ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ಪೊಲೀಸರಿಗೆ ರಕ್ಷಣೆಯೇ ಇಲ್ಲ ಎಂಬ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರ ಗಜೇಂದ್ರ ಸಿಂಗ್ ಎಂಬಾತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ “ಇದು ರಾಜಸ್ಥಾನದ ಕೋಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಿಹಾದಿಗಳಿಂದ ನಡೆದ ಘಟನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನೋಡಿ ಪೊಲೀಸರೇ ಜಿಹಾದಿಗಳಿಂದ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ. ಇನ್ನು ಸಾಮಾನ್ಯ ಹಿಂದುಗಳ ಪರಿಸ್ಥಿತಿ ಏನಾಗಬಹುದು. ಈ ದೃಶ್ಯಗಳು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಂಡು ಬಂದರೆ ಆಶ್ಚರ್ಯವಿಲ್ಲ” ಎಂದು ಉಲ್ಲೇಖಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ.
ಆ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿರುವ ಏನ್‌ಸುದ್ದಿ.ಕಾಂ ಈ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆಯನ್ನ ಬಯಲಿಗೆಳೆದಿದೆ. ಈ ಫ್ಯಾಕ್ಟ್‌ಚೆಕ್‌ನಲ್ಲಿ ಉಲ್ಲೇಖಿಸಿರುವಂತೆ, ಏಪ್ರಿಲ್ 2023ರಲ್ಲಿ ಪಶ್ಚಿಮ ಬಂಗಾಳದ ಕಲಿಯಾಗಂಜ್‌ನಲ್ಲಿ ಅಪ್ರಾಪ್ತ ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ನಂತರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಪೊಲೀಸ್ ಸಿಬ್ಬಂದಿ ಬಾಲಕಿಯ ಮೃತ ದೇಹವನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಪೊಲೀಸರ ಈ ಕೃತ್ಯಕ್ಕೆ ಅಕ್ರೋಶ ವ್ಯಕ್ತ ಪಡಿಸಿದ ಜನ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಪ.ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನಂತರ ಸ್ಥಳೀಯರಿಗೆ ಸಂತ್ರಸ್ತೆಯ ಶವ ಪತ್ತೆಯಾಗಿತ್ತು. ಇನ್ನು ಈ ಪ್ರಕರಣದ ಕುರಿತು ಅಂದೇ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ
ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸರು ಅಪ್ರಾಪ್ತ ಬುಡಕಟ್ಟು ಬಾಲಕಿಯ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ, ರಾಯ್‌ಗಂಜ್ ಪಿಡಿ ಎಸ್ಪಿ ಸನಾ ಅಖ್ತರ್ ಬಾಲಕಿಯ ಶವವನ್ನು ಬೀದಿಯಲ್ಲಿ ಎಳೆದಿದ್ದಕ್ಕಾಗಿ ನಾಲ್ವರು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಎಎಸ್‌ಐ) ಅಮಾನತುಗೊಳಿಸಿದರು ಎಂದು ತಿಳಿಸಿದ್ದರು.
ಒಟ್ಟಾರೆಯಾಗಿ ಪೊಲೀಸರ ಮೇಲಿನ ಹಲ್ಲೆಯ ಪ್ರಕರಣ ಪ.ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ನಡೆದಿದ್ದು ಮತ್ತು ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುವುದು ಫ್ಯಾಕ್ಟ್‌ಚೆಕ್‌ನ ನಂತರ ಸ್ಫಷ್ಟವಾಗಿದೆ.
ಇದನ್ನೂ ಓದಿ : ಕರ್ನಾಟಕದ ರಾಮನವಮಿಯ ತಿರುಚಿದ ವಿಡಿಯೋವನ್ನು ಉಜ್ಜೈನಿಯದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಈ ವಿಡಿಯೋ ನೋಡಿ : ಹಮಾಸ್ 5 ಲಕ್ಷ, ನಾವು 25 ಕೋಟಿ – ಫೇಕ್ ನ್ಯೂಸ್ ಪ್ರಕಟಿಸಿದ ಸುವರ್ಣ ನ್ಯೂಸ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.