Fact Check | ಅದಾನಿ ಬಂದರಿನಿಂದ ಗೋಮಾಂಸ ರಪ್ತು ಮಾಡಲಾಗುತ್ತಿದೆ ಎಂಬುದು ಸುಳ್ಳು

“ಗುಜರಾತಿನ ಅದಾನಿ ಬಂದರಿನಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಗೋಮಾಂಸಕ್ಕಾಗಿ ದನಗಳನ್ನು ಲಾರಿಗಳಲ್ಲಿ ರಪ್ತು ಮಾಡಲಾಗುತ್ತಿದೆ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಅಪಾರ ಸಂಖ್ಯೆಯಲ್ಲಿ ದನ, ನೀರುಕೋಣಗಳನ್ನು ಬೃಹತ್‌ ವಾಹನಗಳಲ್ಲಿ ತುಂಬುವುದನ್ನು ನೋಡಬಹುದಾಗಿದೆ. ಇನ್ನು ಈ ವಿಡಿಯೋ ನೋಡಿದ ಹಲವರು ಇದನ್ನು ರಾಜಕೀಯವಾಗಿ ಬಳಸಿಕೊಂಡರೆ, ಇನ್ನು ಕೆಲವರು ಇದೊಂದು ನಕಲಿ ವಿಡಿಯೋ ಎಂದು  ಪ್ರತಿಪಾದಿಸಿದ್ದಾರೆ.

ಇನ್ನು ಇದೇ ವಿಡಿಯೋವನ್ನು ಹಂಚಿಕೊಂಡಿರುವ ಕಲ್ಯಾಣ್‌ ಸಹಾಯಿ ಮೀನ ಎಂಬುವವರು “ಗುಜರಾತ್‌ನ ಅದಾನಿ ಬಂದರಿನಲ್ಲಿ ಸಾವಿರಾರು ಗೋವುಗಳು ಟ್ರಕ್‌ಗಳಲ್ಲಿ ನಿಂತಿವೆ, ಅದನ್ನು ಅರಬ್ ದೇಶಗಳಿಗೆ ಕರೆದೊಯ್ದು ಅಲ್ಲಿ ವಧೆ ಮಾಡಲಾಗುವುದು,  ಮೋದಿ ಬೆಂಬಲಿಗರೇ ಎಲ್ಲಿದ್ದೀರಾ?” ಎಂದು ಕೇಂದ್ರ ಸರ್ಕಾರದ ವಿರುದ್ಧ ತನ್ನ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸಿದ್ದಾರೆ.

ಇನ್ನು ಅನ್ಸಾರಿ ಫ್ಯಾಮಿಲಿ ಎಂಬ ಎಕ್ಸ್‌ ಖಾತೆಯಿಂದಲೂ ಕೂಡ ಇದೇ ರೀತಿಯ ಆರೋಪದ ಬರಹಗಳೊಂದಿಗೆ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋವನ್ನು ನೋಡಿದ ಬಹುತೇಕರು ಕೇಂದ್ರ ಸರ್ಕಾರ ಮತ್ತು ಅದಾನಿ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಗಿದ್ದರೆ ಈ ವೈರಲ್‌ ವಿಡಿಯೋದಲ್ಲಿ ಹಂಚಿಕೊಳ್ಳುತ್ತಿರುವಂತೆ ಅದಾನಿ ಬಂದಿರಿನಿಂದ ಗೋಮಾಂಸ ರಪ್ತಾಗುತ್ತಿದೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಈ ಕುರಿತು ಸತ್ಯ ಶೋಧನೆಯನ್ನು ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಹೆಚ್ಚಿನ ಮಾಹಿತಿ ಸಿಗದಿದ್ದರೂ ಕೆಲವೊಂದು ವಿಡಿಯೋಗಳನ್ನು ಕಂಡುಕೊಂಡೆವು ಅದರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಿದಾಗ ಈ ವೈರಲ್‌ ವಿಡಿಯೋದ ಅಸಲಿಯತ್ತು ಬಯಲಾಗಿದೆ.

ಅಷ್ಟಕ್ಕೂ ವೈರಲ್‌ ಆಗುತ್ತಿರುವ ವಿಡಿಯೋ ಗುಜರಾತಿನ ಅದಾನಿ ಬಂದರಿನದ್ದು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ವಿಡಿಯೋದಲ್ಲಿನ ವಾಹನಗಳನ್ನು ಗಮನಿಸಿದಾಗ ಭಾರತೀಯ ಸಾರಿಗೆ ವ್ಯವಸ್ಥೆಯಲ್ಲಿ ಇಂತಹ ವಾಹನಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಇನ್ನು ವಿಡಿಯೋವನ್ನು ಈಜಿಪ್ಟ್‌ನ ಡಮಿಯೆಟ್ಟಾ ಮೂಲದ ಮಾಂಸದ ಸಗಟು ವ್ಯಾಪಾರಿ ಹಮೆಡ್ ಎಲ್ಹಗರಿ ಎಂಬ ವ್ಯಕ್ತಿ ಟಿಕ್‌ಟಾಕ್‌ನಲ್ಲಿ 19 ಏಪ್ರಿಲ್‌ 2024ರಂದು ಹಂಚಿಕೊಂಡಿದ್ದಾರೆ.

ಆ ವಿಡಿಯೋದಲ್ಲಿ ತ್ಯಾಗದ ಉತ್ಸವ ಎಂದು ಕರೆಯಲ್ಪಡುವ ಈದ್ ಅಲ್-ಅಧಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಜಾನುವಾರುಗಳ ಸಾಗಾಣೆ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ವೈರಲ್‌ ಆಗುತ್ತಿರುವ ವಿಡಿಯೋಗೂ ಅದಾನಿ ಬಂದರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ..


ಇದನ್ನೂ ಓದಿ : ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು


ಈ ವಿಡಿಯೋ ನೋಡಿ : ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *