“ಕಾಂಗ್ರೆಸ್ ಸತ್ತಿದೆ ಎಂದು ಖರ್ಗೆ ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ನೋಡಿ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.. ಈ ವಿಡಿಯೋ ತುಣುಕಿನಲ್ಲಿ, ಖರ್ಗೆ ಅವರು “ಕಾಂಗ್ರೆಸ್ ಮುಗಿದಿದೆ ಮತ್ತು ನೀವು ಈಗ ಎಲ್ಲಿಯೂ ಕಾಂಗ್ರೆಸ್ ಅನ್ನು ನೋಡಲು ಸಾಧ್ಯವಾಗುವುದಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳುವುದನ್ನು ನೋಡಬಹುದಾಗಿದೆ.
ಈ ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಮಾತನಾಡಿರುವುದರಿಂದ ಸಾಕಷ್ಟು ಮಂದಿ ಇದು ನಿಜವಾದ ವಿಡಿಯೋ ಎಂದು ಭಾವಿಸಿ ಶೇರ್ ಕೂಡ ಮಾಡುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು AICC ಅಧ್ಯಕ್ಷರಾಗಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಅವರನ್ನೇ ಪ್ರಧಾನಿಯಾಗಿ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಖರ್ಗೆಯವರು ಈ ರೀತಿ ಮಾತನಾಡಿದ್ದಾರೆ ಎಂಬುದು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಹಾಗಾಗಿ ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಕೀ ಫ್ರೇಮ್ ಅನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿತ್ತು. ಈ ವೇಳೆ 3 ಮೇ 2024ರಂದು ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ರ್ಯಾಲಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನಸಾಮಾನ್ಯರನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ವಿಡಿಯೋ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಯೂಟ್ಯುಬ್ ಚಾನಲ್‌ನಲ್ಲಿ ಕಂಡು ಬಂದಿದೆ.
ಈ ವಿಡಿಯೋದ 12:03 ಟೈಮ್ ಸ್ಟ್ಯಾಂಪ್‌ನಲ್ಲಿ “ಅಹಮದಾಬಾದ್ ಅಪಾರ ಐತಿಹಾಸಿಕ ಪ್ರಾಮುಖ್ಯತೆಯ ನಗರ. ಇದು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಮತ್ತು ದಾದಾಭಾಯಿ ನೌರೋಜಿಯಂತಹ ನಾಯಕರ ಜನ್ಮಸ್ಥಳವಾಗಿದೆ. ಅವರು ಗುಜರಾತ್‌ನ ಪ್ರಾಮುಖ್ಯತೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಗಾಂಧೀಜಿ, ಸರ್ದಾರ್ ಪಟೇಲ್, ಭೋಲಾಭಾಯಿ ದೇಸಾಯಿ ಮತ್ತು ವಿಠ್ಠಲಭಾಯ್ ಪಟೇಲ್ ಅವರಂತಹ ಮೇರು ವ್ಯಕ್ತಿಗಳು, ನಮ್ಮ ಲೋಕಸಭೆಯ ಮೊದಲ ಸ್ಪೀಕರ್ ಮಾಲ್ವಂಕರ್ ಜಿ ಮತ್ತು ಇತರ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ನಮ್ಮ ರಾಷ್ಟ್ರದ ಅಡಿಪಾಯವನ್ನು ಹಾಕಿದರು. ಇವರಲ್ಲಿ, ನಮ್ಮ ಕಾಂಗ್ರೆಸ್ ಪಕ್ಷದ ಮೂವರು ಅಧ್ಯಕ್ಷರು-ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ ಮತ್ತು ಯುಎನ್ ಧೇಬರ್-ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಿರ್ದಿಷ್ಟವಾಗಿ ಅಹಮದಾಬಾದ್‌ನಲ್ಲಿ ಈ ಬಲವಾದ ಅಡಿಪಾಯವನ್ನು ಯಾರಿಂದಲೂ ಕೆಡವಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಗಿದು ಹೋಗಿದೆ, ಸತ್ತು ಹೋಗಿದೆ ಎಂದು ಕೆಲವರು ಹೇಳುತ್ತಾರೆ. ಅಹಮದಾಬಾದ್ ಮಹಾತ್ಮಾ ಗಾಂಧೀಜಿಯವರ ಪವಿತ್ರ ಸ್ಥಳ ಎಂಬುದನ್ನು ನೆನಪಿಟ್ಟುಕೊಳ್ಳಲು ನಾನು ಈ ಹೇಳಿಕೆಗಳನ್ನು ನೀಡುವವರಿಗೆ ಕೇಳುತ್ತೇನೆ. ಆಶ್ಚರ್ಯವೆಂದರೆ, ಗಾಂಧೀಜಿಯವರ ತತ್ವಗಳನ್ನು ನಾಶಮಾಡಲು ಬಯಸುವವರು ಇದೇ ಸ್ಥಳದಿಂದಲೇ ಬಂದಿದ್ದಾರೆ” ಎಂದು ಹೇಳಿಕೆಯನ್ನು ನೀಡಿದ್ದಾರೆ.
ಈ ವಿಡಿಯೋದ ಧೀರ್ಘ ಆವೃತ್ತಿಯಲ್ಲಿ ಖರ್ಗೆ ಅವರ ಭಾಷಣ ಸ್ಪಷ್ಟವಾಗಿದೆ. ಆದರೆ ವೈರಲ್ ವಿಡಿಯೋದಲ್ಲಿ ಕಿಡಿಗೇಡಿಗಳು 14:34 ನಿಂದ 14:47 ರವರೆಗೆ ಮಾತ್ರ ಕಟ್ ಮಾಡಿ ಎಡಿಟ್ ಮಾಡಿದ್ದು ಜನರಲ್ಲಿ ಸುಳ್ಳು ಅಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಖಿಲ ಭಾರತ ಕಾಂಗ್ರಸ್ ಪಕ್ಷ ಈ ವಿಡಿಯೋವನ್ನು ಹಲವು ಸುಳ್ಳುಗಳಿಂದ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಒಟ್ಟಾರೆಯಾಗಿ ಅಸಲಿ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿದಾಗ ವೈರಲ್ ಆಗಿರುವ ವಿಡಿಯೋ ಎಡಿಟೆಡ್ ಎಂಬುದು ಸ್ಪಷ್ಟವಾಗಿದೆ. ಮತ್ತು ಆಯ್ದ ಕೆಲ ತುಣುಕುಗಳನ್ನು ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ಸಿಗರೇ ಮಾತನಾಡುತ್ತಿದ್ದಾರೆ ಎಂದು ಬಿಂಬಿಸಲು ಈ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿ
ಇದನ್ನೂ ಓದಿ : ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.