Fact Check | ರಾಹುಲ್‌ ಗಾಂಧಿ ಹೇಳಿಕೆಯ ವಿಡಿಯೋವನ್ನು ತಿರುಚಿ ಸುಳ್ಳು ಮಾಹಿತಿ ಹಂಚಿಕೆ

” ಈ ವಿಡಿಯೋ ನೋಡಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಸಾಕಷ್ಟು ಮಂದಿ ಇದನ್ನೇ ನಿಜವಾದ ವಿಡಿಯೋ ಎಂದು ಶೇರ್‌ ಕೂಡ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೋಡಿದ ಬಹುತೇಕ ಮಂದಿ ಹೀಗೆ ಹಣವನ್ನು ಸುಮ್ಮನೆ ಕುಳಿತವರಿಗೆ ಕೊಟ್ಟು ದೇಶದವನ್ನು ಕಾಂಗ್ರೆಸ್‌ ದಿವಾಳಿ ಮಾಡಲು ಹೊರಟಿದೆ ಎಂದು ಹಂಚಿಕೊಂಡರೆ. ಇನ್ನೂ ಕೆಲವರು ರಾಹುಲ್‌ ಗಾಂಧಿ ಅವರನ್ನು ದಡ್ಡ ಎಂದು ಉಲ್ಲೇಖಿಸಿ ಇಂತವರಿಗೆ ಪ್ರಧಾನ ಮಂತ್ರಿ ಸ್ಥಾನ ಕೊಟ್ಟರೆ ದೇಶವನ್ನೇ ಮಾರಿ ಬಿಡುತ್ತಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಹಾಗಿದ್ದರೆ ರಾಹುಲ್‌ ಗಾಂಧಿ ನಿಜಕ್ಕೂ ಹೇಳಿದ್ದು ಏನು ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ..

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆಯನ್ನು ನಡೆಸಿದ್ದು, ಈ ಕುರಿತು ವೈರಲ್‌ ವಿಡಿಯೋದ ವಿವಿಧ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಈ ವಿಡಿಯೋ ರಾಹುಲ್‌ ಗಾಂಧಿ ಅವರ ಅಧಿಕೃತ ಯುಟ್ಯೂಬ್‌ ಚಾನಲ್‌ನಲ್ಲಿ ದಿನಾಂಕ 20 ಏಪ್ರಿಲ್‌ 2024ರಂದು ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ.

ಈ ವಿಡಿಯೋದ ಪೂರ್ಣ ಆವೃತ್ತಿಯಲ್ಲಿ ರಾಹುಲ್‌ ಗಾಂಧಿ ಅವರು ” ನರೇಂದ್ರ ಮೋದಿ ಅವರು ದೇಶವನ್ನು ನಿರುದ್ಯೋಗದ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ. ನೀವು ಯುವಜನರಲ್ಲಿ ಕೇಳಿ ನೀವು ಏನು ಮಾಡುತ್ತಿದ್ದೀರಾ ಎಂದು ಅದಕ್ಕೆ ಅವರ ಉತ್ತರ ಏನೂ ಇಲ್ಲ ಎಂದು ಇರುತ್ತದೆ. ಇಂದು ಭಾರತದಲ್ಲಿ ಯುವಕರು ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ನೋಡಿಕೊಂಡು ಬೀದಿಗಳಲ್ಲಿ ತಿರುಗುತ್ತಿದ್ದಾರೆ. ಏಕೆಂದರೆ ಅವರಿಗೆ ಉದ್ಯೋಗವಿಲ್ಲ ಎಂದು ಹೇಳಿದ್ದಾರೆ.

ಇದಾದ ಬಳಿಕ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಕೆಲ ತಿಂಗಳು ವೇತನ ಸಹಿತ ತರಬೇತಿಯನ್ನು ನಾವು ಕೊಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಉದ್ಯೋಗದ ಕೊರತೆ ಎದುರಾದರೆ, ಅವರಿಗೆ ಹಣದ ನೆರವನ್ನು ನೀಡುವ ಮೂಲಕ ಸ್ವಉದ್ಯೋಗಕ್ಕೆ ಪ್ರೇರಣೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತೆ ಮಾತು ಮುಂದುವರೆಸಿದ ಅವರು ಪ್ರಧಾನಿ ಮೋದಿಯಿಂದಾಗಿ ಇವತ್ತು ಯಾರೆಲ್ಲ ನಿರುದ್ಯೋಗದಿಂದ ಬೀದಿಯಲ್ಲಿ ಇನ್ಸ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ನೋಡುತ್ತಾ ಕುಳಿತಿರುತ್ತಾರೋ ಅವರ ಖಾತೆಗೆ ನಾವು ವರ್ಷಕ್ಕೆ 1 ಲಕ್ಷ ರೂ. ತಿಂಗಳಿಗೆ 8500 ರೂ. ಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಇದೇ ವಿಡಿಯೋವನ್ನು ಎಡಿಟ್‌ ಮಾಡಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ಈ ವಿಡಿಯೋ ನೋಡಿ : ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *