Fact Check | ED ಇಂದ ಬಂಧಿಸಲ್ಪಟ್ಟ ನಂತರ ಅರವಿಂದ ಕೇಜ್ರಿವಾಲ್ ತಮ್ಮ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ ಎಂಬ ಫೋಟೋ ನಕಲಿ

“ಈ ಫೋಟೋ ನೋಡಿ ಅರವಿಂದ್ ಕೇಜ್ರಿವಾಲ್ ಅವರು ED ಯಿಂದ ಬಂಧಿಸಲ್ಪಟ್ಟ ನಂತರ ತಾವು ಧರಿಸಿದ ಫ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ.”ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಬಿಜೆಪಿ ಬೆಂಬಲಿಗರು ಹಾಗೂ ಬಲಪಂಥೀಯ ಸಂಘಟನೆಯ ಕೆಲ ಮುಖಂಡರುಗಳು ಕೂಡ ಹಂಚಿಕೊಳ್ಳುತ್ತಿದ್ದಾರೆ.

ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ
ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಗುತ್ತಿರುವ ಪೋಸ್ಟ್‌ನಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ನಿಂದಿಸಲಾಗುತ್ತಿದೆ. ಸಾಕಷ್ಟು ಮಂದಿ ಕೋರ್ಟ್‌ ತೀರ್ಪು ಬರುವ ಮುನ್ನವೇ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಅಪರಾಧಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುವ ಕೆಲಸಕ್ಕೆ ಕೂಡ ಮುಂದಾಗುತ್ತಿದ್ದಾರೆ. ಆ ಮೂಲಕ ದೆಹಲಿ ಸರ್ಕಾರ ಮತ್ತು ಅರವಿಂದ್‌ ಕೇಜ್ರಿವಾಲ್‌ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ವೈರಲ್‌ ಆಗುತ್ತಿರುವ ಪೋಸ್ಟ್‌ ಅಸಲಿಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡ ಮೊದಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಆದರೆ ಈ ಫೋಟೋಗೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬಳಿಕ ಇದೇ ಫೋಟೋವನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿನ ಹುಡುಕಾಟ ನಡೆಸಿದಾಗ ಈ ಫೋಟೋಗೆ ಹೊಲಿಕೆಯಾಗುವ ಹಲವು ಫೋಟೋಗಳು ಕಂಡುಬಂದವು.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ಹಲವು ಫೋಟೋಗಳು
ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ಹಲವು ಫೋಟೋಗಳು

ಅಸಲಿಗೆ ಇದೇ ವೈರಲ್‌ ಪೋಟೊಗೆ ಹೋಲಿಕೆಯಾಗುವ ಮತ್ತೊಂದು ಫೋಟೊವನ್ನು ಪ್ರೋಕೇರಳ ಎಂಬ ವೆಬ್‌ತಾಣವು 6 ಜೂನ್ 2022 ರಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಗುಜರಾತ್‌ನ ಅಹಮದಾಬಾದ್ ನಗರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆಗಮಿಸಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ ಮತ್ತು ಈ ಫೋಟೋದೊಂದಿಗೆ ಕಿರು ಮಾಹಿತಿಯನ್ನ ಕೂಡ ಇದೇ ವೆಬ್‌ಸೈಟ್‌ ನೀಡಿದೆ.

ಪ್ರೊಕೇರಳ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾದ ಮೂಲ ಫೋಟೋ
ಪ್ರೊಕೇರಳ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾದ ಮೂಲ ಫೋಟೋ

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 6 ಜೂನ್‌ 2022ರಲ್ಲಿ ” ದೆಹಲಿ ಸಿಎಂ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮೆಹ್ಸಾನಾದಲ್ಲಿ ‘ತಿರಂಗಾ ಯಾತ್ರೆ’ ದ್ವಜ ಅವರೋಹಣ ಮಾಡಲಿದ್ದಾರೆ” ಎಂಬ ಶೀರ್ಷಿಕೆಯಲ್ಲಿ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕೂಡ ವೈರಲ್‌ ಆಗಿರುವ ಫೋಟೋದಲ್ಲಿನ ಉಡುಪುಗಳನ್ನೇ ಧರಿಸಿದ್ದಾರೆ.

ಇದೀಗ ಇದೇ ಕಾರ್ಯಕ್ರಮದಲ್ಲಿನ ಅರವಿಂದ್‌ ಕೇಜ್ರಿವಾಲ್‌ ಅವರ ಫೋಟೋವನ್ನು ಬಳಸಿಕೊಂಡಿರುವ ಕೆಲ ಕಿಡಿಗೇಡಿಗಳು ಫೋಟೋವನ್ನು ಎಡಿಟ್‌ ಮಾಡಿ ಸುಳ್ಳು ಮಾಹಿತಿಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ಈ ವಿಡಿಯೋ ನೋಡಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *