Fact Check | ವಿಕಿಲೀಕ್ಸ್ ರಾಹುಲ್ ಗಾಂಧಿ ಅವರ ರಹಸ್ಯ ವಿವಾಹದ ಬಗ್ಗೆ ಫೋಟೋ ಬಿಡುಗಡೆ ಮಾಡಿದೆ ಎಂಬುದು ಸುಳ್ಳು

“ವಿಕಿಲೀಕ್ಸ್ ರಾಹುಲ್ ಗಾಂಧಿ ಅವರ ರಹಸ್ಯ ವಿವಾಹದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಫೋಟೋಗಳನ್ನು ನೋಡಿ ಇವರು ರಾಹುಲ್‌ ಗಾಂಧಿ ಅವರ ಮಡದಿ” ಎಂದು ರಾಹುಲ್‌ ಗಾಂಧಿ ಮಹಿಳೆಯರ ಜೊತೆ ಇರುವ ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋಗಳನ್ನು ನೋಡಿದ ಬಹುತೇಕರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು “ಈಕೆ ರಾಹುಲ್‌ ಗಾಂಧಿಯವರ ರಹಸ್ಯ ಮಡದಿ ಈಕೆ ಕೊಲಂಬಿಯದಾಕೆ, ಇಷ್ಟು ದಿನ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮುಚ್ಚಿಟ್ಟಿದ್ದ ಮಹಾ ರಹಸ್ಯವೊಂದು ಬಯಲಾಗಿದೆ.” ಎಂದು ಬರೆದುಕೊಂಡು ವಿವಿಧ ಕಡೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿಯ ಕೆಲ ನಾಯಕರುಗಳು ಕೂಡ ಇದೇ ಫೋಟೋ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಕೆಲ ವರ್ಷಗಳ ಹಿಂದೆ ಬರೆದುಕೊಂಡಿದ್ದರು.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋಗಳ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ವಿಕಿಲೀಕ್ಸ್‌ ರಾಹುಲ್‌ ಗಾಂಧಿ ಅವರ ಕುರಿತು ಯಾವುದಾದರು ವರದಿಯನ್ನು ಬಿಡುಗಡೆ ಮಾಡಿದೆಯೇ ಎಂದು ಹುಡುಕಲಾಯಿತು. ಆದರೆ ಈ ಕುರಿತು ವಿಕಿಲೀಕ್ಸ್‌ನ ವರದಿಗಳಾಗಲಿ ಅಥವಾ ಮಾಧ್ಯಮ ವರದಿಗಳಾಗಲಿ ಕಂಡು ಬಂದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ರಾಹುಲ್‌ ಗಾಂಧಿ ಅವರ ಜೊತೆಗಿರುವ ಮಹಿಳೆಯರು ಯಾರು ಎಂದು ಪರಿಶೀಲನೆ ನಡೆಸಲು ಹುಡುಕಿದಾಗ ಹಲವು ಮಾಹಿತಿಗಳು ಕಂಡುಬಂದಿದೆ.

ವಿಕಿಲೀಕ್ಸ್‌ ವರದಿಗಳು
ವಿಕಿಲೀಕ್ಸ್‌ ವರದಿಗಳು

ಹೌದು.. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಮೂರೂ ಫೋಟೋಗಳು ಬೇರೆ ಬೇರೆ ಮಹಿಳೆಯರದ್ದಾಗಿದೆ. ಮೊದಲನೇ ಫೋಟೋ 2017ರಲ್ಲಿ ನೆತಾಲಿಯಾ ರಮೋಸ್‌ ಎಂಬ ನಟಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡ ಫೋಟೋವಾಗಿದೆ.

ಎರಡನೇ ಫೋಟೋದಲ್ಲಿ ರಾಹುಲ್‌ ಗಾಂಧಿ ಅವರ ಗೆಳತಿ ವರೋನಿಕ್‌ ಕಾರ್ಟೆಲಿ ಈಕೆ ಸ್ಪ್ಯಾನಿಶ್‌ ಮೂಲದವರು. ಈಕೆ ರಾಹುಲ್‌ ಗಾಂಧಿ ಜೊತೆ ಕೊನೆಯದ್ದಾಗಿ ಕಾಣಿಸಿಕೊಂಡಿದ್ದು 1999ರಲ್ಲಿ. ಈಕೆಯನ್ನು ಹಲವರು ರಾಹುಲ್‌ ಗಾಂಧಿಯವರ ಕೊಲಂಬಿಯಾದ ಗೆಳತಿ ಎಂದು ಕರೆಯುತ್ತಿದ್ದರು. ಬಳಿಕ ರಾಹುಲ್‌ ಗಾಂಧಿ ಅವರೇ ಈಕೆಯ ಮೂಲ ಕೊಲಂಬಿಯವಲ್ಲ ಸ್ಪ್ಯಾನಿಶ್‌ ಎಂದು ಸ್ಪಷ್ಟ ಪಡಿಸಿದ್ದರು. ಈ ಕುರಿತು ವರದಿಯನ್ನು ಇಲ್ಲಿ ನೋಡಬಹುದಾಗಿದೆ

ಇನ್ನು ಮೂರನೇ ಫೋಟೋದಲ್ಲಿರುವ ಮಹಿಳೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಮಡದಿ ಗೌರಿ ಖಾನ್‌ ಆಗಿದ್ದಾರೆ. ಇದು 2008ರ ಐಪಿಎಲ್‌ ಪಂದ್ಯದ ವೇಳೆ ತೆಗೆದ ಫೋಟೋವಾಗಿದೆ. ಇದನ್ನು ಇಂಡಿಯಾ ಟುಡೆ ರಾಹುಲ್‌ ಗಾಂಧಿಯವರ ಫೋಟೋ ಸಂಗ್ರಹದ ವರದಿಯಲ್ಲಿ ಕೂಡ ಪ್ರಕಟಿಸಿದೆ.

ಒಟ್ಟಾರೆಯಾಗಿ ಈ ಮೂರು ಫೋಟೋದಲ್ಲಿರುವ ಮಹಿಳೆಯರು ಬೇರೆ ಬೇರೆಯವರಾಗಿದ್ದು, ಈ ಮೂರು ಫೋಟೋಗಳನ್ನು ಒಂದೇ ರೀತಿಯಲ್ಲಿ ಜೋಡಿಸಿ ರಾಹುಲ್‌ ಗಾಂಧಿ ಅವರ  ವಿರುದ್ಧ ನಕಾರಾತ್ಮಕ ಭಾವನೆ ಜನರಲ್ಲಿ ಮೂಡಿಸಲು ಪ್ರಯತ್ನಿಸಲಾಗಿದೆ. ಆದರೆ ಮೂಲ ಫೋಟೋಗಳೇ ವೈರಲ್‌ ಪೋಸ್ಟ್‌ಗಳಲ್ಲಿನ ಪ್ರತಿಪಾದನೆ ಸುಳ್ಳು ಎಂಬುದನ್ನು ಸಾಬೀತು ಪಡಿಸಿದೆ.


ಇದನ್ನೂ ಓದಿ : ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು


ಈ ವಿಡಿಯೋ ನೋಡಿ : ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *