Fact Check | ರಾಹುಲ್‌ ಗಾಂಧಿ ಚುನಾವಣ ಪ್ರಚಾರದಲ್ಲಿ ಕೇವಲ ದೋಸೆಯ ಬಗ್ಗೆ ಮಾತನಾಡಿದ್ದಾರೆ ಎಂಬುದು ಸುಳ್ಳು

“ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರು ಬರೀ ದೋಸೆಗಳ ಬಗ್ಗೆ ಮಾತನಾಡಿದ್ದಾರೆ. ರಾಹುಲ್‌ ಗಾಂಧಿ ಅಂತವರನ್ನು ನೀವು ಚುನಾವಣೆಗೆ ಕರೆದುಕೊಂಡು ಬಂದರೆ ಇವುಗಳನ್ನು ಕೇಳಬೇಕಾಗುತ್ತದೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಇನ್ನು ವೈರಲ್‌ ವಿಡಿಯೋದಲ್ಲಿ ಕೂಡ ರಾಹುಲ್‌ ಗಾಂಧಿ ಮಾತನಾಡುವಾಗ ” ನೀವು ದೋಸೆಯನ್ನು ಇಷ್ಟ ಪಡುತ್ತೀರಿ, ತಮಿಳುನಾಡಿಗೆ ಬಂದಾಗ ನನಗೆ ದೊಸೆಗಳು ಇಷ್ಟವೆಂದು ಹೇಳುತ್ತೀರಿ, ನೀವು ಆ ವೇಳೆ ವಡೆಯನ್ನೂ ಸೇವಿಸಬಹುದು, ಮತ್ತೆ ದೆಹಲಿಗೆ ಹೋದ ಮೇಲೆ ದೋಸೆ ಇಷ್ಟ ಎಂದು ಹೇಳುತ್ತೀರಿ” ಎಂಬ ತರ್ಕವಿಲ್ಲದ ಮಾತಿನ ವಿಡಿಯೋ ಕಾಣಿಸುತ್ತದೆ. ಈ ವಿಡಿಯೋ ನೋಡಿದವರು ರಾಹುಲ್‌ ಗಾಂಧಿ ನಿಜವಾಗಿಯೂ ಇದೇ ರೀತಿಯಾದ ಹೇಳಿಕೆಯನ್ನು ನೀಡಿದ್ದಾರೆ ಎಂದು ಭಾವಿಸುವಲ್ಲಿ ಅನುಮಾನವಿಲ್ಲ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವನ್ನು ಮೋದಲು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿತು. ಈ ವೇಳೆ ರಾಹುಲ್‌ ಗಾಂಧಿ ಅವರ ಪ್ರತೀ ಮಾತಿನ ಮಧ್ಯೆ ವಿಡಿಯೋದಲ್ಲಿ ಕೆಲವೊಂದು ಸಣ್ಣ ಪ್ರಮಾಣದ ಬದಲಾವಣೆ ಕೂಡ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿದಾಗ ವೈರಲ್‌ ಆಗುತ್ತಿರುವ ವಿಡಿಯೋದ ಮೂಲ ಆವೃತ್ತಿ ಮತ್ತು ಪೂರ್ಣ ವಿಡಿಯೋ ಪತ್ತೆಯಾಗಿದೆ

ಈ ವಿಡಿಯೋವನ್ನು ರಾಹುಲ್‌ ಗಾಂಧಿ ಅವರ ಅಧಿಕೃತ ಯೂಟ್ಯುಬ್‌ ಚಾನಲ್‌ನಲ್ಲಿ 12 ಏಪ್ರಿಲ್‌ 2024 ರಂದು Lok Sabha 2024 Campaign | Public Meeting | Coimbatore, Tamil Nadu ಎಂಬ ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋವನ್ನು ರಾಹುಲ್‌ ಗಾಂಧಿ ಅವರು ಲೋಕಸಭೆ ಚುನಾವಣೆಗಾಗಿ ಕೊಯಮತ್ತೂರಿನಲ್ಲಿ ನಡೆದ ಭಾಷಣದಲ್ಲಿ ಮಾತನಾಡಿದ ವಿಚಾರವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.

ಇನ್ನು ಪೂರ್ಣ ವಿಡಿಯೋವನ್ನು ಗಮನಿಸಿದಾಗ ವೈರಲ್‌ ವಿಡಿಯೋ ಎಡಿಟ್‌ ಮಾಡಲಾಗಿದೆ ಎಂಬುದು ತಿಳಿದು ಬಂದಿದ್ದು, ಪೂರ್ಣ ಭಾಷಣದಲ್ಲಿ, ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ಭಾಷಾ ನೀತಿಯ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದು. ಆ ಕುರಿತು ಉದಾಹರಣೆ ಕೊಡಲು “ಪ್ರಧಾನಿ ಮೋದಿ ತಮಿಳು ನಾಡಿಗೆ ಬಂದಾಗ ನನಗೆ ಇಲ್ಲಿನ ದೋಸೆ ಇಷ್ಟ ಎಂದು ಹೇಳುತ್ತಾರೆ. ದೆಹಲಿಗೆ ಹೋದಾಗ ಒಂದು ಭಾಷೆ, ಒಂದು ರಾಷ್ಟ್ರ ಎಂದು ತಮಿಳಿಗರನ್ನು ಅವಮಾನಿಸುತ್ತಾರೆ. ಇದು ಕೇಂದ್ರ ಸರ್ಕಾರದ ಇಬ್ಬಗೆಯ ನೀತಿ” ಎಂದು ದೋಸೆಯ ಉದಾಹರಣೆಯನ್ನು ಕೊಟ್ಟಿದ್ದಾರೆ. ಆದರೆ ಈ ಹೇಳಿಕೆಗಳನ್ನು ಎಡಿಟ್‌ ಮೂಲಕ ತೆಗೆದು ಹಾಕಲಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ರಾಹುಲ್‌ ಗಾಂಧಿ ಅವರ ಪೂರ್ಣ ಭಾಷಣವನ್ನು ಬೇಕಂತಲೇ ತಿರುಚಿ, ರಾಹುಲ್‌ ಗಾಂಧಿ ಮುಟ್ಟಾಳ ಎಂಬಂತೆ ಬಿಂಬಿಸುವುದರ ಜೊತೆಗೆ ರಾಹುಲ್‌ ಗಾಂಧಿ ಅವರ ಅವಹೇಳನ ಮಾಡಿವ ಉದ್ದೇಶದಿಂದ ಕಿಡಿಗೇಡಿಗಳು ಈ ವಿಡಿಯೋವನ್ನು ಎಡಿಟ್‌ ಮಾಡಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ : ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಅಲ್ಪಸಂಖ್ಯಾರತನ್ನು ಓಲೈಸಲು ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ : ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಅಲ್ಪಸಂಖ್ಯಾರತನ್ನು ಓಲೈಸಲು ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *