಾಲಯದ ಸಮನ್ಸ್ ಪಡೆಯುತ್ತೀರಿ. ಜವಾಬ್ದಾರಿಯುತ ನಾಗರಿಕರಾಗಿರಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.”

ಹೀಗೆ ಯಾವುದೇ ಪುರಾವೆಗಳಿಲ್ಲದೇ ಈ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ವೈರಲ್‌ ಆಗುತ್ತಿರುವ ಈ ಸಂದೇಶ ನಿಜವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತ ಸಂದೇಶವನ್ನು ಗಮನಿಸಿದ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ, ಈ ವೈರಲ್‌ ಸುದ್ದಿಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನ ನಡೆಸಿದೆ. ಈ ವೇಳೆ 2020ರ ಏಪ್ರಿಲ್‌ 7ರಂದು ಪ್ರೆಸ್‌ ಇನ್‌ಫರ್‌ಮೇಷನ್‌ ಬ್ಯೂರೋ ಈ ಕುರಿತು ಫ್ಯಾಕ್ಟ್‌ಚೆಕ್‌ ಪ್ರಕಟಿಸಿದ್ದು, ಅದರಲ್ಲಿ ಈ ವೈರಲ್‌ ಸುದ್ದಿ ಸುಳ್ಳು ಎಂದು ಸ್ವತಃ ಪಿಐಬಿಯೇ ಉಲ್ಲೇಖ ಮಾಡಿದೆ.

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಾಟ್ಸ್‌ಆಪ್‌ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದಾಗFAQ ವಿಭಾಗದಲ್ಲಿ, ಒಂದೇ ಟಿಕ್ ಮಾರ್ಕ್ ಮತ್ತು ಎರಡು ಟಿಕ್ ಮಾರ್ಕ್‌ಗಳ ಬಗ್ಗೆ ಮಾಹಿತಿ ಇದೆ, ಆದರೆ ಅವರ ಪ್ಲಾಟ್‌ಫಾರ್ಮ್‌ನಲ್ಲಿ ಮೂರು ಟಿಕ್ ಮಾರ್ಕ್‌ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ವಾಟ್ಸಾಪ್ ನಲ್ಲಿ ಅಂತಹ ಯಾವುದೇ ಫೀಚರ್ ಇಲ್ಲ.

ಇನ್ನು ಸಂದೇಶಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿ ಇಲ್ಲಿಯ ಸಂದೇಶಗಳನ್ನು ಓದಲು ಸಾಧ್ಯವೇ ಎಂದು ಪರಿಶೀಲಿಸಲು ವೆಬ್‌ಸೈಟ್ ಸರ್ಚ್ ಮಾಡಿದಾಗ ಅಂತಹ ಸಾಧ್ಯತೆಗಳಿಲ್ಲ ಎಂದು ಉಲ್ಲೇಖಿಸಿದೆ. ವಾಟ್ಸಾಪ್‌ನಲ್ಲಿನ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲಾಗಿದೆ ಎಂದು ಕಂಡುಬಂದಿದೆ, ಆದ್ದರಿಂದ ಸರ್ಕಾರ ಮಾತ್ರವಲ್ಲ, ವಾಟ್‌ಆಪ್ ಕಂಪನಿಯ ಅಧಿಕಾರಿಗಳು ಸಹ ಅವುಗಳನ್ನು ಓದಲು ಸಾಧ್ಯವಾಗುವುದಿಲ್ಲ.

ಸರ್ಕಾರದ ಏಜೆನ್ಸಿಗಳೊಂದಿಗೆ ವಾಟ್ಸಾಪ್ ಯಾವ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಎಂದು ಅದರ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ, ಪ್ರೊಫೈಲ್ ಫೋಟೋ, ಗ್ರೂಪ್ ಇನ್ಫೋ ಮತ್ತು address book ವಿವರಗಳ ಮಾಹಿತಿಯನ್ನು ಮಾತ್ರ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗ ಹೇಳುವುದಾದರೆ, WhatsApp ನಲ್ಲಿ ಯಾವುದೇ ‘ಮೂರು ಟಿಕ್ ಮಾರ್ಕ್ಸ್’ ವೈಶಿಷ್ಟ್ಯವಿಲ್ಲ. ಅಲ್ಲದೆ, ಸರ್ಕಾರವು ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ. ಈ ಸಂದೇಶ 2019ರಿಮದಲೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಲಲ್ಲಿ ಹರಿದಾಡುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನೂ ಓದಿ : ಅರಬ್‌ ಹಿಂದೂ ದೇವಾಲಯದಲ್ಲಿ ಮುಸ್ಲಿಂ ಪುರುಷರಿಂದ ನೃತ್ಯ ಎಂಬುದು ಸುಳ್ಳು..! 


ಈ ವಿಡಿಯೋ ನೋಡಿ : ಅರಬ್‌ ಹಿಂದೂ ದೇವಾಲಯದಲ್ಲಿ ಮುಸ್ಲಿಂ ಪುರುಷರಿಂದ ನೃತ್ಯ ಎಂಬುದು ಸುಳ್ಳು..! 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *