Fact Check | ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂದು ರಾಹುಲ್ ಗಾಂಧಿ ಹೇಳಿಲ್ಲ

“ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾಗುತ್ತಾರೆ. ನಾನೇ ನಿಮ್ಮ ಮುಂದೆ ಮೊದಲು ಸತ್ಯವನ್ನು ಹೇಳುತ್ತಿದ್ದೇನೆ. 4 ಜೂನ್ 2024 ರಂದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ನಾವು ಮತ್ತೆ ಮೋದಿ ಅವರು ಪ್ರಧಾನಿಯಾಗಲು ಕಾರ್ಯನಿರ್ವಹಿಸಬೇಕಾಗಿದೆ. ನೀವೇ ನೋಡಬಹುದು ನಮ್ಮ ಇಂಡಿಯಾ ಮೈತ್ರಿಕೂಟ ಈ ಬಾರಿ ಉತ್ತರಪ್ರದೇಶದಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ.” ಎಂದು ರಾಹುಲ್ ಗಾಂಧಿಯವರೇ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಒಂದು ವೈರಲಾಗಿದೆ

ಈ ವಿಡಿಯೋದಲ್ಲಿನ ಹೇಳಿಕೆಗಳು ರಾಹುಲ್ ಗಾಂಧಿಯವರ ಮಾತುಗಳೇ ಆಗಿದೆ. ಆದರೆ ವಿಡಿಯೋದಲ್ಲಿ ಕೆಲವೊಂದು ಲೋಪಗಳು ಕೂಡ ಕಂಡು ಬಂದಿದೆ. ಹಾಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಸತ್ಯಾಸತ್ಯತೆ ಕುರಿತು ಸಂಪೂರ್ಣವಾಗಿ ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಕನ್ನಡ ಫ್ಯಾಟ್ ಚೆಕ್ ತಂಡ ಪರಿಶೀಲನೆ ನಡೆಸಿದ್ದು, ವಿಡಿಯೋದ ವಿವಿಧ ಕೀ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 10 ಮೇ 2024ರಂದು ಇಂಡಿಯಾ ಮೈತ್ರಿಕೂಟದ ಸಮಾವೇಶದ ನೇರ ಪ್ರಸಾರ ವಿಡಿಯೋ ಹಂಚಿಕೊಂಡಿರುವುದು ಕಂಡುಬಂದಿದೆ.

ಈ ವಿಡಿಯೋದಲ್ಲಿ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ರಾಹುಲ್ ಗಾಂಧಿಯವರಿಗೆ ಮುನ್ನ ಮಾತನಾಡಿರುವುದು ಕಂಡು ಬಂದಿದೆ. ಈ ವಿಡಿಯೋದ 43 ನಿಮಿಷ 55 ಸೆಕೆಂಡ್‌ ಟೈಮ್ ಸ್ಟ್ಯಾಂಪ್ ನಲ್ಲಿ ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ನೋಡಬಹುದಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕೆಲವೊಂದು ಹೇಳಿಕೆಗಳು 46 ನಿಮಿಷದ ಟೈಮ್ ಸ್ಟ್ಯಾಂಪ್‌ನಲ್ಲಿ ಕಂಡು ಬಂದಿದೆ.

ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯವರು “ನಾನು ನಿಮಗೆ ಮುಂಚಿತವಾಗಿಯೇ ಸತ್ಯವನ್ನು ಹೇಳುತ್ತಿದ್ದೇನೆ. 4 ಜೂನ್ 2024 ರಂದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಉಳಿದಿರುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ. ನಾವು ಪ್ರಧಾನಿ ಸ್ಥಾನದಿಂದ ನರೇಂದ್ರ ಮೋದಿಯವರನ್ನ ಇಳಿಸಲು ಕಾರ್ಯನಿರ್ವಹಿಸಬೇಕಾಗಿದೆ. ನೀವೇ ನೋಡಬಹುದು ಉತ್ತರ ಪ್ರದೇಶದಲ್ಲಿ ನಮ್ಮ ಇಂಡಿಯಾ ಮೈತ್ರಿಕೂಟವು 50 ಕ್ಕಿಂತ ಕಡಿಮೆ ಸ್ಥಾನವನ್ನು ಪಡೆಯುವುದಿಲ್ಲ.” ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಮೂಲ ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಹರಡುತ್ತಿರುವುದನ್ನ ಗಮನಿಸಿರುವ ಕಾಂಗ್ರೆಸ್ ಪಕ್ಷ, ಸುಳ್ಳಿನ ವಿಡಿಯೋ ಯಾವುದು ಮತ್ತು ಸತ್ಯದ ವಿಡಿಯೋ ಯಾವುದು ಎಂಬುದನ್ನ ಜನರ ಮುಂದೆ ತಮ್ಮ ಅಧಿಕೃತ ಏಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದೇ ವಿಡಿಯೋಗೆ ರಿಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸುಳ್ಳು ಸುದ್ದಿಯನ್ನು ಹರಡಿದ ಬಿಜೆಪಿಯ ಪಕ್ಷದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ತಮ್ಮ ಟ್ವೀಟ್ ನಲ್ಲಿ “ಮತ್ತೊಮ್ಮೆ ನಾನು ಹೇಳುತ್ತಿದ್ದೇನೆ ಜೂನ್ 4ರ ನಂತರ ಪ್ರಧಾನಿಯಾಗಿ ಮೋದಿ ಅವರು ಮುಂದುವರೆಯುವುದಿಲ್ಲ. ಆಗ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರವನ್ನು ಸ್ಥಾಪಿಸಲಿದೆ.” ಎಂದು ಬರೆದುಕೊಂಡಿದ್ದಾರೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಹುಲ್ ಗಾಂಧಿಯವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿಯವರೇ ಪ್ರಧಾನಿಯಾಗಿ ಉಳಿಯಲ್ಲಿದ್ದಾರೆ. ಮತ್ತು ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಮತ್ತು ವೈರಲ್ ವಿಡಿಯೋ ಎಡಿಟ್‌ ಮಾಡಿ ಮೂಲ ವಿಡಿಯೋವನ್ನು ತಿರುಚಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.


ಇದನ್ನೂ ಓದಿ : ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ವಿಡಿಯೋ ನೋಡಿ : ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *